Advertisement

ಜನರ ಸಹಭಾಗಿತ್ವಕ್ಕೆ ವಾರ್ಡ್‌ ಸಮಿತಿ ರಚನೆ

03:10 PM May 12, 2022 | Team Udayavani |

ಬಳ್ಳಾರಿ: ನಗರದ ಅಭಿವೃದ್ಧಿಯಲ್ಲಿ ಸಾರ್ವಜನಿಕರು ಭಾಗವಹಿಸುವ ಸಲುವಾಗಿ ಜನಾಗ್ರಹ ಸಂಸ್ಥೆ ಸಹಯೋಗದಲ್ಲಿ ವಾರ್ಡ್‌ ಸಮಿತಿಗಳನ್ನು ರಚಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋತ್ ಹೇಳಿದರು.

Advertisement

ನಗರದ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಮೇಯರ್‌ ರಾಜೇಶ್ವರಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಎಂದರೆ ಕೇವಲ ಪಾಲಿಕೆ ಸದಸ್ಯರು, ಆಯುಕ್ತರಷ್ಟೇ ಆಗಿದ್ದಾರೆ. ನಗರದ ನಾಗೀಕರು ಭಾಗವಹಿಸುವ ಪ್ರಮಾಣ ತೀರಾ ಕಡಿಮೆ ಶೇ.10 ರಷ್ಟು ಇದ್ದು, ಸಾರ್ವಜನಿಕರ ದೃಷ್ಟಿಯಲ್ಲಿ ಇನ್ನು ಏನೇನು ಅಭಿವೃದ್ಧಿಯಾಗಬೇಕು. ಅವರ ನಿರೀಕ್ಷೆ, ಬೇಡಿಕೆಗಳೇನು ಎಂಬುದನ್ನು ಅರಿಯಲು ಈ ವಾರ್ಡ್‌ ಸಮಿತಿಗಳನ್ನು ರಚಿಸಲಾಗುತ್ತಿದೆ. ಈ ಕುರಿತು ಪಾಲಿಕೆಯ ಎಲ್ಲ ಸದಸ್ಯರಿಗೂ ಮಂಗಳವಾರ ಕಾರ್ಯಾಗಾರ ನಡೆಸಿ ಮಾಹಿತಿ ನೀಡಲಾಗಿದೆ. ಪಾಲಿಕೆ ಸದಸ್ಯರನ್ನು ಒಳಗೊಂಡಂತೆ ಒಟ್ಟು 10 ಜನ ಸದಸ್ಯರು ಇರಲಿದ್ದಾರೆ ಎಂದ ಅವರು, ವಾರ್ಡ್‌ ಸಮಿತಿಗೆ ಅರ್ಜಿ ಆಹ್ವಾನಿಸಿದರೆ, ಪ್ರತಿ ವಾರ್ಡ್ ಗಳಿಂದ ಕೇವಲ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ ಜನಾಗ್ರಹ ಸಂಸ್ಥೆ ಸಹಯೋಗದಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ ಎಂದವರು ತಿಳಿಸಿದರು.

ಜನಾಗ್ರಹ ಸಂಸ್ಥೆಯು ಈಗಾಗಲೇ ಬೆಂಗಳೂರು, ಮಂಗಳೂರು ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಂಗಳೂರಿನಲ್ಲಿ ವಾರ್ಡ್‌ ಸಮಿತಿಯೇ ನಿರ್ವಹಿಸಲು 60 ಲಕ್ಷ ರೂ. ಅನುದಾನ ನೀಡಲಾಗಿದ್ದು, ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ 2 ಕೋಟಿ ಅನುದಾನ ನೀಡಲು ಮುಂದಾಗುತ್ತಿದೆ. ಹೀಗಾಗಿ ಬಳ್ಳಾರಿ ಮಹಾನಗರ ಪಾಲಿಕೆಯಲ್ಲೂ ಯಶಸ್ವಿಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಆಸ್ತಿಗಳ ಡಿಜಿಟಲೀಕರಣ

ನಗರದ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಆನ್‌ಲೈನ್‌ ವ್ಯವಸ್ಥೆ ಮಾಡಿ ಈ ಕುರಿತ ಎಲ್ಲ ಮಾಹಿತಿಯನ್ನು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗುವುದು. ದಿನೇದಿನೆ ಬೆಳೆಯುತ್ತಿರುವ ನಗರದಲ್ಲಿ ಖಾಲಿ ನಿವೇಶನಗಳು ಸೇರಿ ಸದ್ಯ 1.25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಇಷ್ಟು ಆಸ್ತಿಗಳ ಮಾಲೀಕರಿಂದ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಪಾವತಿಯಾಗುತ್ತಿಲ್ಲ. ಕಳೆದ ವರ್ಷ 28 ಕೋಟಿ ರೂ. ಗುರಿ ಹೊಂದಿದ್ದು, ಶೇ. 95ರಷ್ಟು ಸಂಗ್ರಹವಾಗಿದೆ. ಪ್ರಸಕ್ತ ವರ್ಷ 32 ಕೋಟಿ ರೂ.ಗಳ ಗುರಿ ಹೊಂದಲಾಗಿದೆ. ಆಸ್ತಿ ತೆರಿಗೆಯನ್ನು ಹೆಚ್ಚಿಸಬೇಕಾದರೆ ಡಿಜಿಟಲೀಕರಣ ಅಗತ್ಯವಾಗಿದೆ. ಇದಕ್ಕಾಗಿ ಖಾಸಗಿ ಏಜೆನ್ಸಿಗೆ ನೀಡಲಾಗಿದ್ದು, ಮುಂದಿನ 6 ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ. ಅಲ್ಲದೇ, ನೀರಿನ ತೆರಿಗೆ 16 ಕೋಟಿ ರೂ. ಗುರಿ ಹೊಂದಿದ್ದು, 16 ಕೋಟಿ ರೂ. ಸಂಗ್ರಹವಾಗಿದೆ. ಯುಜಿಡಿತೆರಿಗೆ ನಿರೀಕ್ಷಿಸಿದಷ್ಟು ವಸೂಲಿಯಾಗಿಲ್ಲ. ಕೇವಲ ಶೇ.68 ರಷ್ಟು ಸಂಗ್ರಹವಾಗಿದೆ. ಕಸ ವಿಲೇವಾರಿ ತೆರಿಗೆ 2.98 ಕೋಟಿ ರೂ. ಗುರಿಯಲ್ಲಿ 2.76 ಕೋಟಿ ರೂ. ಸಂಗ್ರಹವಾಗಿದೆ ಎಂದವರು ವಿವರಿಸಿದರು.

Advertisement

ಬ್ಲಾಕ್‌ ಲಿಸ್ಟ್‌

ಪಾಲಿಕೆಯ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸದ, ಕಳಪೆ ಕಾಮಗಾರಿ ಮಾಡಿದ್ದ ಐದು ಜನ ಗುತ್ತಿಗೆದಾರರನ್ನು ಬ್ಲಾಕ್‌ ಲಿಸ್ಟ್‌ಗೆ ಸೇರಿಸಲು ಶಿಫಾರಸು ಮಾಡಲಾಗಿದೆ ಎಂದರು.

ರಸ್ತೆ ಅಗಲೀಕರಣ

ನಗರದ ಡಾ| ರಾಜ್‌ ಕುಮಾರ್‌ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಯಾರಿಗೂ ಪರಿಹಾರ ನೀಡಲ್ಲ. ರಸ್ತೆಯ ಎರಡೂ ಬದಿಯಲ್ಲಿ ಶೇ.60-70 ರಷ್ಟು ತೆರವುಗೊಳಿಸಲಾಗುವುದು. ಇವರಿಗೆ ಪರಿಹಾರಕ್ಕೆ ಬದಲಿಗೆ ಟಿಡಿಆರ್‌ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಈ ಮೂಲಕ ಸ್ವಾಧೀನಪಡಿಸಿಕೊಂಡ ನಿವೇಶನದ ಮೌಲ್ಯದಷ್ಟೇ ಜಾಗವನ್ನು ಬೇರೆಗೆ ಖರೀದಿಸಲು ಅವಕಾಶ ಕಲ್ಪಿಸಲಾಗುವುದು. ಬೆಂಗಳೂರಿನಲ್ಲಿ ಈ ಪದ್ಧತಿ ಈಗಾಗಲೇ ಕಾರ್ಯರೂಪಕ್ಕೆ ಬಂದಿದ್ದು, ಬಳ್ಳಾರಿಯಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಯಶಸ್ವಿಗೊಳಿಸಲು ನಾನು, ಜಿಲ್ಲಾಧಿಕಾರಿಗಳು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್‌ ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್‌ ಮುಬೀನಾಬೀ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next