ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಹೆಚ್ಚು ಕಡಿಮೆ ಖಚಿತ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಚರ್ಚೆಯಾಗಿದೆ. ಬಿಬಿಎಂಪಿ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಮೈತ್ರಿಯಾಗುವ ಬಗ್ಗೆ ಸುಳಿವನ್ನು ಮುಖಂಡರು ನೀಡಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, 2006ರ ಅಧ್ಯಾಯವನ್ನು ಪುನರಾವರ್ತನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದ್ದಾರೆ. ಪಕ್ಷದ ಕಾರ್ಯ ಕರ್ತರು, ಮುಖಂಡರು, ಶಾಸಕರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲವನ್ನೂ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದ ಅವರು, ನಿಮ್ಮ ರಕ್ಷಣೆ, ನಾಡಿನ ಸಂಪತ್ತಿನ ರಕ್ಷಣೆಯ ಉದ್ದೇಶದಿಂದ ಹೊಸ ಅಧ್ಯಾಯ ಆರಂಭಿಸುತ್ತಿದ್ದೇನೆ ಎಂದಿದ್ದಾರೆ.
ಬಿಜೆಪಿ ಮೈತ್ರಿ ಖಚಿತ
ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿ, ನಾನು 40 ವರ್ಷ ಕಟ್ಟಿ ಬೆಳೆಸಿದ ಪಕ್ಷವನ್ನು ಉಳಿಸುವ ದೃಷ್ಟಿ ಯಿಂದ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದು ನಿಜ. ಆದರೆ ಸೀಟು ಹಂಚಿಕೆಯ ಬಗ್ಗೆ ಚರ್ಚೆ ಆಗಿಲ್ಲ, ಈ ಕುರಿತು ಕುಮಾರಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿ ಜತೆಗೆ ಚರ್ಚೆ ನಡೆಸಿ ತೀರ್ಮಾನಿಸಲಿದ್ದಾರೆ ಎಂದರು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ನಮ್ಮೊಂದಿಗೆ ಗೌರವದಿಂದ ನಡೆದುಕೊಂಡಿದ್ದಾರೆ ಎಂದರು.
9 ಕ್ಷೇತ್ರಗಳಲ್ಲಿ ಮೈತ್ರಿ?
ನಾನು ಬಿಜೆಪಿ ವರಿಷ್ಠರ ಭೇಟಿಯ ಸಂದರ್ಭದಲ್ಲಿ ಪ್ರತೀ ಕ್ಷೇತ್ರದ ಬಗ್ಗೆ ವಿವರಿಸಿದ್ದೇನೆ. ಎಲ್ಲ ಅಂಶಗಳನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದು ದೇವೇ ಗೌಡರು ತಿಳಿಸಿದ್ದಾರೆ. ತನ್ಮೂಲಕ ಒಟ್ಟು 9 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಸೀಟು ಹಂಚಿಕೆಯ ಮಾತುಕತೆ ನಡೆಯುವ ಸುಳಿವನ್ನು ಪರೋಕ್ಷವಾಗಿ ನೀಡಿದ್ದಾರೆ.
2024ರಲ್ಲೂ ಮೋದಿ ಗೆಲುವು
ಲೋಕಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಜೆಡಿಎಸ್ ನಾಯಕ ಜಿ.ಟಿ. ದೇವೇ ಗೌಡ ಭವಿಷ್ಯ ನುಡಿದಿದ್ದಾರೆ.