ಮುಂಬೈ: ಪಾಕಿಸ್ತಾನದ ಐಎಸ್ ಐ ನಡೆಸಿದ 26/11 ಮುಂಬೈ ಭಯೋತ್ಪಾದನಾ ದಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಯತ್ನಿಸಲಾಗಿತ್ತು ಎಂಬ ಅಂಶವನ್ನು ಮುಂಬೈ ಮಾಜಿ ಪೊಲೀಸ್ ಕಮಿಷನರ್ ರಾಕೇಶ್ ಮರಿಯಾ ಬಯಲುಗೊಳಿಸಿದ್ದಾರೆ.
ಮಾಜಿ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಅವರು ಬರೆದಿರುವ “ ಲೆಟ್ ಮಿ ಸೇ ಇಟ್ ನೌ” ಎಂಬ ಪುಸ್ತಕದಲ್ಲಿ 26/11ರ ದಾಳಿ ಹಿಂದಿನ ಐಎಸ್ ಐ ಮತ್ತು ಲಷ್ಕರ್ ಎ ತೊಯ್ಬಾ ನಡೆಸಿದ ಸಂಚಿನ ಬಗ್ಗೆ ಬರೆದಿರುವುದಾಗಿ ವರದಿ ತಿಳಿಸಿದೆ.
ಏನದು ಐಎಸ್ ಐ ಸಂಚು?
ಐಎಸ್ ಐ ಸಂಚಿನಂತೆ ಉಗ್ರ ಅಜ್ಮಲ್ ಕಸಬ್ ಮಣಿಕಟ್ಟಿಗೆ ಕೆಂಪು ದಾರವನ್ನು (ಹಿಂದೂ ಧರ್ಮದ ಸಂಕೇತ ಎಂಬಂತೆ) ಕಟ್ಟಿಕೊಂಡಿದ್ದ. ಮತ್ತು ಸಮೀರ್ ದಿನೇಶ್ ಚೌಧರಿ ಹೆಸರಿನ ನಕಲಿ ಗುರುತು ಚೀಟಿ ಹೊಂದಿದ್ದ. ಅಷ್ಟೇ ಅಲ್ಲ ಐಡಿ ಕಾರ್ಡ್ ನಲ್ಲಿ ಹೈದರಾಬಾದ್ ಕಾಲೇಜು ವಿದ್ಯಾರ್ಥಿ ಎಂದು ನಮೂದಿಸಿ, ಬೆಂಗಳೂರಿನ ನಕಲಿ ವಿಳಾಸ ನೀಡಲಾಗಿತ್ತು ಎಂದು ಪುಸ್ತಕದಲ್ಲಿ ರಾಕೇಶ್ ಮರಿಯಾ ವಿವರಿಸಿದ್ದಾರೆ.
“ಒಂದು ವೇಳೆ ಕಸಬ್ ನನ್ನು ಜೀವಂತವಾಗಿ ಸೆರೆ ಹಿಡಿಯದೆ ಇರುತ್ತಿದ್ದರೆ, ಈತ ಹಿಂದೂ ಅಲ್ಲ ಎಂಬ ಸತ್ಯ ಯಾವತ್ತೂ ಬಹಿರಂಗವಾಗುತ್ತಿರಲಿಲ್ಲ. ಈತ ಪಾಕಿಸ್ತಾನದ ಫರಿದ್ ಕೋಟ್ ನಿವಾಸಿಯಾಗಿದ್ದ ಎಂದು ಉಲ್ಲೇಖಿಸಿದ್ದಾರೆ”.