ಮಹಾಲಿಂಗಪುರ : ಬಾಗಲಕೋಟೆಯ ಮಹಾಂತೇಶ ಚೋಳಚಗುಡ್ಡ ಕಥೆ ಮತ್ತು ನಿರ್ಮಾಣದ ದೇಸಾಯಿ ಚಿತ್ರದಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.
2023 ಅಕ್ಟೋಬರ್ 1 ರಂದು ಮಹಾಲಿಂಗಪುರ ಪಟ್ಟಣದ ಗೋಕಾಕ್ ರಸ್ತೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿನ ಕುಸ್ತಿ ಮೈದಾನದಲ್ಲಿ ನಡೆದ ದೇಸಾಯಿ ಚಿತ್ರದ ಚಿತ್ರೀಕರಣದಲ್ಲಿ ಶಾಸಕ ಲಕ್ಷ್ಮಣ ಸವದಿ ಭಾಗವಹಿಸಿ ಅಭಿನಯಿಸಿದ್ದರು.
ಇದೇ ಮೊದಲ ಬಾರಿಗೆ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ದೇಸಾಯಿ ಚಿತ್ರದಲ್ಲಿನ ಅತಿಥಿ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಲಕ್ಷ್ಮಣ ಸವದಿ ಅಭಿನಯದ ದೃಶ್ಯಗಳನ್ನು ಚಿತ್ರದ ನಿರ್ದೇಶಕ ನಾಗಿರಡ್ಡಿ ಅವರು ಸೆರೆಹಿಡಿದುಕೊಂಡಿದ್ದರು. ಚಿತ್ರಿಕರಣ ಮುಗಿಸಿರುವ ಚಿತ್ರತಂಡ ಕಳೆದ ಒಂದು ವಾರದಿಂದ ಡಬ್ಬಿಂಗ್ (ಮಾತಿನ ಮರುಲೇಪನ) ಕಾರ್ಯವನ್ನು ಬೆಂಗಳೂರು ಚಾಮುಂಡೇಶ್ವರಿ ಸ್ಟೂಡಿಯೋ ದಲ್ಲಿ ಭರದಿಂದ ಸಾಗಿದೆ.ಮಂಗಳವಾರ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ತಮ್ಮ ಅಭಿನಯದ ದೃಶ್ಯಗಳ ಡಬ್ಬಿಂಗ್ ಮುಗಿಸಿದ್ದಾರೆ.
ಬಾಗಲಕೋಟೆಯ ಮಹಾಂತೇಶ ಚೋಳಚಗುಡ್ಡ ಅವರ ಕಥೆ ನಿರ್ಮಾಣದ ದೇಸಾಯಿ ಚಿತ್ರವು ಸಂಪೂರ್ಣ ಉತ್ತರ ಕರ್ನಾಟಕದ ಕಥೆಯಾಗಿದ್ದು, ಚಿತ್ರದಲ್ಲಿ ಲವ್ 360 ಚಿತ್ರದ ಖ್ಯಾತಿಯ ದಾವಣಗೆರೆಯ ಡಾ.ಪ್ರವೀಣಕುಮಾರ್ ನಾಯಕನಾಗಿ, ರಾಧ್ಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ಛಾಯಾಗ್ರಹಕ ಪಿ.ಕೆ.ಎಚ್ ದಾಸ ಅವರ ಛಾಯಾಗ್ರಹಣ, ಮಾಸ ಮಾದ ಅವರ ಸಾಹಸ ಸಂಯೋಜನೆ, ಸಾಯಿ ಕಾರ್ತಿಕ ಅವರ ಸಂಗೀತ ಚಿತ್ರಕ್ಕಿದೆ.
ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಚಿತ್ರದಲ್ಲಿ ಬರುವ ಕುಸ್ತಿ ಪಂದ್ಯಾವಳಿ ವಿಜೇತ ನಾಯಕನಿಗೆ ಪ್ರಶಸ್ತಿ ಪ್ರಧಾನ ಮಾಡುವ ಮುಖ್ಯ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಬಾಗಲಕೋಟೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿಯೇ ನಡೆಸಲಾಗಿದೆ. ಫೆಬ್ರವರಿ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವದಾಗಿ ಚಿತ್ರದ ಕಥೆಗಾರ ನಿರ್ಮಾಪಕ ಮಹಾಂತೇಶ ಚೋಳಚಗುಡ್ಡ ಉದಯವಾಣಿಗೆ ತಿಳಿಸಿದ್ದಾರೆ.