ಮಂಗಳೂರು: ಶಿಕ್ಷಣದ ಸಂಬಂಧಿಸಿದಂತೆ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ಸರ್ಕಾರ ಈ ವಿಚಾರದಲ್ಲಿ ಬೇಜವಾಬ್ದಾರಿ ತೋರುತ್ತಿದೆ. ಭಯಮುಕ್ತ ವಾತಾವರಣದಲ್ಲಿ ಸರ್ಕಾರ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಬೇಕಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಶಿಕ್ಷಣದ ವಿಚಾರದಲ್ಲಿ ಹೆತ್ತವರು ನೆಮ್ಮದಿಯಿಂದ ಇರುವಂತೆ ಮಾಡುವುದು ಶಿಕ್ಷಣ ಇಲಾಖೆಯ ಕರ್ತವ್ಯ. ಸರ್ಕಾರದ ಸಚಿವರು ಈ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಈ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಗೊಂದಲ ಉಂಟು ಮಾಡುತ್ತಿದ್ದಾರೆ. ಲಾಜಿಕ್ ಇಲ್ಲದೇ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಪರೀಕ್ಷೆಯ ದಿನಾಂಕ ನಿಗದಿ ಮಾಡಲು ಎಷ್ಟು ಗೊಂದಲ ಮಾಡಿದ್ದೀರಿ, ಪರೀಕ್ಷೆಯೇ ಮುಗಿದಿಲ್ಲ, ಆಗಲೇ ಆನ್ ಲೈನ್ ಶಿಕ್ಷಣ ಬೇಕಾ ಬೇಡ್ವಾ ಅನ್ನೊ ಬಗ್ಗೆ ಮಾತನಾಡುತ್ತೀರ ಎಂದು ಪ್ರಶ್ನಿಸಿದರು.
ಐದನೇ ತರಗತಿವರೆಗೂ ಆನ್ ಲೈನ್ ಶಿಕ್ಷಣ ಬೇಡ ಅನ್ನೊದಕ್ಕೆ ನಾನು ಸಮ್ಮತಿಸುತ್ತೇನೆ. ಆದರೆ ಕಾರ್ಪೊರೇಟ್ ಆ್ಯಪ್ ನ್ನು ಯಾಕೆ ಬ್ಯಾನ್ ಮಾಡುವುದಿಲ್ಲ, ಅದರ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದ ಎಲ್ಲಾ ಮಕ್ಕಳಿಗೂ ಸ್ಮಾರ್ಟ್ ಫೋನ್ ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲ. ಮಕ್ಕಳಿಗೆ ಸೈಕಲ್ ಕೊಡುವಂತ ಯೋಜನೆ ಬಿಟ್ಟು, ಬೇರೆ ವ್ಯವಸ್ಥೆಗೆ ಬಳಸಿಕೊಳ್ಳಿ ಎಂದು ಆಗ್ರಹಿಸಿದರು.
ಶಾಲೆಗಳಿಗೆ ಫೀಸ್ ಕಟ್ಟಲು ವಿನಾಯಿತಿ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ಶಾಲಾ ಶುಲ್ಕ ಕಟ್ಟಬೇಡಿ ಎಂದು ಸರ್ಕಾರ ಹೇಳಿದೆ. ಫೀಸ್ ಕಟ್ಟುವವರು ತಯಾರಿದ್ದರೂ ಕೂಡ ಕಟ್ಟಲಿಲ್ಲ. ಹೀಗಾದರೆ ಶಾಲೆಗಳು ಉಳಿಯೋದು ಹೇಗೆ? ಎಷ್ಟೋ ಮ್ಯಾನೇಜ್ಮೆಂಟ್ ಗೆ ಕಟ್ಟಡದ ಬಾಡಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ಶಾಲೆಗಳಲ್ಲಿ ಶಿಕ್ಷಕರು ಕೆಲಸ ಕಳೆದುಕೊಳ್ಳುತ್ತಾರೆ. ಆದ್ದರಿಂದ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿರಹಿತ ಸಾಲ ನೀಡಲಿ. ವಿದ್ಯಾರ್ಥಿಗಳ ಬಗ್ಗೆ ಕೂಡ ಹಾಗೂ ಮ್ಯಾನೆಜ್‌ಮೆಂಟ್ ಬಗ್ಗೆ ಕೂಡ ಸರ್ಕಾರ ಗಮನಹರಿಸಲಿ ಎಂದು ಆಗ್ರಹಿಸಿದರು.