Advertisement

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

08:36 PM Oct 02, 2024 | Team Udayavani |

ಮಹಾಲಿಂಗಪುರ: ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಶಕ್ತಿ, ಜಾತ್ಯಾತೀತ ಜನನಾಯಕ ಸಿದ್ದರಾಮಯ್ಯನವರು ಮಾತ್ರ ಎರಡು ವಿರೋಧ ಪಕ್ಷಗಳನ್ನು ಏಕಕಾಲಕ್ಕೆ ಎದುರಿಸುವ ಶಕ್ತಿ ಹೊಂದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿರುವ ಮುಡಾ ಕೇಸ್‌ನ್ನು ರಾಜಕೀಯಕ್ಕೆ ಎಳೆದು ತಂದು ಸಿದ್ದರಾಮಯ್ಯನವರ ಜನಪ್ರಿಯತೆ ಮತ್ತು ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ವಿರೋಧ ಪಕ್ಷಗಳು ಮಾಡುತ್ತಿವೆ ಎಂದು ಮಾಜಿ ಸಚಿವೆ, ವಿಪ ಸದಸ್ಯೆ ಡಾ.ಉಮಾಶ್ರೀ ಹೇಳಿದರು.

Advertisement

ಬುಧವಾರ ಪಟ್ಟಣದ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಅವರ ಪತ್ನಿ ಪಾರ್ವತಮ್ಮನವರ ತವರುಮನೆಗೆ ಸಂಬಂಧಿಸಿದ ಆಸ್ತಿಯನ್ನು ಮುಡಾಗೆ ಬಿಟ್ಟು, ಅದಕ್ಕೆ ಪರ್ಯಾಯವಾಗಿ 14 ಸೈಟ್‌ಗಳನ್ನು ಪಡೆದುಕೊಂಡಿದ್ದಾರೆ. ಇದು ಸಿಎಂ ಅವರ ಪಿತ್ರಾರ್ಜಿತ ಆಸ್ತಿಯಲ್ಲ, ಅವರ ಸ್ವಂತ ಆಸ್ತಿಯಲ್ಲ. ಅದಕ್ಕಾಗಿ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಮುಖ್ಯವಾಗಿ ಸಿಎಂ ಪತ್ನಿಯು ಎಂದಿಗೂ ರಾಜಕೀಯ ಮಾಡಿದವರಲ್ಲ. ಅಂತಹ ಹೆಣ್ಣುಮಕ್ಕಳನ್ನು ರಾಜಕೀಯಕ್ಕೆ ಎಳೆದುತಂದು ಆ ಹೆಣ್ಣುಮಗಳಿಗೆ ನೋವು ಉಂಟು ಮಾಡಿ ವಿಪಕ್ಷಗಳು ವಿಕೃತ ಕೆಲಸ ಮಾಡುತ್ತಿವೆ.

ವಿರೋಧ ಪಕ್ಷಗಳಿಗೆ ಪ್ರಶ್ನೆ ಮಾಡುವಂತಹ ಧೀಮಂತ ನಾಯಕ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆ ತರಲು ಯತ್ನಿಸಲಾಗುತ್ತಿದೆ. ಮುಡಾ ಪ್ರಕರಣದಲ್ಲಿ ಸಿಎಂ ಅವರಿಂದ ಯಾವುದೇ ಅವ್ಯವಹಾರ ನಡೆದಿಲ್ಲ. ಕಾಂಗ್ರೆಸ್ ಪಕ್ಷದ ವಿಪ ಸದಸ್ಯರು, ಸಚಿವರು, ಶಾಸಕರು, ಪಕ್ಷದ ಅಪಾರ ಬೆಂಬಲಿಗರು, ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಸಿಎಂ ಅವರೊಂದಿಗೆ ನಿಲ್ಲುತ್ತೇವೆ. 2ಜಿ ಹಗರಣದ ತೀರ್ಪಿನ ಮಾದರಿಯಂತೆ ಮುಡಾ ಕೇಸ್‌ನಿಂದ ಸಿಎಂ ಅವರು ನ್ಯಾಯಾಲಯದಲ್ಲಿ ಆರೋಪ ಮುಕ್ತರಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕುಟುಂಬವೇ ಬೇರೆ, ರಾಜಕಾರಣವೇ ಬೇರೆ. ಪತಿಯ ಗೌರವಕ್ಕಿಂತ ಆಸ್ತಿ ದೊಡ್ಡದಲ್ಲ ಎಂದು ಪಾರ್ವತಮ್ಮ ಮುಡಾಗೆ ಸೈಟ್‌ಗಳನ್ನು ವಾಪಸ್ ಮಾಡಿದ್ದನ್ನು ಸ್ವಾಗತಿಸುತ್ತೇನೆ. ಆದರೆ ಅವರು ಕಳೆದಕೊಂಡ ಭೂಮಿಗೆ ಕಾನೂನು ಪ್ರಕಾರ ಸಂಬಂಧಿಸಿದಷ್ಟು ಸೈಟ್‌ಗಳನ್ನು ಕೊಡಬೇಕು ಅಲ್ವಾ?. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಶಕ್ತಿಯನ್ನು ಕುಗ್ಗಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ರಾಜ್ಯದಲ್ಲಿ ಅಪಾರ ಜನಬೆಂಬಲ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿವೆ ಎಂದು ಆರೋಪಿಸಿದರು.

ವಿಪಕ್ಷಗಳ ಷಡ್ಯಂತ್ರದಿಂದ ಮುಡಾ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಇದೊಂದು ಸುಳ್ಳಿನ ಕಂತೆಯಾಗಿದೆ. ಧೀಮಂತ ನಾಯಕನ ಹೆಸರು ಕೆಡಿಸಿ ರಾಜಕೀಯವಾಗಿ ಒಬ್ಬ ವ್ಯಕ್ತಿ, ಒಂದು ಸರ್ಕಾರ, ಒಂದು ಪಕ್ಷವನ್ನು ನಿರ್ನಾಮ ಮಾಡುವ ಪ್ರಯತ್ನ ನಡೆದಿದೆ. ಅದಕ್ಕೆ ಅವಕಾಶ ನೀಡದಂಡೆ ನಮ್ಮ ಪಕ್ಷದ ಹೈಕಮಾಂಡ್ ಸೇರಿದಂತೆ ನಾವೆಲ್ಲರೂ ಅವರಿಗೆ ಬೆಂಬಲವಾಗಿ ನಿಂತಿದ್ದೇವೆ. ಮುಡಾಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಡೆದ ಸೈಟ್ ಹಂಚಿಕೆಗಳ ಸಮಗ್ರ ತನಿಖೆ ನಡೆಯಲ್ಲಿ. ಅದರಲ್ಲಿ ಇಲ್ಲಿಯವರೆಗೂ ಕಾಲಕಾಲಕ್ಕೆ ಭಾಗಿಯಾದ ಎಲ್ಲಾ ಪಕ್ಷಗಳ ನಾಯಕರ ನಿಜವಾದ ಮುಖವಾಡ ರಾಜ್ಯದ ಜನತೆಗೆ ಗೊತ್ತಾಗಬೇಕು ಎಂದು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next