ಲಂಡನ್: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಂಟ ಹಾಗೂ ಗುಜರಾತ್‌ನಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಟೈಗರ್ ಹನೀಫ್ ನನ್ನು ಭಾರತಕ್ಕೆ ಹಸ್ತಾಂತರಿಸಲು ಯು.ಕೆ. ನಿರಾಕರಿಸಿರುವ ಹಿಂದೆ ಪಾಕಿಸ್ಥಾನ ಮೂಲದ ಇಂಗ್ಲಂಡ್ ರಾಜಕಾರಣಿಯ ಕೈವಾಡವಿರುವುದು ಸ್ಪಷ್ಟವಾಗಿದೆ.
ಭಾರತಕ್ಕೆ ಹನೀಫ್ ನನ್ನು ಹಸ್ತಾಂತರಿಸಿದರೆ ಆತನಿಗೆ ಚಿತ್ರಹಿಂಸೆ ನೀಡಲಾಗುತ್ತದೆ ಎಂದು ಹೇಳಿ ಪಾಕಿಸ್ಥಾನ ಮೂಲದ ಮಾಜೀ ಗೃಹ ಸಚಿವ ಸಾಜಿದ್ ಜಾವಿದ್ ಈಗ ಆತನನ್ನು ಗಡಿಪಾರು ಮಾಡುವ ಪ್ರಕ್ರಿಯೆಗೆ ಅಡ್ಡಗಾಲು ಹಾಕಿದ್ದಾರೆ.
2010ರ ಫೆಬ್ರವರಿಯಲ್ಲಿ ಲಂಡನ್‌ನಲ್ಲಿ ಬಂಧಿತನಾದ 57 ವರ್ಷದ ಹನೀಫ್ ಉಮರ್ ಜೀ ಪಟೇಲ್, ಅಂದಿನಿಂದ ಇಂದಿನವರೆಗೂ ಹಲವು ನೆಪಗಳನ್ನು ಹೇಳಿಕೊಂಡು ಲಂಡನ್ ನಲ್ಲೇ ಉಳಿಯಲು ನಡೆಸಿದ ಎಲ್ಲ ಯತ್ನವೂ ವಿಫಲವಾಗಿತ್ತು. 2012ರ ಜೂನ್‌ನಲ್ಲಿ ಮಾಜಿ ಗೃಹ ಸಚಿವೆ ಥೆರೇಸಾ ಮೇ ಅವರು ಹನೀಫ್ ನನ್ನು ಗಡಿಪಾರು ಮಾಡಲು ಆದೇಶಿಸಿದ್ದರು.
ಭಾರತ – ಯುಕೆ ಹಸ್ತಾಂತರ ಒಪ್ಪಂದದ ಪ್ರಕಾರ, ಹಸ್ತಾಂತರ ಕೋರಿಕೆಗೆ ಅಂತಿಮ ಮುದ್ರೆ ಒತ್ತುವ ಅಧಿಕಾರವಿರುವುದು ಗೃಹ ಸಚಿವರಿಗೆ. ಆ ಸಂದರ್ಭದಲ್ಲಿ ಗೃಹ ಸಚಿವರಾಗಿದ್ದ ಗೃಹ ಸಚಿವ ಸಾಜಿದ್ ಜಾವಿದ್, ಹನೀಫ್ ಗೆ ಚಿತ್ರಹಿಂಸೆ ನೀಡಲಾಗುತ್ತದೆ ಎಂಬುದನ್ನು ಅಸ್ತ್ರವಾಗಿಟ್ಟುಕೊಂಡು ಗಡಿಪಾರು ಪ್ರಕ್ರಿಯೆಗೆ ತಡೆದಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಕನ್ಸರ್ವೇಟಿವ್ ಪಕ್ಷದ ಸಂಸದರಾಗಿರುವ ಸಾಜಿದ್ ಜಾವಿದ್ ಅವರು 2018 ರಿಂದ 2019ರವರೆಗೆ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯಕ್ಕೆ ಈ ಹುದ್ದೆಯನ್ನು ಪ್ರೀತಿ ಪಟೇಲ್ ಅವರು ನಿಭಾಯಿಸುತ್ತಿದ್ದಾರೆ. ಪ್ರೀತಿ ಅವರ ಹೆತ್ತವರು ಗುಜರಾತ್ ಮೂಲದವರಾಗಿದ್ದಾರೆ.