Advertisement

ಮಹಾದಾಯಿ ನಿರ್ವಹಣೆ ಪ್ರಾಧಿಕಾರ ರಚನೆ: ಕೇಂದ್ರ ಸಚಿವ ಸಂಪುಟ ಸಭೆ ನಿರ್ಧಾರ

11:52 PM Feb 22, 2023 | Team Udayavani |

ಹೊಸದಿಲ್ಲಿ/ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಉತ್ತರ ಕರ್ನಾಟಕದ ಮಹಾದಾಯಿ ನದಿ ವಿವಾದವನ್ನು ಬಗೆಹರಿಸಲು ಕೇಂದ್ರ ಸರಕಾರ ಮುಂದಾಗಿದೆ. ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರ ಮಹಾದಾಯಿ ನೀರು ನಿರ್ವಹಣೆಗಾಗಿ “ಪ್ರವಾಹ್‌’ (ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಪರ ನದಿ ಪ್ರಾಧಿಕಾರ) ಅನ್ನು ರಚಿಸಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸ್ವತಃ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರೇ ಟ್ವೀಟ್‌ ಮುಖೇನ ಮಾಹಿತಿ ಬಹಿರಂಗ ಮಾಡಿದ್ದಾರೆ. ಈ ಪ್ರಾಧಿಕಾರವು ಮಹಾದಾಯಿ ನದಿ ವಿವಾದ ನ್ಯಾಯಾಧಿಕರಣದ ಅಂತಿಮ ತೀರ್ಪನ್ನು ಜಾರಿ ಮಾಡಲಿದೆ. ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ರೀತಿಯಲ್ಲೇ ಈ ಪ್ರಾಧಿಕಾರವೂ ರಚನೆಯಾಗಲಿದೆ.

ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹದಾಯಿ ಪ್ರವಾಹ್‌ ರಚಿಸಲು ನಿರ್ಧರಿಸಲಾಗಿದೆ. ಇದು ಮಹದಾಯಿ ಜಲವಿವಾದ ನ್ಯಾಯಾಧಿಕರಣದ ತೀರ್ಪುಗಳ ಅನುಸರಣೆ, ಅನುಷ್ಠಾನಕ್ಕೆ ಅನುವು ಮಾಡಿಕೊಡುತ್ತದೆ ಎಂದು ಬರೆದುಕೊಂಡಿದ್ದಾರೆ.

ಜತೆಗೆ ರಾಜ್ಯಗಳಾದ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಪರಸ್ಪರ ನಂಬಿಕೆ ಮತ್ತು ತಿಳುವಳಿಕೆಯನ್ನು ಬೆಳೆಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ರಾಜ್ಯಕ್ಕೆ 13.46 ಟಿಎಂಸಿ ಅಡಿ ನೀರು
2018ರ ಆಗಸ್ಟ್‌ನಲ್ಲಿ ನ್ಯಾಯಾಧಿಕರಣವು 38.74 ಟಿಎಂಸಿ ಅಡಿ ನೀರನ್ನು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಕ್ಕೆ ಹಂಚಿಕೆ ಮಾಡಿತ್ತು. ಇದರಲ್ಲಿ ರಾಜ್ಯಕ್ಕೆ 13.46 ಟಿಎಂಸಿ ಅಡಿ, ಗೋವಾಗೆ 24 ಟಿಎಂಸಿ ಅಡಿ ಮತ್ತು ಮಹಾರಾಷ್ಟ್ರಕ್ಕೆ 1.33 ಟಿಎಂ ಅಡಿ ನೀರು ನೀಡಲಾಗಿತ್ತು. ಕರ್ನಾಟಕಕ್ಕೆ ನೀಡಲಾಗಿದ್ದ ನೀರಿನಲ್ಲಿ 5.4 ಟಿಎಂಸಿ ಅಡಿ ನೀರನ್ನು ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಪ್ರದೇಶಕ್ಕೆ ಕುಡಿಯುವ ನೀರಿಗೆ ಬಳಸಿಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಇದಕ್ಕಾಗಿ ಮಹದಾಯಿ ನದಿ ನೀರನ್ನು ತಿರುಗಿಸಿ ಕಳಸಾ-ಬಂಡೂರಿ ನಾಲಾ ರಚನೆಗೆ ನಿರ್ಧರಿಸಿದೆ.

Advertisement

ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸಿರುವ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ. ಕೇಂದ್ರದ ಈ ತೀರ್ಮಾನದಿಂದ ಯೋಜನೆ ಅನುಷ್ಠಾನಕ್ಕೆ ವೇಗ ಸಿಗಲಿದೆ.
— ಬಸವರಾಜ ಬೊಮ್ಮಾಯಿ,ಮುಖ್ಯಮಂತ್ರಿ

ಐ ತೀರ್ಪು ಅನುಷ್ಠಾನಗೊಳಿಸಲು ಮಹದಾಯಿ ನೀರು ನಿರ್ವಹಣ ಪ್ರಾಧಿಕಾರ ರಚಿಸಿರುವ ಕೇಂದ್ರ ಸರಕಾರ ಉತ್ತರ ಕರ್ನಾಟಕದ ಜನತೆಯ ಆಶಯಗಳನ್ನು ಗೌರವಿಸಿದೆ.
– ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next