ಜಮ್ಮು: ವಿಧ್ವಂಸಕ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದ್ದ ಹವಾಲಾ ಹಣವನ್ನು ವಶಪಡಿಸಿಕೊಂಡ ಪ್ರಕರಣದ ಪ್ರಮುಖ ಆರೋಪಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಜತೀಂದರ್ ಸಿಂಗ್ ಅಲಿಯಾಸ್ ‘ಬಾಬು ಸಿಂಗ್’ನನ್ನು ಶನಿವಾರ ಕಥುವಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಹವಾಲಾ ದಂಧೆಯನ್ನು ಭೇದಿಸಿದ ನಂತರ ಮತ್ತು ಏಪ್ರಿಲ್ 6 ರಂದು ಲುಕೌಟ್ ನೋಟಿಸ್ ಜಾರಿಗೊಳಿಸಿದ ನಂತರ ಸಿಂಗ್ ಮಾರ್ಚ್ 31 ರಿಂದ ತಲೆಮರೆಸಿಕೊಂಡಿದ್ದ. ಮಾಜಿ ಸಚಿವನನ್ನ ಕಥುವಾ ಜಿಲ್ಲೆಯಿಂದ ಬಂಧಿಸಲಾಗಿದ್ದು, ವಿಚಾರಣೆಗಾಗಿ ಜಮ್ಮುವಿಗೆ ಕರೆತರಲಾಗುತ್ತಿದೆ” ಎಂದು ಜಮ್ಮುವಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ಪಿಟಿಐಗೆ ತಿಳಿಸಿದ್ದಾರೆ.
ಸಿಂಗ್ 2002-2005ರಲ್ಲಿ ಪಿಡಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವನಾಗಿದ್ದ ಮತ್ತು ಈಗ ನೇಚರ್-ಮ್ಯಾನ್‌ಕೈಂಡ್ ಫ್ರೆಂಡ್ಲಿ ಗ್ಲೋಬಲ್ ಪಾರ್ಟಿ ಎಂಬ ಸಂಘಟನೆಯ ಅಧ್ಯಕ್ಷನಾಗಿದ್ದಾನೆ.
ದಕ್ಷಿಣ ಕಾಶ್ಮೀರದ ಕೋಕೆರ್‌ನಾಗ್‌ನ ನಿವಾಸಿ ಮಹಮ್ಮದ್ ಶರೀಫ್ ಷಾ ಎಂಬಾತನನ್ನು ಮಾರ್ಚ್ 31 ರಂದು ಜಮ್ಮುವಿನ ಗಾಂಧಿ ನಗರ ಪ್ರದೇಶದಲ್ಲಿ ಹವಾಲಾ ಹಣದೊಂದಿಗೆ ಬಂಧಿಸಲಾಗಿತ್ತು ಆತನ ವಿಚಾರಣೆಯಲ್ಲಿ ಶ್ರೀನಗರದಿಂದ ಹಣವನ್ನು ಸಂಗ್ರಹಿಸಲು ಕಥುವಾ ಜಿಲ್ಲೆಯ ನಿವಾಸಿ ಸಿಂಗ್ ಎಂಬಾತನಿಗೆ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಥುವಾದ ಸಿದ್ದಾಂತ್ ಶರ್ಮಾ ಮತ್ತು ಜಮ್ಮುವಿನ ಎಸ್ ಗುರುದೇವ್ ಸಿಂಗ್ ಮತ್ತು ಮೊಹಮ್ಮದ್ ಶ್ರೀಫ್ ಸರ್ತಾಜ್ ಎಂಬ ಮೂವರನ್ನು ಸಹ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಜಾವೇದ್, ಫಾರೂಕ್ ಖಾನ್ ಮತ್ತು ಖತೀಬ್, ಕೆನಡಾದ ಟೊರೊಂಟೊ ಸೇರಿದಂತೆ ತನ್ನ ವಿದೇಶಿ ಸಹಚರರ ಹೆಸರುಗಳನ್ನೂ ಷಾ ಬಹಿರಂಗಪಡಿಸಿದ್ದಾನೆ. ಅವರೆಲ್ಲಾ ಪಾಕಿಸ್ಥಾನ ಮತ್ತು ಸೌದಿ ಅರೇಬಿಯಾದ ಸದಸ್ಯರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಗುಂಪನ್ನು ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.