Advertisement

Udupi ಪ್ರವಾಹ ನಿಗಾಕ್ಕೆ ವಿಶೇಷ ಟಾಸ್ಕ್ ಫೋರ್ಸ್‌ ರಚನೆ

01:33 AM Jul 21, 2024 | Team Udayavani |

ಮಣಿಪಾಲ: ಜಿಲ್ಲೆಯ 63 ಗ್ರಾ. ಪಂ. 86 ಗ್ರಾಮಗಳು ನದಿ ತೀರದಲ್ಲಿದ್ದು, ಅಪಾಯದ ಸ್ಥಿತಿ ಎದುರಾಗಬಹುದು ಎಂಬುದನ್ನು ಗುರುತಿಸಿದ್ದೇವೆ. ಇಲ್ಲಿ 4,000 ಕುಟುಂಬ ಹಾಗೂ ಸುಮಾರು 16 ಸಾವಿರ ಜನಸಂಖ್ಯೆಯಿದ್ದು, ವಿಶೇಷ ನಿಗಾಕ್ಕಾಗಿ ಪಿಡಿಒಗಳ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಗ್ರಾ.ಪಂ.ಗಳ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಆನ್‌ಲೈನ್‌ ಮೂಲಕ ಸಭೆ ನಡೆಸಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಗ್ರಾಮಗಳಿಗೆ ವಿಶೇಷ ಕಾರ್ಯಪಡೆ ರಚಿಸಿದ್ದು, ಇದರಲ್ಲಿ ಶಾಲಾ ಮುಖ್ಯಶಿಕ್ಷಕರು, ಆಶಾ ಕಾರ್ಯ ಕರ್ತೆಯರು ಸಹಿತ ಗ್ರಾಮಕ್ಕೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದಾರೆ. ತಹಶೀಲ್ದಾರರು ಇದರ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದರು.

ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 55 ಕೋ.ರೂ. ಹಾನಿಯಾಗಿದ್ದು, ರಾಜ್ಯಕ್ಕೆ ವರದಿ ಸಲ್ಲಿಸಿದ್ದೇವೆ. ಗ್ರಾಮೀಣ ರಸ್ತೆಗಳು ಹೆಚ್ಚು ಹಾಳಾಗಿದ್ದು, ವೆಟ್‌ಮಿಕ್ಸ್‌ ಅಳವಡಿಸುವ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಸೂಚಿಸಿದ್ದೇವೆ. 116 ಕಾಳಜಿ ಕೇಂದ್ರ ತೆರೆದಿದ್ದೇವೆ. 164 ಮಂದಿಯನ್ನು ಸ್ಥಳಾಂತರಿಸಲಾಗಿದ್ದು, ನೆರೆ ಇಳಿದ ಮೇಲೆ ಮನೆಗಳಿಗೆ ತೆರಳಿದ್ದಾರೆ ಎಂದರು.

ಆಹಾರ ಕಿಟ್‌ ವಿತರಣೆ
ನೆರೆ ಪೀಡಿತ ಪ್ರದೇಶದ ಜನವಸತಿಯಲ್ಲಿ ಇರುವವರ ಅನುಕೂಲಕ್ಕಾಗಿ ಆಹಾರ ಕಿಟ್‌ ನೀಡಲು ಬೆಂಗಳೂರಿನ ಸಂಸ್ಥೆಯೊಂದು ಮುಂದೆ ಬಂದಿದೆ. ಮುಂದಿನ ಒಂದೆರೆಡು ದಿನದಲ್ಲಿ 1,500 ಕಿಟ್‌ ವಿತರಣೆ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯ ಕೆಲವು ಪ್ರದೇಶದಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದೆ. ತಾತ್ಕಾಲಿಕ ನೆಲೆಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದೇವೆ. ನಿರಂತರ ಮಳೆಯಿಂದ ಸೀತಾ, ಶಾಂಭವಿ, ಸೌಪರ್ಣಿಕಾ, ಹಾಲಾಡಿ ನದಿಗಳು ಎರಡು ದಿನ ಅಪಾಯದ ಮಟ್ಟ ಮೀರಿ ಹರಿದಿದ್ದರಿಂದ ಕೆಲವು ಕಡೆಗಳಲ್ಲಿ ನೆರೆ ಬಂದಿದೆ. ಈಗ ಮಳೆ ಕಡಿಮೆಯಾಗಿರುವುದರಿಂದ ಅಪಾಯದ ಮಟ್ಟದಿಂದ ಹರಿಯುತ್ತಿರುವ ನದಿಗಳಲ್ಲೂ ನೀರು ಸ್ವಲ್ಪ ಕಡಿಮೆಯಾಗಿದೆ. ಪಶ್ಚಿಮಘಟ್ಟದಲ್ಲಿ ಉತ್ತಮ ಮಳೆಯಾಗಿರುವುದರಿಂದ ನದಿ ಅಂಚಿನ ಪ್ರದೇಶದ ನಿವಾಸಿಗಳು ಎಚ್ಚರದಿಂದ ಇರಬೇಕಾಗುತ್ತದೆ ಎಂದು ಹೇಳಿದರು. ಜಿ.ಪಂ. ಸಿಇಒ ಡಾ| ಪ್ರತೀಕ್‌ ಬಾಯಲ್‌, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್‌. ಉಪಸ್ಥಿತರಿದ್ದರು.

ತಜ್ಞರ ತಂಡ ಭೇಟಿ
ಬೈಂದೂರಿನ ಒತ್ತಿನೆಣೆಯಲ್ಲಿ ಗುಡ್ಡಿ ಕುಸಿಯುವ ಭೀತಿ ಸಂಬಂಧ ಐಆರ್‌ಬಿ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಐಐಟಿ ತಜ್ಞರ ನೇತೃತ್ವದ ತಾಂತ್ರಿಕ ತಂಡವೂ ಅಲ್ಲಿಗೆ ಭೇಟಿ ನೀಡಲಿದೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ರಸ್ತೆ ಮಾಡುವ ಸಂದರ್ಭದಲ್ಲಿ ತಡೆಗೋಡೆಗಳನ್ನು ಬಲಿಷ್ಠವಾಗಿ ನಿರ್ಮಿಸಲು ಸೂಚಿಸಲಾಗಿದೆ ಎಂದರು.

Advertisement

ಸಚಿವರಿಗೆ ವರದಿ
ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ವಿಳಂಬದಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ರಾಜ್ಯ ಲೋಕೋಪಯೋಗಿ ಸಚಿವರಿಗೆ ಮಾಹಿತಿ ನೀಡಿದ್ದೇವೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೂ ಈ ವಿಷಯ ತಿಳಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next