Advertisement

BJP ಯಿಂದ ರಾಜ್ಯವ್ಯಾಪಿ ಸಪ್ತ ತಂಡಗಳ ರಚನೆ

09:51 PM Jun 17, 2023 | Team Udayavani |

ಬೆಂಗಳೂರು: ವಿಧಾನ ಸಭಾ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿ ನಿಸ್ತೇಜಗೊಂಡಿರುವ ರಾಜ್ಯ ಬಿಜೆಪಿ ತನ್ನ ಬಲವರ್ಧನೆ ಮತ್ತು ಕಾರ್ಯಕರ್ತರಲ್ಲಿ ಹುರುಪು ತುಂಬುವ ಪ್ರಯತ್ನವಾಗಿ ಮೋದಿ ಸರ್ಕಾರದ 9 ವರ್ಷಗಳ ಸಾಧನೆಯ ಪ್ರಚಾರಕ್ಕೆ ರಾಜ್ಯವ್ಯಾಪಿ ಏಳು ತಂಡಗಳಾಗಿ ಜೂನ್‌ 22 ರಿಂದ ಜು.26ರವರೆಗೆ ಪಂಚ ದಿನಗಳ ಪ್ರವಾಸ ಮಾಡಲಿದೆ. ಜೂನ್‌ 26 ರಿಂದ ಜುಲೈ 5ರವರೆಗೆ ಮನೆ ಮನೆ ಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ.

Advertisement

ಶನಿವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಮತ್ತು ನರೇಂದ್ರ ಮೋದಿಯವರು ಪ್ರಧಾನಿಯಾಗಿ 9 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಬಿಜೆಪಿಯು 7 ತಂಡಗಳಾಗಿ ಜೂನ್‌ 22 ರಿಂದ ಜೂನ್‌ 26ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿವೆ ಎಂದು ತಿಳಿಸಿದರು.

ಪ್ರವಾಸದ ಭಾಗವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು. ಕೇಂದ್ರದ ನರೇಂದ್ರ ಮೋದಿ ಸರಕಾರದ ಸಾಧನೆಗಳನ್ನು ತಿಳಿಸಲಾಗುವುದು. ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬುವ ಉದ್ದೇಶದಿಂದ ಪ್ರವಾಸ ಕೈಗೊಳ್ಳಲಾಗುತ್ತದೆ. ಪ್ರವಾಸದ ಬಳಿಕ ಜೂನ್‌ 26ರಿಂದ ಜುಲೈ 5ರವರೆಗೆ ರಾಜ್ಯಾದ್ಯಂತ ಮನೆಮನೆಗೆ ತೆರಳಿ ಮೋದಿ ಕರಪತ್ರ ವಿತರಿಸಲಾಗುತ್ತದೆ. ಮೋದಿಯವರ ಸರಕಾರದ ಸಾಧನೆಗಳನ್ನು 50 ಲಕ್ಷ ಮನೆಗಳಿಗೆ ತಲುಪಿಸುತ್ತೇವೆ ಎಂದು ಹೇಳಿದರು.

ಪ್ರವಾಸದಲ್ಲಿ ಬಿಎಸ್‌ವೈ ಸಕ್ರಿಯ
ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ನೇತೃತ್ವದ ತಂಡ ದಾವಣಗೆರೆ, ಚಿತ್ರದುರ್ಗ, ಮಧುಗಿರಿ, ತುಮಕೂರು, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.

ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ನೇತೃತ್ವದ ತಂಡ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಂಡ ವಿಜಯಪುರ, ಬಾಗಲಕೋಟೆ, ಬೆಳಗಾವಿ ನಗರ, ಗ್ರಾಮಾಂತರ ಮತ್ತು ಚಿಕ್ಕೋಡಿಗಳಲ್ಲಿ ಪ್ರವಾಸ ಮಾಡಲಿದೆ.

Advertisement

ಮಾಜಿ ಸಚಿವ ಆರ್‌.ಅಶೋಕ್‌ ನೇತೃತ್ವದ ತಂಡ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆ, ಡಿ.ವಿ.ಸದಾನಂದ ಗೌಡ ಮತ್ತು ವಿ.ಸೋಮಣ್ಣರ ನೇತೃತ್ವದ ತಂಡ ಚಾಮರಾಜನಗರ, ಮೈಸೂರು, ಮೈಸೂರು ಗ್ರಾಮಾಂತರ, ಮಂಡ್ಯ- ರಾಮನಗರ ಜಿಲ್ಲೆ, ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಮುಖಂಡತ್ವದ ತಂಡ ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ ಜಿಲ್ಲೆ, ಮಾಜಿ ಸಚಿವ ಈಶ್ವರಪ್ಪರ ನೇತೃತ್ವದ ತಂಡ ಹಾವೇರಿ, ಹುಬ್ಬಳ್ಳಿ- ಧಾರವಾಡ, ಧಾರವಾಡ ಗ್ರಾಮಾಂತರ, ಗದಗ, ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next