Advertisement

ಜೆಡಿಎಸ್‌ನಿಂದ ಜೀವನದಿ ಉಳಿಸುವ ಸಂಕಲ್ಪ ಯಾತ್ರೆ

02:23 AM Dec 23, 2021 | Team Udayavani |

ಬೆಳಗಾವಿ: ಸಂಕ್ರಾಂತಿಯ ಬಳಿಕ ಜೆಡಿಎಸ್‌ ರಾಜ್ಯದ ಎಲ್ಲ ಜೀವನದಿಗಳನ್ನೂ ಉಳಿಸುವ ಸಂಕಲ್ಪ ಯಾತ್ರೆ ಕೈಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

ವಿಧಾನಮಂಡಲ ಅಧಿವೇಶನದ ನಡುವೆ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, “ರಾಜ್ಯಾದ್ಯಂತ ನಡೆ ಯುವಯಾತ್ರೆಯಲ್ಲಿ ಪ್ರತೀ ನದಿಯಿಂದ ಕಲಶಗಳಲ್ಲಿ ನೀರು ತಂದು ಪೂಜೆ ಮಾಡಿ ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸಲಾಗುವುದು. ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ವಿಚಾರದಲ್ಲಿ ನಮ್ಮ ಬದ್ಧತೆ ಏನು ಎಂಬುದನ್ನೂ ಅಂದು ಜನರ ಮುಂದಿಡಲಾಗುವುದು’ ಎಂದಿದ್ದಾರೆ.

ಮೇಕೆದಾಟು ಯೋಜನೆ ಅನುಷ್ಠಾನ ಆಗ್ರಹಿಸಿ ಕಾಂಗ್ರೆಸ್‌ ಪಾದಯಾತ್ರೆಗೆ ಮುಂದಾಗಿರು ವಾಗಲೇ ಎಚ್‌ಡಿಕೆ ಅವರ ಈ ಮಾತುಗಳು ಕುತೂಹಲ ಮೂಡಿಸಿವೆ.

ಸಂದರ್ಶನದ ಸಾರಾಂಶ
ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ಗೆ ನಿರೀಕ್ಷಿತ ಫಲಿತಾಂಶ ಯಾಕೆ ಬರಲಿಲ್ಲ?
ನಾವು ಶಕ್ತಿ ಮೀರಿ ಶ್ರಮ ಹಾಕಿದ್ದೆವು. ಆದರೆ ಕೊನೇ ದಿನಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ದುಡ್ಡಿನ ಮುಂದೆ ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲಬೇಕಾಯಿತು. ಸೋಲಿ ನಿಂದ ಜೆಡಿಎಸ್‌ ಕುಸಿದಿಲ್ಲ.

ಜೆಡಿಎಸ್‌ ಭದ್ರಕೋಟೆಯಲ್ಲೇ ಸೋಲು ಹಿನ್ನಡೆಯಂತಾಗಲಿಲ್ಲವೇ?
ಸೋಲು-ಗೆಲುವು ಸಹಜ. ಈಗಿನ ಸೋಲು ತಾತ್ಕಾಲಿಕ ಹಿನ್ನಡೆ. 2023ರ ವಿಧಾನಸಭೆ ಚುನಾ ವಣೆಯೇ ನಮ್ಮ ಗುರಿ ಎಂದು ಹಿಂದೆಯೇ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ಪಕ್ಷದ ಶಕ್ತಿ ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ.

Advertisement

ಜೆಡಿಎಸ್‌-ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿತ್ತಾ?
ಅದರ ಅನಿವಾರ್ಯ ನಮಗಿಲ್ಲ. ಕಾಂಗ್ರೆಸ್‌ ನಾಯಕರು ಪದೇ ಪದೆ ಆ ರೀತಿ ಆರೋಪ ಮಾಡಿ ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನ ಮಾಡಿದರು. ಅವರಿಗೆ ಅದೊಂದು ಅಂಟು ರೋಗ. ಯಾವ ಪಕ್ಷದ ಜತೆಯೂ ಮೈತ್ರಿ, ಒಪ್ಪಂದ ಇಲ್ಲ. ಸ್ವಂತ ಬಲದಿಂದ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನನ್ನದೇ ಆದ ಕಾರ್ಯಕ್ರಮಗಳೊಂದಿಗೆ ಜನರ ಮುಂದೆ ಹೋಗುತ್ತೇನೆ.

ಪರಿಷತ್‌ ಚುನಾವಣೆ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾ?
ಆ ರೀತಿ ಅಂದುಕೊಂಡರೆ ಭ್ರಮೆಯಷ್ಟೇ, ಯಾವ ದಿಕ್ಸೂಚಿಯೂ ಅಲ್ಲ. 2016ರ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ 15 ಸ್ಥಾನ ಗೆದ್ದಿತ್ತು, 2018ರ ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನಕ್ಕೆ ಇಳಿದಿತ್ತು. ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ನಡೆಯುವ ಚುನಾವಣೆಯೇ ಬೇರೆ. ಮತದಾರರಿಂದ ನಡೆಯುವ ಚುನಾವಣೆಯೇ ಬೇರೆ.

 ಜೆಡಿಎಸ್‌ ಮುಳುಗುತ್ತಿರುವ ಹಡುಗು ಎಂದು ಸಿದ್ದರಾಮಯ್ಯ ಹೇಳಿದ್ದಾರಲ್ಲಾ?
ಸಿದ್ದರಾಮಯ್ಯ ಅವರಿಗೆ ತಲೆ ನಿಲ್ಲುತ್ತಿಲ್ಲ. ಅವರ ಮಾತುಗಳು ಅಹಂಕಾರದ ಪರಮಾವಧಿ. ಇವೆಲ್ಲದಕ್ಕೂ ರಾಜ್ಯದ ಜನರೇ ಪಾಠ ಕಲಿಸಲಿದ್ದಾರೆ. ಸಿದ್ದ ರಾಮಯ್ಯಗೆ ಜೆಡಿಎಸ್‌ ಎಂದರೆ ಕನಸಿನಲ್ಲೂ ಬೆಚ್ಚಿ ಬೀಳುವಂತಾಗಿದೆ. ಮೈಸೂರಿನಲ್ಲಿ ಏನೇನೋ ಪ್ರಯತ್ನ ಪಟ್ಟರೂ ನಮ್ಮ ಅಭ್ಯರ್ಥಿಯನ್ನು ಸೋಲಿಸಲು ಆಗಲಿಲ್ಲ. ಯಾರೋ ಕೆಲವು ನಾಯಕರನ್ನು ಸೆಳೆದರೆ ಪಕ್ಷ ವನ್ನು ಮುಳುಗಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ. ವಿಧಾನಸಭೆ ಚುನಾವಣೆ ಬರಲಿ ಅವರೇ ಮುಳುಗಿ ಹೋಗ್ತಾರೆ.

ಮಂಡ್ಯ, ತುಮಕೂರು ಸೋಲು ಪ್ರಸ್ತಾವಿಸಿದ್ದಾರಲ್ಲಾ ?
ಪರಿಷತ್‌ ಚುನಾವಣೆಯಲ್ಲಿ ಎರಡು ಕಡೆ ಜೆಡಿಎಸ್‌ ಸೋಲು ಅನುಭವಿಸಿದೆ ಎಂದು ಕೆಲವರು ವಿಕೃತ ಆನಂದ ಪಡುತ್ತಿದ್ದಾರೆ. ಅವರ ಸಾಚಾತನ ಏನು ಎಂಬುದನ್ನು ಬಯಲು ಮಾಡುತ್ತೇನೆ.

ಜೆಡಿಎಸ್‌ನಲ್ಲಿ ಪಕ್ಷ ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆಯಲ್ಲಾ?
ನಮ್ಮಲ್ಲಿ ಅಧಿಕಾರ ಪಡೆದು ಬೇರೆ ಪಕ್ಷಕ್ಕೆ ಹೋಗುವುದು ಮೊದಲಿ ನಿಂದಲೂ ನಡೆದಿದೆ. ಇದರಲ್ಲಿ ಅಚ್ಚರಿ ಇಲ್ಲ. ಆದರೆ ನೂರಾರು ನಾಯಕ ರನ್ನು ಬೆಳೆ ಸುವ ಶಕ್ತಿ ಜೆಡಿಎಸ್‌ಗಿದೆ. ಕೆಲವು ನಾಯಕರು ಬಿಟ್ಟು ಹೋಗಿರ ಬಹುದು; ಲಕ್ಷಾಂತರ ಕಾರ್ಯ ಕರ್ತರು, ಮುಖಂಡರು ನಮ್ಮ ಜತೆಗಿದ್ದಾರೆ. ಪಕ್ಷ ಮತ್ತೆ ಖಂಡಿತ ಪುಟಿದೇಳಲಿದೆ.

ಇತ್ತೀಚೆಗೆ ನೀವು ಹಾಗೂ ಯಡಿ ಯೂರಪ್ಪ ಹತ್ತಿರವಾಗುತ್ತಿದ್ದೀರಲ್ಲಾ ?
ಆ ರೀತಿ ಏನೂ ಇಲ್ಲ. ವೈಯಕ್ತಿಕ ಸ್ನೇಹ ಬೇರೆ, ರಾಜಕೀಯವೇ ಬೇರೆ.

 ಜೆಡಿಎಸ್‌ ಸಂಘಟನೆ ಹೇಗಿದೆ?
ತಳಮಟ್ಟದಲ್ಲಿ ಪಕ್ಷ ಸಂಘಟನೆ ಕಾರ್ಯ ಆರಂಭಿಸಲಾಗಿದೆ. ಇತ್ತೀಚೆಗೆ ಬಿಡದಿಯಲ್ಲಿ ನಡೆಸಿದ ಮೊದಲ ಹಂತದ ಕಾರ್ಯಾಗಾರ ಯಶಸ್ವಿಯಾಗಿದ್ದು ಎರಡನೇ ಹಂತ ಸದ್ಯದಲ್ಲೇ ಪ್ರಾರಂಭವಾಗಲಿದೆ. ಬೂತ್‌ ಮಟ್ಟದಲ್ಲಿ ಜೆಡಿಎಸ್‌ ಪಡೆ ರಚನೆ ಮಾಡಲಾಗುವುದು.

- ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next