ಹೈದರಾಬಾದ್: ಟೀಂ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು ಅವರು ಇದೀಗ ರಾಜಕೀಯ ಪ್ರವೇಶಿಸಿದ್ದಾರೆ. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷಕ್ಕೆ (ವೈಎಸ್ಆರ್ ಸಿಪಿ) ಅವರು ಇಂದು ಸೇರ್ಪಡೆಯಾಗಿದ್ದಾರೆ. ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ಸಮ್ಮುಖದಲ್ಲಿ ಸಿಎಂ ಕಚೇರಿಯಲ್ಲಿಂದು ರಾಯುಡು ಪಕ್ಷಕ್ಕೆ ಸೇರಿದರು.
ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಮತ್ತು ಸಂಸದ ಪೆದ್ದಿರೆಡ್ಡಿ ಮಿಥುನ್ ರೆಡ್ಡಿ ಅವರು ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಮಾಜಿ ಕ್ರಿಕೆಟಿಗ ರಾಯುಡು ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಕಾರ್ಯಕ್ರಮದ ವೀಡಿಯೊವನ್ನು ವೈಎಸ್ಆರ್ ಸಿಪಿ ಯ ಅಧಿಕೃತ X (ಟ್ವಿಟ್ಟರ್) ಹ್ಯಾಂಡಲ್ ನಲ್ಲಿ ಹಂಚಿಕೊಳ್ಳಲಾಗಿದೆ.
“ಭಾರತದ ಖ್ಯಾತ ಕ್ರಿಕೆಟಿಗ ಅಂಬಟಿ ತಿರುಪತಿ ರಾಯುಡು ಅವರು ಮುಖ್ಯಮಂತ್ರಿ ವೈಎಸ್ ಜಗನ್ ಅವರ ಸಮ್ಮುಖದಲ್ಲಿ ಸಿಎಂ ಕ್ಯಾಂಪ್ ಕಚೇರಿಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಮತ್ತು ಸಂಸದ ಪೆದ್ದಿರೆಡ್ಡಿ ಮಿಥುನ್ ರೆಡ್ಡಿ ಭಾಗವಹಿಸಿದ್ದರು” ಎಂದು ವೈಎಸ್‌ಆರ್‌ಸಿಪಿ ಟ್ವೀಟ್ ಮಾಡಿದೆ.
2023ರ ಐಪಿಎಲ್ ಸೀಸನ್ ಬಳಿಕ ಅಂಬಾಟಿ ರಾಯುಡು ಅವರು ಎಲ್ಲಾ ಮಾದರಿ ಕ್ರಿಕೆಟ್ ನಿಂದ ದೂರವಾಗಿದ್ದರು. ದೇಶಿಯ ಕ್ರಿಕೆಟ್ ನಲ್ಲಿ ಆಂಧ್ರಪ್ರದೇಶ ಮತ್ತು ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದ ರಾಯುಡು ಕೆಲ ತಿಂಗಳ ಹಿಂದೆ ರಾಜಕೀಯ ಪ್ರವೇಶಿಸುವ ಬಗ್ಗೆ ಸುಳಿವು ನೀಡಿದರು.
ಈ ವರ್ಷ ಜೂನ್‌ನಲ್ಲಿ ಮುಟ್ಲೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಜನಸೇವೆಗಾಗಿ ನಾನು ಶೀಘ್ರದಲ್ಲೇ ಆಂಧ್ರಪ್ರದೇಶದಲ್ಲಿ ರಾಜಕೀಯಕ್ಕೆ ಬರುತ್ತೇನೆ, ಅದಕ್ಕೂ ಮೊದಲು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರ ನಾಡಿಮಿಡಿತ ಮತ್ತು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನಿರ್ಧರಿಸಿದ್ದೇನೆ” ಎಂದಿದ್ದರು.