ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿದ್ದ ಮಾಜಿ ಸಂಸದ, ಹಿರಿಯ ರಾಜಕಾರಣಿ ಎಸ್.ಬಿ. ಸಿದ್ನಾಳ(85) ಅವರು ಮಂಗಳವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ವಿಧಿವಶರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಬಿ. ಸಿದ್ನಾಳ ಅವರು ಮನೆಯಲ್ಲಿಯೇ ಇದ್ದರು. ಕೆಲ ದಿನಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಗುರುತಿಸಿಕೊಂಡಿರಲಿಲ್ಲ. ಬೈಲಹೊಂಗಲ ತಾಲೂಕಿನ ಸಾಣೆಕೊಪ್ಪ ಗ್ರಾಮದ ಫಾರ್ಮ್ ಹೌಸ್ ನಲ್ಲಿ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ12ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಸಂಜೆ 5 ಗಂಟೆಯ ಸುಮಾರಿಗೆ ಸಾಣೆಕೊಪ್ಪದ ಹೊಲದಲ್ಲಿಯೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೂಲತಃ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ಎಸ್.ಬಿ.ಸಿದ್ನಾಳ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರಾಗಿದ್ದಾರೆ. ಇವರ ತಂದೆ ಬಸಪ್ಪ ಸಿದ್ನಾಳ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಮೂಲತಃ ಕೃಷಿಕರು ಹಾಗೂ ವಕೀಲರಾಗಿದ್ದ ಎಸ್.ಬಿ. ಸಿದ್ನಾಳ 1978ರಲ್ಲಿ ಬೆಳಗಾವಿಗೆ ಬಂದು 1979ರಲ್ಲಿ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ:ಮೇ 1ರಂದು ಭಾರತಕ್ಕೆ ಮೊದಲ ಹಂತದ ಸ್ಫುಟ್ನಿಕ್-5 ಲಸಿಕೆ ಸರಬರಾಜು: ರಷ್ಯಾ
ಬೆಳಗಾವಿ ಕಾಂಗ್ರೆಸ್ ನಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಎಸ್.ಬಿ.ಸಿದ್ನಾಳ್ ಅವರು ಸತತವಾಗಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಆಪ್ತ ವಲಯದಲ್ಲಿ ಇವರು ಗುರುತಿಸಿಕೊಂಡಿದ್ದರು.