ಬೀದರ್: ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್- 19 ವೈರಸ್ ನಿಯಂತ್ರಣಕ್ಕೆ ತರಬೇಕಾಗಿದ್ದ ಸರ್ಕಾರಕ್ಕೆ ಸೋಂಕು ತಗುಲಿದೆ. ಸಚಿವರುಗಳ ನಡುವೆ ಗೊಂದಲ, ಸಾಮರಸ್ಯ ಇಲ್ಲದೇ ಇರುವುದು ಕೋವಿಡ್ ನಿಯಂತ್ರಣ ತಪ್ಪಲು ಕಾರಣ ಎಂದು ಮಾಜಿ ಸಂಸದ, ಆರೋಗ್ಯ ಹಸ್ತ ಅಧ್ಯಕ್ಷ ಧ್ರುವನಾರಾಯಣ ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆರಂಭದಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿತ್ತು. ಕೇರಳದಲ್ಲಿ ಸೋಂಕು ಸಂಪೂರ್ಣ ಹತೋಟಿಗೆ ಬರುತ್ತಿದೆ. ಇದಕ್ಕೆ ಅಲ್ಲಿನ ಸರ್ಕಾರದ ಆಡಳಿತ ವೈಖರಿಯೇ ಕಾರಣವಾಗಿದ್ದು, ಈ ಬಗ್ಗೆ ವಿಶ್ವಸಂಸ್ಥೆ, ಹೈಕೋರ್ಟ್ ಪ್ರಶಂಸೆಯೂ ವ್ಯಕ್ತಪಡಿಸಿದೆ ಎಂದು ಹೇಳಿದರು.
‘ಆರೋಗ್ಯ ಹಸ್ತ’ ಕ್ಕೆ ಚಾಲನೆ:
ರಾಜ್ಯದಲ್ಲಿ ಕೋವಿಡ್-19 ಬಗ್ಗೆ ಜಾಗೃತಿ ಮತ್ತು ಆರೋಗ್ಯದ ಅರಿವು ಮೂಡಿಸಲು ಕೆಪಿಸಿಸಿಯಿಂದ ‘ಆರೋಗ್ಯ ಹಸ್ತ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ದೇಶದಲ್ಲೇ ಮೊದಲು ರಾಜಕೀಯದ ಪಕ್ಷ ಇದೊಂದು ವಿನೂತನ ಯೋಜನೆ ರೂಪಿಸಿದೆ. ಸುಮಾರು 15 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಕೋವಿಡ್-19 ವಾರಿಯರಸ್ ಗಳಾಗಿ ಇದರಲ್ಲಿ ತೊಡಗಿಸಿಕೊಳ್ಳಲಿದ್ದು, ಪ್ರತಿ ಮನೆ ಮನೆಗೆ ಭೇಟಿ ನೀಡಿ ಜನರ ತಪಾಸಣೆ, ಆರೋಗ್ಯದ ಜಾಗೃತಿ ಮೂಡಿಸುವರು. ಆ ಮೂಲಕ ಸಮುದಾಯ ಹರಡುವಿಕೆಗೆ ಕಡಿವಾಣ ಹಾಕಲು ಪ್ರಯತ್ನಿಸಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕಾಗಿ 320 ವೈದ್ಯರುಗಳು ವಾರಿಯರ್ಸ್ ಗಳಿಗೆ ಅಗತ್ಯ ತರಬೇತಿ ನೀಡಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 40 ಕಿಟ್‌ಗಳನ್ನು ನೀಡಲಾಗುತ್ತಿದ್ದು, ಗ್ರಾ.ಪಂಗಳಿಗೆ ಇಬ್ಬರು ವಾರಿಯರ್ಸ್ ಗಳನ್ನು ನೇಮಕ ಮಾಡಲಾಗಿದೆ. ವಾರಿಯರ್ಸ್ ಗಳ ಸುರಕ್ಷತೆಗಾಗಿ ಒಂದು ಲಕ್ಷ ರೂ.ಗಳ ಗ್ರೂಪ್ ಇನ್ಸುರೆನ್ಸ್ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ 6 ಕೋಟಿ ರೂ. ವೆಚ್ಚ ಆಗಲಿದ್ದು, ಪಕ್ಷದ ಶಾಸಕರು, ಮಾಜಿ ಶಾಸಕರು ದೇಣಿಗೆ ನೀಡಿದ್ದಾರೆ ಎಂದು ಹೇಳಿದರು.