ಬೆಂಗಳೂರು: “ರಾಜ್ಯದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಳಸುತ್ತಿರುವ ಭಾಷೆ ಪ್ರಧಾನಿ
ಹುದ್ದೆಯ ಘನತೆಯನ್ನೇ ಕಡಿಮೆ ಮಾಡಿದೆ’ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ನಡವಳಿಕೆಯಿಂದ ಪ್ರಧಾನಿ ಕಚೇರಿಯೂ ದುರ್ಬಳಕೆಯಾಗುತ್ತದೆ. ಹಿಂದಿನ ಯಾವ ಪ್ರಧಾನಿಯೂ ಈ ರೀತಿ ನಡೆದು ಕೊಂಡಿಲ್ಲ ಎಂದು ಹೇಳಿದರು.
ಜಿಎಸ್‌ಟಿ ಮತ್ತು ನೋಟು ಅಮಾನ್ಯ ಮೋದಿ ಸರ್ಕಾರದ ಎರಡು ದೊಡ್ಡ ಬ್ಲಿಂಡರ್‌ಗಳು, ಈ ನಿರ್ಧಾರದಿಂದ ದೇಶದ ಆರ್ಥಿಕತೆ ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಹಣ ಅಪನಗದೀಕರಣದಿಂದ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಮುಚ್ಚಿ ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳುವಂತಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗಿದ್ದರೂ ದೇಶದ ಇತಿಹಾಸದಲ್ಲಿಯೇ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಅತಿ ಹೆಚ್ಚಾಗಿದ್ದು, ಇದರಿಂದ ಕೇಂದ್ರ ಸರ್ಕಾರ 10 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ ಎಂದು ಆರೋಪಿಸಿದರು.
ಗೌಡರು ಹಿರಿಯ ರಾಜಕಾರಣಿ: ವಿಧಾನಸಭೆ ಚುನಾವಣೆ ಫಲಿತಾಂಶ ದೇಶದ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಮಾಜಿ ಪ್ರಧಾನಿ ದೇವೇಗೌಡರು ಹಿರಿಯ ರಾಜಕಾರಣಿ ಅವರ ಬಗ್ಗೆ ನನಗೆ ಗೌರವ ಇದೆ. ಅವರೊಂದಿಗೆ ಹೊಂದಾಣಿಕೆ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.