Advertisement

ಮಾಜಿ ಸಚಿವ ಟಿ.ಬಿ.ಜಯಚಂದ್ರ ಈಗ ಜಡ್ಜ್!

09:47 AM Nov 13, 2019 | Lakshmi GovindaRaju |

ಕನ್ನಡ ಚಿತ್ರಗಳಲ್ಲಿ ಈಗಾಗಲೇ ಅನೇಕ ರಾಜಕಾರಣಿಗಳು ಬಣ್ಣ ಹಚ್ಚಿರುವ ಉದಾಹರಣೆಗಳಿವೆ. ಹೀರೋಗಳಾಗಿ ನಟಿಸಿದ್ದವರು ರಾಜಕಾರಣಿಗಳೂ ಆಗಿದ್ದಾರೆ. ರಾಜಕಾರಣಿಗಳಾಗಿ ಗುರುತಿಸಿಕೊಂಡವರು ಕ್ಯಾಮೆರಾ ಮುಂದೆ ನಟಿಸಿದ್ದಾರೆ. ಅಂತಹವರ ಸಾಲಿಗೆ ಈಗ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಸೇರಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ನಟಿಸುವ ಮೂಲಕ ತಮ್ಮ ನಾಲ್ಕು ದಶಕಗಳ ಆಸೆ ಈಡೇರಿಸಿಕೊಂಡಿದ್ದಾರೆ.

Advertisement

ಮೋಹನ್‌ ನಿರ್ದೇಶನದ, ಗಂಗಾಧರ್‌ ನಿರ್ಮಾಣದ “ಜಿಗ್ರಿದೋಸ್ತ್’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಇದೇ ಮೊದಲ ಸಲ ಬಣ್ಣ ಹಚ್ಚಿರುವ ಟಿ.ಬಿ.ಜಯಂದ್ರ ಅವರು, ಚಿತ್ರದಲ್ಲಿ ನ್ಯಾಯಾಧೀಶರಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರ ಕುರಿತು ಸ್ವತಃ ಟಿ.ಬಿ.ಜಯಚಂದ್ರ ಹೇಳುವುದಿಷ್ಟು. “ನಾನು ಮೊದಲ ಸಲ ನಟಿಸಿದ್ದೇನೆ. ಅದಕ್ಕೆ ಕಾರಣ, “ಜಿಗ್ರಿದೋಸ್ತ್’ ಚಿತ್ರದ ನಿರ್ಮಾಪಕರು. ಅವರು ನನ್ನ ಸಂಬಂಧಿ. ಒಮ್ಮೆ ಬಂದು, ನಿಮಗೊಂದು ಪಾತ್ರವಿದೆ.

ಅದನ್ನು ನೀವೇ ಮಾಡಬೇಕು. ಕೇವಲ ಒಂದು ಗಂಟೆ ಬಂದು ಹೋಗಿ ಅಂತ ಹೇಳಿದರು. ಹಾಗಾಗಿ, ನಾನು ಒಪ್ಪಿ ಮಾಡಿದ್ದೇನೆ. ನನಗೂ ಸಿನಿಮಾ ಮೇಲೆ ಪ್ರೀತಿ ಜಾಸ್ತಿ. ನಾನು ಚಿಕ್ಕಂದಿನಿಂದಲೂ ಡಾ.ರಾಜಕುಮಾರ್‌ ಅವರ ಅಭಿಮಾನಿ. ಅವರ ಅನೇಕ ಚಿತ್ರಗಳನ್ನು ಫ‌ಸ್ಟ್‌ ಶೋ ಮತ್ತು ಸೆಕೆಂಡ್‌ ಶೋ ಕಂಟಿನ್ಯೂ ಆಗಿ ನೋಡಿದ ವ್ಯಕ್ತಿ ನಾನು. 27 ವರ್ಷ ವಯಸ್ಸಿನಲ್ಲಿರುವಾಗಲೇ ಶಾಸಕನಾದೆ. ಆಗ ದೇವರಾಜ್‌ ಅರಸ್‌ ಅವರು ಫಿಲ್ಮ್ ಬೋರ್ಡ್‌ನಲ್ಲಿ ಕೆಲಸ ಮಾಡುವ ಅವಕಾಶ ಕೊಟ್ಟರು.

ಆ ಸಂದರ್ಭದಲ್ಲಿ ಸಿನಿಮಾ ಮಾಡುವ ಆಸೆ ಹೆಚ್ಚಾಗಿತ್ತು. ಹಣ ಹಾಕಿ ಸಿನಿಮಾ ಶುರುಮಾಡಿದ್ದೂ ಆಯ್ತು. ಆದರೆ, ಸೆಟ್ಟೇರಲಿಲ್ಲ. ಸಿನಿಮಾ ಮಾಡುವವರಿಗೆ ಸಿನಿಮಾ ಸಹವಾಸ ಮಾಡಬೇಡಿ, ಹಣ ಹಾಕಬೇಡಿ, ಹಾಳಾಗಿ ಹೋಗ್ತೀರ ಅನ್ನುತ್ತಿದ್ದೆ. ಆದರೆ, ಸಿನಿಮಾ ಮೇಲಿನ ಪ್ರೀತಿ ಹಾಗೆಯೇ ಇತ್ತು. ತುಮಕೂರಿನಲ್ಲಿ ಎರಡು ಬಾರಿ ದೊಡ್ಡ ಕಾರ್ಯಕ್ರಮ ನಡೆಸಿ, ಡಾ.ರಾಜಕುಮಾರ್‌ ಅವರನ್ನು ಕರೆಸಿದ್ದು ಮರೆಯದ ಅನುಭವ.

ಭಾರತದ ಯಾವುದೇ ಭಾಷೆಯಲ್ಲೂ ಡಾ.ರಾಜಕುಮಾರ್‌ ಅವರಂತಹ ನಟ ಸಿಗುವುದು ಕಷ್ಟ’ ಎಂದು ಹೇಳಿಕೊಂಡ ಅವರು, “ಜಿಗ್ರಿದೋಸ್ತ್’ ಚಿತ್ರದ ಮೂಲಕ ನನ್ನ 40 ವರ್ಷದ ಕನಸು ಇಂದು ನನಸಾಗಿದೆ. ಹೊಸಬರ ಸಿನಿಮಾ ಇದು. ಎಲ್ಲರ ಪ್ರೋತ್ಸಾಹ ಇರಲಿ. ಇಂದು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಕಾಲವಿಲ್ಲ. ಆದರೂ, ಜನರನ್ನು ಚಿತ್ರಮಂದಿರಕ್ಕೆ ಕರೆತರುವಂತಹ ಚಿತ್ರ ಬರಬೇಕು.

Advertisement

ಸಾಹಿತ್ಯ, ಸಂಸ್ಕೃತಿ ಜೊತೆಗೆ ಮುಂದಿನ ಪೀಳಿಗೆಗೂ ತೋರಿಸುವಂತಹ ಸಿನಿಮಾಗಳು ಬರುತ್ತಿವೆ ಅನ್ನುವುದಾದರೆ, ಅದು ಕನ್ನಡದಲ್ಲಿ ಮಾತ್ರ. ಆನೇಕ ಚಿತ್ರಗಳು ಶುರುವಾಗುತ್ತವೆ. ಆದರೆ, ಸೆಟ್ಟೇರುವುದಿಲ್ಲ. ಸೆಟ್ಟೇರಿದರೂ ಬಿಡುಗಡೆ ಆಗುವುದು ಕಷ್ಟ. ಆದರೆ, “ಜಿಗ್ರಿದೋಸ್ತ್’ ಸಿನಿಮಾ ಶುರುವಾಗಿ, ಚಿತ್ರೀಕರಣಗೊಂಡು ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಈ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭಹಾರೈಸಿದರು ಜಯಚಂದ್ರ.

Advertisement

Udayavani is now on Telegram. Click here to join our channel and stay updated with the latest news.

Next