ನವದೆಹಲಿ: ಮಾಜಿ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವಾಲಯ ಶುಕ್ರವಾರ ರಾತ್ರಿ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಆಗಸ್ಟ್ 31 ರಂದು ಈಗೀರುವ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಸೇವೆ ಅಂತ್ಯವಾಗಲಿದ್ದು, ರಾಜೀವ್ ಕುಮಾರ್ ಅಧಿಕಾರ ಸ್ವೀಕರಿಸಿದ ದಿನದಿಂದಲೇ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕಾತಿ ಮಾಡಿದ್ದಾರೆ.
ಸಂವಿಧಾನದ 324ನೇ ವಿಧಿಯ ಉಪವಿಧಿ (2) ರ ಅನ್ವಯ ಆಗಸ್ಟ್ 31ಕ್ಕೆ ಕೊನೆಗೊಳ್ಳುವ ಲವಾಸಾ ಅವರ ಸ್ಥಾನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ರಾಜೀವ್ ಕುಮಾರ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿದ್ದಾರೆ.
ರಾಜೀವ್ ಕುಮಾರ್ 1984ರ ಬ್ಯಾಚಿನ ಜಾರ್ಖಂಡ್ ಕೇಡರ್ ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರು ಸಾರ್ವಜನಿಕ ನೀತಿ ಮತ್ತು ಆಡಳಿತ ಕ್ಷೇತ್ರಗಳಲ್ಲಿ 30 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ.
ರಾಜೀವ್ ಕುಮಾರ್ ಅವರನ್ನು ಕಳೆದ ವರ್ಷ ಜುಲೈನಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಅವರ ಸೇವಾವಧಿ ಕೊನೆಗೊಡಂಡಿತ್ತು. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಪ್ರಧಾನ್ ಮಂತ್ರಿ ಧನ್ ಯೋಜನೆ ಮತ್ತು ಮುದ್ರಾ ಸಾಲ ಯೋಜನೆಯಲ್ಲೂ ಇವರು ಕಾರ್ಯನಿರ್ವಹಿಸಿದ್ದರು ಎಂದು ತಿಳಿದುಬಂದಿದೆ.