ವಿಜಯಪುರ: ಸರಿಯಾಗಿ ತಿಂಗಳ ಹಿಂದೆ ಕಾಂಗ್ರೆಸ್ ಸೇರಲು ನಿರ್ಧರಿಸಿ ಕೈ ನಾಯಕರನ್ನು ಭೇಟಿ ಮಾಡಿದ್ದ ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ಬುಧವಾರ ಜೆಡಿಎಸ್ ಸೇರ್ಪಡೆ ಆಗಿದ್ದಾರೆ. ಜೊತೆಗೆ ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳುವ ಮೂಲಕ ಘೋಷಿತ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಅವರಿಗೆ ದುಗುಡ ಉಂಟು ಮಾಡಿದ್ದಾರೆ.
ಸಿಂದಗಿ ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಯೋಚಿಸುತ್ತಿರುವ ರವಿಕಾಂತ ಪಾಟೀಲ, ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಫೆ. 24ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಬೇಷರತ್ತಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾಗಿಯೂ ತಿಳಿಸಿದ್ದರು.
ಇದರ ಬೆನ್ನಲ್ಲೇ ಮಾ. 24ರಂದು ದಿಢೀರನೇ ಹೊರೆ ಹೊತ್ತ ಮಹಿಳೆ ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷದ ಧ್ವಜ ಸ್ವೀಕರಿಸಿದ್ದಾರೆ. ಬುಧವಾರ ಸಿಂದಗಿ ಪಟ್ಟಣದಲ್ಲಿ ಜರುಗಿದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರಿಂದ ಪಕ್ಷದ ಧ್ವಜ ಸ್ವೀಕಾರ ಮಾಡುವ ಮೂಲಕ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇಂಡಿ ವಿಧಾನಸಭೆ ಕ್ಷೇತ್ರದಿಂದ ಕ್ಷೇತ್ರದಿಂದ ಪಕ್ಷೇತರ ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿದ್ದ ರವಿಕಾಂತ ಪಾಟೀಲ, 2013ರಲ್ಲಿ ಯಡಿಯೂರಪ್ಪ ನೇತೃತ್ವದ ಕೆಜೆಪಿಯಿಂದ ಇಂಡಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ಯಡಿಯೂರಪ್ಪ ಅವರೊಂದಿಗೆ ಬಿಜೆಪಿಗೆ ಬಂದರೂ 2018ರಲ್ಲಿ ಟಿಕೆಟ್ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.
ಒಂದೂವರೆ ದಶಕದ ಹಿಂದೆ ಪಕ್ಷೇತರರಾಗಿದ್ದರೂ ರಾಜ್ಯದಲ್ಲಿ ಪ್ರಭಾವಿ ಶಾಸಕರಾಗಿ ಗುರುತಿಸಿಕೊಂಡಿದ್ದ ರವಿಕಾಂತ ಪಾಟೀಲ, ಆನಂತರ ಸತತ ಸೋಲಿನ ಸುಳಿಗೆ ಸಿಲುಕಿದ್ದರು. ಹೀಗಾಗಿ ರಾಜಕೀಯ ಪುನರ್ಜನ್ಮಕ್ಕಾಗಿ ರಾಜಕೀಯ ಪಕ್ಷಗಳ ಮೊರೆ ಹೋಗುತ್ತಿರುವ ರವಿಕಾಂತ ಪಾಟೀಲ ತಿಂಗಳ ಹಿಂದಷ್ಟೇ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದರು. ಇದರ ಬೆನ್ನಲ್ಲೇ ಇದೀಗ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದು, ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ರವಿಕಾಂತ ಪಾಟೀಲ ಅವರ ಸೇರ್ಪಡೆಯಿಂದ ಸಿಂದಗಿ ಉಪ ಚುನಾವಣೆ ಕಣ ರಂಗೇರುವ ಮುನ್ಸೂಚನೆ ದೊರಕಿದೆ. ಅವರ ನಿರೀಕ್ಷೆಯಂತೆ ಜೆಡಿಎಸ್ ಟಿಕೆಟ್ ದೊರಕಿದಲ್ಲಿ ಸಿಂದಗಿ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ತೀವ್ರ ಸ್ಪರ್ಧೆಯೊಡ್ಡುವ ಸಾಧ್ಯತೆ ಇದೆ. ಒಂದೊಮ್ಮೆ ಬಿಜೆಪಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದಲ್ಲಿ ಸಿಂದಗಿ ಕ್ಷೇತ್ರ ರಾಜ್ಯದ ಪ್ರತಿಷ್ಠೆಯ ಕ್ಷೇತ್ರವಾಗಿ ಹೊರ ಹೊಮ್ಮುವ ಸಾಧ್ಯತೆ ಇಲ್ಲದಿಲ್ಲ.