Advertisement

ಕಲ್ಯಾಣ ಮಂಟಪಕ್ಕೆ ಕರೆಸಿ ಮಾಜಿ ಕಾರ್ಪೊರೇಟರ್‌ ಕೊಲೆ

12:04 PM Dec 10, 2017 | Team Udayavani |

ಬೆಂಗಳೂರು: ಕಳೆದ ವರ್ಷ ನಡೆದ ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡನ ಕೊಲೆಗೆ ಸುಪಾರಿ ಕೊಟ್ಟ ಆರೋಪದಲ್ಲಿ ಜೈಲು ಸೇರಿ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮಾಜಿ ಕಾರ್ಪೊರೇಟರ್‌ ಹೆಗ್ಗನಹಳ್ಳಿ ಗೋವಿಂದೇಗೌಡ ಅವರನ್ನು ದುಷ್ಕರ್ಮಿಗಳ ಗುಂಪೊಂದು ಶನಿವಾರ ಬರ್ಬರವಾಗಿ ಹತ್ಯೆಗೈದಿದದೆ.

Advertisement

ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯೂ ಆಗಿದ್ದ ಗೋವಿಂದೇಗೌಡ, ಭಾನುವಾರ ತುಮಕೂರಿನಲ್ಲಿ ನಡೆಯಲಿರುವ ಜೆಡಿಎಸ್‌ ಅಲ್ಪಸಂಖ್ಯಾತರ ಸಮಾವೇಶಕ್ಕೆ ಜನರನ್ನು ಸಂಘಟಿಸಲು ಕ್ಷೇತ್ರದ ಮುಖಂಡರ ಜತೆ ಸಭೆ ನಡೆಸುತ್ತಿದ್ದ ವೇಳೆಯೇ ದೂರವಾಣಿ ಕರೆ ಮಾಡಿ ಮಾತೃಶ್ರೀ ಕಲ್ಯಾಣ ಮಂಟಪಕ್ಕೆ ಕರೆಸಿಕೊಂಡ ಗುಂಪು ಈ ಕೃತ್ಯ ಎಸಗಿದೆ.

ಸಂಜೆ 5 ಗಂಟೆ ಸಮಯದಲ್ಲಿ ಗೋವಿಂದೇಗೌಡರು ಕಲ್ಯಾಣ ಮಂಟಪಕ್ಕೆ ಬರುತ್ತಿದ್ದಂತೆ ವಿನಾಕಾರಣ ಜಗಳ ತೆಗೆದು ಅವರ ಮೇಲೆ ಮುಗಿಬಿದ್ದ ದುಷ್ಕರ್ಮಿಗಳು, ಡ್ರ್ಯಾಗರ್‌ನಿಂದ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋವಿಂದೇಗೌಡ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟರು.

ಕಳೆದ ವರ್ಷ ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಕೊಲೆಗೆ ಸುಪಾರಿ ನೀಡಿದ್ದ ಆರೋಪದಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಗೋವಿಂದೇಗೌಡರನ್ನು ರಾಜೀಸಂಧಾನಕ್ಕೆಂದು ಮಾತೃಶ್ರೀ ಕಲ್ಯಾಣಮಂಟಕ್ಕೆ ಕರೆಸಿಕೊಂಡ ದುರ್ಷರ್ಮಿಗಳು, ಬಳಿಕ ಜಗಳ ತೆಗೆದು ಏಕಾಏಕಿ ಹಲ್ಲೆ ನಡೆಸಿದ್ದಾರೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌ ಪರಿಶೀಲನೆ ನಡೆಸಿದ್ದು ಮಾಹಿತಿ ಪಡೆದುಕೊಂಡಿದ್ದಾರೆ. ಗೋವಿಂದೇಗೌಡ ಕೊಲೆ ಆರೋಪಿಗಳ ಬಂಧನಕ್ಕೆ ಮಲ್ಲೇಶ್ವರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಎರಡು ವಿಶೇಷ ತಂಡ ರಚಿಸಲಾಗಿದ್ದು, ಕಲ್ಯಾಣ ಮಂಟಪದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಗೋವಿಂದೇಗೌಡರ‌ ಕೊಲೆ ವಿಚಾರ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಹೀಗಾಗಿ ಎರಡೂ ಗುಂಪುಗಳ ನಡುವೆ ಮಾರಾಮಾರಿ, ಇನ್ನಿತರೆ ಚಟುವಟಿಕೆಗಳು ನಡೆಯುವ ಸಾಧ್ಯತೆಯಿದೆ. ಹೀಗಾಗಿ ಹೆಗ್ಗನಹಳ್ಳಿ ಮುಖ್ಯರಸ್ತೆ ಹಾಗೂ ಸುಂಕದಕಟ್ಟೆ ಬಳಿ ಅಂಗಡಿ ಮುಂಗಟ್ಟುಗಳನ್ನು ಪೊಲೀಸರನ್ನು ಮುಚ್ಚಿಸಿದ್ದಾರೆ. ಕೆಎಸ್‌ಆರ್‌ಪಿ ತುಕಡಿ ಹಾಗೂ 30ಕ್ಕೂ ಪೊಲೀಸರನ್ನು ಭದ್ರತೆಗೆ ನಿಯೋಜಿಸಿಸಲಾಗಿದೆ. 

ಕೊಲೆ ಹಿಂದಿದೆ ಹಳೇ ವೈಷಮ್ಯದ ಹೊಗೆ?: ಕಳೆದ ವರ್ಷ ಬಿಬಿಎಂಪಿ ಚುನಾವಣೆಯಲ್ಲಿ ಸ್ವರ್ಧಿಸಿದ್ದ ಪತ್ನಿ ವರಲಕ್ಷ್ಮೀ ಅವರ ವಿರುದ್ಧವಾಗಿ ಪ್ರಚಾರ ನಡೆಸಿ ಸೋಲಲು ಕಾರಣವಾಗಿದ್ದ ವಿಚಾರಕ್ಕೆ ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ವಿರುದ್ಧ ಹಗೆ ಸಾಧಿಸುತ್ತಿದ್ದ ಗೋವಿಂದೇಗೌಡ ದಂಪತಿ, ಚಿಕ್ಕತಿಮ್ಮೇಗೌಡ ಕೊಲೆಗೆ 30 ಲಕ್ಷ ರೂ.ಗಳಿಗೆ ಸುಪಾರಿ ನೀಡಿದ್ದರು ಎಂಬ ಆರೋಪ ಇದ್ದು, 2016ರ ನವೆಂಬರ್‌ 17ರಂದು ರಾತ್ರಿ ಚಿಕ್ಕತಿಮ್ಮೇಗೌಡ ಹತ್ಯೆಯಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಗೋವಿಂದೇಗೌಡ ದಂಪತಿಯನ್ನು ಸೇರಿ ಕೊಲೆಯಲ್ಲಿ ಭಾಗಿಯಾಗಿದ್ದ ಐವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಗೋವಿಂದೇಗೌಡ ದಂಪತಿ ಜಾಮೀನು ಪಡೆದುಕೊಂಡು ಹೊರಗಡೆ ಬಂದಿದ್ದರು. ಹೀಗಾಗಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರಾಜೀ ಸಂಧಾನಕ್ಕೆ ಕರೆಸಿ ಕೊಲೆಗೈದಿರುವ ಸಾಧ್ಯತೆಯಿದೆ. ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗೋವಿಂದೇಗೌಡ ಹಿನ್ನೆಲೆ: ಸ್ವಂತ ಕಾರ್ಖಾನೆ ಮೂಲಕ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಗೋವಿಂದೇಗೌಡ, ಜೆಡಿಎಸ್‌ನಿಂದ 2010ರಲ್ಲಿ ಹೆಗ್ಗನಹಳ್ಳಿ ವಾರ್ಡ್‌ನಿಂದ ಸ್ಪರ್ಧಿಸಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ದಾಸರಹಳ್ಳಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. ಕಳೆದ ಪಾಲಿಕೆ ಚುನಾವಣೆಯಲ್ಲಿ ಪತ್ನಿಯನ್ನು ಕಣಕ್ಕಿಳಿಸಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ದಾಸರಹಳ್ಳಿ ಕ್ಷೇತ್ರದಿಂದ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next