ನವದೆಹಲಿ:”ದ ಪಯೋನಿಯರ್’ ಆಂಗ್ಲ ಪತ್ರಿಕೆಯ ನಿವೃತ್ತ ಸಂಪಾದಕ, ರಾಜ್ಯಸಭೆಯ ಮಾಜಿ ಸದಸ್ಯ ಚಂದನ್ ಮಿತ್ರಾ (65) ನಿಧನರಾಗಿದ್ದಾರೆ.
ಅವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಪತ್ನಿ ಶೋಬೂರಿ ಗಾಂಗುಲಿ, ಪುತ್ರರಾದ ಕುಶಾನ್ ಮಿತ್ರಾ ಅವರನ್ನು ಅಗಲಿದ್ದಾರೆ. ಬಿಜೆಪಿ ಸದಸ್ಯರಾಗಿದ್ದ ಅವರು ಮಧ್ಯಪ್ರದೇಶದಿಂದ ಒಂದು ಬಾರಿಗೆ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಕೊನೆಯ ಹಂತದಲ್ಲಿ ಅವರು ಬಿಜೆಪಿ ತ್ಯಜಿಸಿ, ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.
“ದ ಟೈಮ್ಸ್ ಆಫ್ ಇಂಡಿಯಾ’, “ದ ಹಿಂದುಸ್ತಾನ್ ಟೈಮ್ಸ್’ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಅವರು ದೇಶದ ಪ್ರಮುಖ ಪತ್ರಿಕೆಗಳಿಗೆ ರಾಜಕೀಯ ಮತ್ತು ಹಲವು ವಿಚಾರಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದರು. ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ-ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪ್ರಮುಖರು ಮಿತ್ರಾ ನಿಧನದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹುಟ್ಟು ಹಬ್ಬಕ್ಕೆ ಶುಭ ಕೋರಿದ ನೀರಜ್‍ಗೆ ಸುದೀಪ್ ಧನ್ಯವಾದ
“ಚಂದನ್ ಮಿತ್ರಾ ಹೊಂದಿದ್ದ ಅಪಾರ ಜ್ಞಾನ ಮತ್ತು ರಾಜಕೀಯದಲ್ಲಿ ಅವರು ಹೊಂದಿದ್ದ ಮಾನ್ಯತೆಯನ್ನು ಯಾವತ್ತೂ ನೆನಪಿಸಿ ಕೊಳ್ಳಲಾಗುತ್ತದೆ. ಅವರ ನಿಧನದಿಂದ ದುಃಖೀತನಾಗಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.