ಹುಬ್ಬಳ್ಳಿ: ಪಠ್ಯಪುಸ್ತಕಗಳಲ್ಲಿ ಎಲ್ಲಿ ತಪ್ಪಾಗಿದೆ, ಉಂಟಾಗಿರುವ ಗೊಂದಲ ಪರಿಹಾರ ಮಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವರದಿ ತರಿಸಿಕೊಂಡು ಮುಖ್ಯಮಂತ್ರಿಗಳು ಸರಿ ಮಾಡುವ ಕೆಲಸ ಆಗಬೇಕು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡುವುದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕಗಳನ್ನು ನೋಡದೆ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಇಲ್ಲಿಯವರೆಗೂ ಯಾವುದೇ ಪಠ್ಯಪುಸ್ತಕಗಳನ್ನು ನೋಡಿಲ್ಲ. ಗೊಂದಲ ಮೂಡಿರುವ ಕಾರಣ ಪುಸ್ತಕಗಳನ್ನು ತರಿಸಿದ್ದು, ಪರಿಶೀಲನೆ ಮಾಡುತ್ತೇನೆ. ಒಂದು ವೇಳೆ ತಪ್ಪಾಗಿದ್ದರೆ ಸರಿ ಮಾಡುವ ಕೆಲಸ ಮಾಡಲಾಗುವುದು. ಸರಿಯಿದ್ದರೆ ಮೂಡಿರುವ ಗೊಂದಲ ಹಾಗೂ ಸರಕಾರಕ್ಕೆ ಪತ್ರ ಬರೆದಿರುವ ಮಠಾಧೀಶರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಇಡಿ, ಐಟಿ ಇಲಾಖೆ ಸರಿ ತಪ್ಪುಗಳನ್ನು ಅವಲೋಕಿಸಿ ಮಾಹಿತಿ ಸಂಗ್ರಹಿಸಿ ದಾಳಿ ಮಾಡುತ್ತಾರೆ. ಇದಕ್ಕೆ ರಾಜಕೀಯ ಕಾರಣ ಅಂಟಿಸುವುದು ಸರಿಯಲ್ಲ. ಎಲ್ಲವೂ ಸರಿಯಿದ್ದರೆ ಹೆದರುವುದೇಕೆ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
ರಾಜ್ಯಸಭೆಗೆ ಪಕ್ಷದಿಂದ ಎರಡು ಅಭ್ಯರ್ಥಿಗಳು ಗೆಲ್ಲುವುದು ಖಚಿತ, ಮೂರನೇ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಾಗುವುದು. ಕಾಂಗ್ರೆಸ್ ಮೂಡಿಸಿರುವ ಗೊಂದಲದಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹೇಳಿಕೆ ನೋಡಿದರೆ ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ಮಾಡಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂದಿದ್ದಾರೆ. ಆದರೆ ಕಾಂಗ್ರೆಸ್ ಮತ್ತೊಂದು ಅಭ್ಯರ್ಥಿಯನ್ನು ಹಾಕಿ ಗೊಂದಲ ಮೂಡಿಸಿದೆ. ಇದೊಂದು ಮಧ್ಯದಲ್ಲಿಯೇ ಕೈ ಕೊಡುವ ಪಕ್ಷ ಎಂದರು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಆರ್.ಎಸ್.ಎಸ್ ಬಗ್ಗೆ ನಪುಂಸಕ ಶಬ್ದ ಬಳಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸ್ವತಃ ಅದೇ ಪಕ್ಷದ ಮಡ ಲಕ್ಷ್ಮಿನಾರಾಯಣ ಅವರು ಕೂಡ ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಿದ್ದರಾಮಯ್ಯ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಈ ನಿಟ್ಟಿನಲ್ಲಿ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಗೊಂದಲ ಎಂದು ಲೇವಡಿ ಮಾಡಿದರು.