ಚನ್ನಪಟ್ಟಣ: ಕ್ಷೇತ್ರದಲ್ಲಿ ಯಾರೇ ಸ್ಪರ್ಧಿಸಿದರೂ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಪಕ್ಷದ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ರಾಜ್ಯದಲ್ಲೂ ಕೂಡ ಜೆಡಿಎಸ್ ಪರವಾದ ಅಲೆ ಇದೆ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಮುಂದಿನ ವಾರದಿಂದ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಬಹಿರಂಗ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ನಿಖೀಲ್ ಕುಮಾರಸ್ವಾಮಿ ಅವರು ಸಹ ಭಾಗವಹಿಸುತ್ತಾರೆ. ಕುಮಾರಸ್ವಾಮಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣದ ಜನತೆ ಮತಹಾಕಿದ್ದರು. ಆದರೆ, ಈಗ ಮತ್ತೂಂದು ಅವಕಾಶ ಬಂದಿರುವುದಕ್ಕೆ ಕ್ಷೇತ್ರದ ಜನರು ಬಹಳ ಸಂತಸವಾಗಿದ್ದಾರೆ.
ಕುಮಾರಸ್ವಾಮಿ ಅವರು ಈ ಮಟ್ಟಕ್ಕೆ ಬೆಳೆಯಬೇಕಾದರೆ ಚನ್ನಪಟ್ಟಣ ಜನರ ಕೊಡುಗೆ ಇದೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಎಂ.ಸಿ.ಅಶ್ವಥ್, ಚನ್ನಪಟ್ಟಣದಲ್ಲಿ ಈ ಬಾರಿ ಜೆಡಿಎಸ್ ಗೆಲುವು ನಿಶ್ಚಿತ. ಜೆಡಿಎಸ್ ಅಭ್ಯರ್ಥಿ ಗೆಲುವನ್ನು ಯಾರಿಂದಲೂ ತಪ್ಪಿಸಲು ಸಾಧ್ಯಲ್ಲ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ 70 ಸಾರಕ್ಕೂ ಹೆಚ್ಚು ಮತಗಳು ಬಂದಿದ್ದವು.
ಜೆಡಿಎಸ್ ಮತಗಳು ಯಾವುದೇ ಕಾರಣಕ್ಕೂ ಬೇರೆ ಕಡೆಗೆ ಹೋಗುವುದಿಲ್ಲ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರನ್ನು ಕ್ಷೇತ್ರದ ಜನರು ಗೆಲ್ಲಿಸಿದರೆ ರಾಜ್ಯದ ಜನರೇ ಚನ್ನಪಟ್ಟಣದ ಕಡೆ ತಿರುಗಿ ನೋಡುತ್ತಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನ ಗೆಲ್ಲಿಸಿದ ಕೀರ್ತಿ ಚನ್ನಪಟ್ಟಣದ ಜನರಿಗೆ ಸಲ್ಲುತ್ತದೆ ಎಂದರು.
ಮಾಜಿ ಶಾಸಕಿ ಅನಿತಾ ಅವರು ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಮುಖಂಡರಾದ ಎಸ್.ಲಿಂಗೇಶ್ ಕುಮಾರ್, ರಾಂಪುರ ರಾಜಣ್ಣ, ಎಂ.ಸಿ.ಕರಿಯಪ್ಪ, ಜಯಪ್ರಕಾಶ್(ಜೆಪಿ), ರೇಖಾ ಉಮಾಶಂಕರ್ ಸೇರಿದಂತೆ ಅನೇಕರಿದ್ದರು.