ಬೆಂಗಳೂರು: ವಿದೇಶಗಳಲ್ಲಿರುವ ಕಪ್ಪು ಹಣ ತರುವ ಭರವಸೆ ಮರೆತಿರುವ ಪ್ರಧಾನಿ ನರೇಂದ್ರ ಮೋದಿ ಮೋಸಗಾರ ಎಂದು ಕಿಡಿಕಾರಿದ ಕೇಂದ್ರದ ಮಾಜಿ ಸಚಿವ ಹಾಗೂ ಸುಪ್ರೀಂಕೋರ್ಟ್ ಹಿರಿಯ ವಕೀಲ ರಾಂ ಜೇಠ್ಮಲಾನಿ, ಮೋದಿಯ ಮೋಡಿ ಮಾತುಗಳಿಗೆ ಕರ್ನಾಟಕದ ಜನತೆ ಮರುಳಾಗಬಾರದು ಎಂದು ಹೇಳಿದರು.
ಪ್ರಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ “ಮಾತು ಮಂಥನ’ ಸಂವಾದದಲ್ಲಿ ಮಾತನಾಡಿದ ಅವರು, ವಿದೇಶಗಳಲ್ಲಿರುವ ಕಪ್ಪುಹಣ ವಾಪಸ್ ತರಲು ಶ್ರಮಿಸಿರುವ ನಾನು, ಇದೇ ಕಾರ್ಯವನ್ನು ಮಾಡುತ್ತೇನೆ ಎಂದು ಹೇಳಿದ್ದರಿಂದ ಮೋದಿ ಪ್ರಧಾನಿಯಾಗಲಿ ಎಂದು ಹೇಳಿ ಮೂರ್ಖನಾದೆ. ಆದರೆ ಮೋದಿ ಓರ್ವ ಮೋಸಗಾರ, ಇಡೀ ದೇಶವನ್ನು ವಂಚಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಮಾಡಿರುವ ಮೋಸದ ಬಗ್ಗೆ ಜೀವನದ ಕಡೆಯ ಕ್ಷಣದವರೆಗೂ ಹೋರಾಟ ಮಾಡುತ್ತೇನೆ.ಆತನಿಗೆ ಶಿಕ್ಷೆಯಾಗಲೇ ಬೇಕು ಎಂದು ಆಕ್ರೋಶಭರಿತವಾಗಿ ನುಡಿದ ರಾಂ ಜೆಠ್ಮಲಾನಿ, ಲೋಕಸಭೆ ಚುನಾವಣೆಯ ಪ್ರಣಾಳಿಕೆ ಸಿದ್ಧವಾಗುವ ವೇಳೆ ನನ್ನ ಮನೆಯ ಮುಂದೆ ಇರುತ್ತಿದ್ದ ಬಿಜೆಪಿ ನಾಯಕರು ಕಪ್ಪುಹಣ ವಾಪಸ್ ತರುವುದಾಗಿ ಪ್ರಣಾಳಿಕೆ ಬರೆಸಿಕೊಂಡರು. ಇದೀಗ ಆ ವಿಚಾರದ ಬಗ್ಗೆ ಚಕಾರವೆತ್ತುತ್ತಿಲ್ಲ. ಅಮಿತ್ ಶಾಹಾರಿಕೆ ಉತ್ತರ ನೀಡುತ್ತಾರೆಂದು ವಾಗ್ಧಾಳಿ ನಡೆಸಿದರು.
ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟಾಚಾರ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕೆಲವು ಪ್ರಮುಖ ಪ್ರಕರಣಗಳ ಹಂಚಿಕೆಯಲ್ಲಿ ರಾಜಿಯಾಗುತ್ತಿದ್ದಾರೆಂಬ ಆರೋಪದ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ನ್ಯಾಯಾಂಗ
ವಿಷಯದ ಬಗ್ಗೆ ಮಾತನಾಡಲು ಇದು ವೇದಿಕೆಯಲ್ಲ.ನಾನು ಮೋದಿಯ ಮೋಸವನ್ನು ದೇಶದ ಜನತೆಗೆ ತಿಳಿಸಲು ಬಂದಿದ್ದೇನೆ ಎಂದು ನುಡಿದರು.