Advertisement
ಈಗಾಗಲೇ ರಾಜ್ಯದ 6,020ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿ ರಚನೆ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರವೇ ರಚನೆ ಕಾರ್ಯ ಪೂರ್ಣಗೊಂಡು ಸಮಿತಿಗಳು ಅನುಷ್ಠಾನಕ್ಕೆ ಬರಲಿವೆ. ಈ ಸಮಿತಿಗಳಿಗೆ ಕಾಯಕಲ್ಪ ನೀಡಲು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಕ್ರಿಯಾಯೋಜನೆ ರೂಪಿಸಿದ್ದರೆ, ಆ ಸಮಿತಿಗಳಿಗೆ ಹೆಚ್ಚಿನ ಕಾನೂನು ಬಲ ನೀಡಲು ಗ್ರಾಮೀಣಾ ಭಿವೃದ್ಧಿ ಇಲಾಖೆ ನಿರ್ಧರಿಸಿದೆ.
Related Articles
Advertisement
ಸ್ವಾಯತ್ತ ಸಂಸ್ಥೆಗಳು: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ತೀರ್ಪು ಹಾಗೂ ಅರಣ್ಯ ಇಲಾಖೆಯ ಮಾರ್ಗಸೂಚಿಗಳಂತೆ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಮೇಲ್ವಿಚಾರಣೆಯಲ್ಲಿ ಗ್ರಾಪಂಗಳಲ್ಲಿ “ಜೀವವೈವಿಧ್ಯ ನಿರ್ವಹಣಾ ಸಮಿತಿ’ಗಳನ್ನು ರಚಿಸಲಾಗುತ್ತಿದೆ. ಜೈವಿಕ ವೈವಿಧ್ಯ ಕಾಯ್ದೆ-2002ರ ಪ್ರಕಾರ ಈ ಸಮಿತಿಗಳು ಸ್ವಾಯತ್ತ ಸಂಸ್ಥೆಗಳಾಗಿರುತ್ತವೆ. ಆದರೆ, ಈ ಸಮಿತಿಗಳನ್ನು ಪಂಚಾಯತ್‌ರಾಜ್ ಕಾಯ್ದೆಯ ಸೆಕ್ಷನ್ 61 (ಎ)ರಡಿ ತಂದು ಪಂಚಾಯಿತಿ ಉಪ ಸಮಿತಿ ಸ್ಥಾನಮಾನ ಕೊಡುವ ಮೂಲಕ ಹೆಚ್ಚಿನ ಕಾನೂನು ಬಲ ನೀಡಲು ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ಧರಿಸಿದೆ.
“ಜನತಾ ಜೀವವೈವಿಧ್ಯ ದಾಖಲಾತಿ’ ತಯಾರಿಕೆ: ಜೈವಿಕ ವೈವಿಧ್ಯ ಅಧಿನಿಯಮ-2002ರ ಪ್ರಕಾರ ಪ್ರತಿ ಜೀವವೈವಿಧ್ಯ ನಿರ್ವಹಣಾ ಸಮಿತಿಯು ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ “ಜನತಾ ಜೀವವೈವಿಧ್ಯ ದಾಖಲಾತಿ (ಪಿಬಿಆರ್) ತಯಾರಿಸಬೇಕು. ಈ ದಾಖಲಾತಿಯು ಆಯಾ ಗ್ರಾ.ಪಂನ ಜೀವವೈವಿಧ್ಯತೆಯ ಮಾಹಿತಿ ಹಾಗೂ ಅಂಕಿ-ಅಂಶಗಳನ್ನು ಒಳಗೊಂಡಿರುತ್ತದೆ.
ಮುಖ್ಯವಾಗಿ ಆ ಪಂಚಾಯಿತಿಯ ವ್ಯಾಪ್ತಿಗೆ ಬರುವ ಅರಣ್ಯ ಭೂಮಿ, ಕೃಷಿ ಜಮೀನು, ಸಂರಕ್ಷಿತ ಅರಣ್ಯ ಪ್ರದೇಶ, ಅರಣ್ಯ ಸಂಪತ್ತು, ಗಿಡ-ಮರ, ಹುಳು-ಜಂತು, ಪ್ರಾಣಿ-ಪಕ್ಷಿ ಇವುಗಳ ವಿವಿಧ ಪ್ರಬೇಧ ಮತ್ತು ತಳಿಗಳ ಮಾಹಿತಿ, ಔಷಧೀಯ ಗಿಡಮೂಲಿಕೆಗಳ ವಿವರ, ಪಾರಂಪರಿಕ ತಾಣ, ಗುಡಿ-ಗುಂಡಾರಗಳ ಇತಿಹಾಸದ ಜತೆಗೆ ಪ್ರಸಕ್ತ ಅಂಕಿ-ಅಂಶಗಳನ್ನು ಈ ದಾಖಲಾತಿ ಒಳಗೊಂಡಿರುತ್ತದೆ. ಇದು ಸಂಬಂಧಪಟ್ಟ ಗ್ರಾಪಂನ ಜೀವವೈವಿಧ್ಯತೆಯ ಆರ್‌ಟಿಸಿ ದಾಖಲೆ ಇದ್ದಂತೆ ಎಂದು ಅಧಿಕಾರಿಗಳು ಹೇಳುತ್ತಾರೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ತೀರ್ಪಿನಂತೆ ಪಂಚಾಯಿತಿಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಿಸಲಾಗುತ್ತಿದೆ. ಈಗಾಗಲೇ ಬಹುತೇಕ ಪಂಚಾಯಿತಿಗಳಲ್ಲಿ ಸಮಿತಿ ರಚನೆಯಾಗಿದೆ. ಜತೆಗೆ ಜನತಾ ಜೀವವೈವಿಧ್ಯ ದಾಖಲಾತಿ’ ತಯಾರಿಸುವ ಪ್ರಕ್ರಿಯೆ ನಡೆದಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪ್ರಗತಿ ಉತ್ತಮವಾಗಿದೆ.-ಕೆ.ಆರ್. ಪ್ರಸನ್ನ, ತಾಂತ್ರಿಕ ಕಾರ್ಯನಿರ್ವಾಹಕ (ಸಸ್ಯಶಾಸ್ತ್ರ) ಕರ್ನಾಟಕ ಜೀವವೈವಿಧ್ಯ ಮಂಡಳಿ * ರಫೀಕ್ ಅಹ್ಮದ್