Advertisement

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರೂಪುರೇಷೆ: ಬಿಜೆಪಿ

04:01 PM Jul 08, 2018 | Harsha Rao |

ಉಡುಪಿ: ಉಡುಪಿ ಜಿಲ್ಲಾ ಅಭಿವೃದ್ಧಿಗೆ ವಿಶೇಷವಾಗಿ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು. 

Advertisement

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ವಿಧಾನ ಸಭೆಯ ಮುಖ್ಯ ಸಚೇತಕ ಸುನೀಲ್‌ ಕುಮಾರ್‌ ಅವರ ಬೆಂಗಳೂರು ಕಚೇರಿಯಲ್ಲಿ ಜಿಲ್ಲೆಯ ಐದು ಶಾಸಕರು ಮತ್ತು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಸಭೆ ನಡೆಸಲಾಗಿದ್ದು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.  

ಮರಳು ಸಮಸ್ಯೆ
ಈಗ ಕಠಿನ ನಿಯಮಗಳಿಂದಾಗಿ ಮರಳು ತೆಗೆಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸಿಎಂ ಜತೆ ಮಾತುಕತೆ ನಡೆಸಿ, ಅವಿಭಜಿತ ದ.ಕ.ಜಿಲ್ಲೆಯ ಅಧಿಕಾರಿಗಳ ಮತ್ತು ಶಾಸಕರ ಸಭೆ ನಡೆಸಿ ಮರಳಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ನಿರ್ಧರಿಸಲಾಗಿದೆ ಎಂದರು.  

ಸಿಆರ್‌ಝೆಡ್‌ ಸಮಸ್ಯೆ
ಕೇರಳ, ಗೋವಾ ರಾಜ್ಯಗಳಲ್ಲಿ ಸಿಆರ್‌ಝೆಡ್‌ ವ್ಯಾಪ್ತಿ 50 ಮೀ.ಗೆ ನಿಗದಿಗೊಳಿಸಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ 500 ಮೀ. ಇದೆ. ಇದರಿಂದ ನಮ್ಮಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿ, ಇತರ ಕೆಲಸಕ್ಕೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಸಿಆರ್‌ಝಡ್‌ ವ್ಯಾಪ್ತಿಯನ್ನು 50ಮೀ. ಗೆ ಸೀಮಿತಗೊಳಿಸಬೇಕೆನ್ನುವುದು ನಮ್ಮ ಒತ್ತಾಯ. ಇನ್ನು ಡೀಮ್ಡ್ ಫಾರೆಸ್ಟ್‌ ಸಮಸ್ಯೆಯಿಂದ ರಸ್ತೆ, ವಿದ್ಯುತ್‌ ಲೈನ್‌ ಸಂಪರ್ಕಕ್ಕೂ ಅವಕಾಶವಿಲ್ಲ. ಆದ್ದರಿಂದ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸಚಿವರಾದ ಅನಂತಕುಮಾರ್‌ ಹೆಗಡೆ, ಸದಾನಂದ ಗೌಡರನ್ನು ಸಂಪರ್ಕಿಸಿ, ಸಂಬಂಧಪಟ್ಟ ಸಚಿವರ ಬಳಿ ನಿಯೋಗ ಕೊಂಡೊಯ್ಯುವ ಜವಾಬ್ದಾರಿಯನ್ನು  ಸುನೀಲ್‌ ಕುಮಾರ್‌ಗೆ ವಹಿಸಲಾಗಿದೆ ಎಂದರು. 

ಪೂರ್ಣ ತಾಲೂಕು ಸಂಕಲ್ಪ
ಹಿಂದಿನ ಸರಕಾರ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳನ್ನು  ಘೋಷಣೆ ಮಾಡಿದೆ. ಆದರೆ ಆ ತಾಲೂಕುಗಳಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಘೋಷಣೆಯಾದ ತಾಲೂಕುಗಳನ್ನು ಪೂರ್ಣಪ್ರಮಾಣದ ತಾಲೂಕುಗಳನ್ನಾಗಿ ರೂಪಿಸಲು ಆಯಾ ಕ್ಷೇತ್ರದ ಶಾಸಕರುಗಳಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ ಎಂದರು.

Advertisement

ಗೊಂದಲದ ಬಜೆಟ್‌
ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರಕಾರ ಮಂಡಿಸಿದ ಬಜೆಟ್‌ ಗೊಂದಲ ಬಜೆಟ್‌ ಆಗಿದೆ. ಸಿದ್ದರಾಮಯ್ಯ ಸರಕಾರದ ಯೋಜನೆ ಮುಂದುವರಿಸಲಾಗಿದೆ ಎನ್ನುತ್ತಾರೆ, ಇನ್ನೊಂದೆಡೆ ಪೂರ್ಣ ಬಜೆಟ್‌ ಮಂಡಿಸಿದ್ದೇನೆ ಎನ್ನುತ್ತಾರೆ ಹಿಂದಿನ ಸರಕಾರದ ಬಜೆಟ್‌ ಮುಂದುವರಿಸಿದ್ದಾದಲ್ಲಿ ಪೂರ್ಣ ಬಜೆಟ್‌ ಹೇಗಾತ್ತದೆ ಎಂದು ಪ್ರಶ್ನಿಸಿದರು. ಬಜೆಟ್‌ನಲ್ಲಿ ಕರಾವಳಿಯನ್ನು ನಿರ್ಲಕ್ಷ್ಯ ಮಾಡಿರುವುದನ್ನು ಬಿಜೆಪಿ ಖಂಡಿಸುತ್ತಿದ್ದು, ಈ ಕುರಿತು ಶೀಘ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಮಾಜಿ ಸಚಿವರ ವೈಫ‌ಲ್ಯ
ಮಲ್ಪೆ-ಆದಿಉಡುಪಿ ರಸ್ತೆ ವಿಸ್ತರಣೆಗೊಳ್ಳದೆ ಇರುವುದು ಮಾಜಿ ಸಚಿವರ ವೈಫ‌ಲ್ಯ. ರಾಜ್ಯಸರಕಾರದಿಂದ ಭೂಸ್ವಾಧಿನ ಪ್ರಕ್ರಿಯೆ ಮಾಡಿಸಿಕೊಟ್ಟಿ ದ್ದಲ್ಲಿ ಖಂಡಿತವಾಗಿ ಅಗಲೀಕರಣ ಕಾಮಗಾರಿಗೆ ಚಾಲನೆ ಸಿಗುತ್ತಿತ್ತು ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿಕೆಗೆ ತಿರುಗೇಟು ನೀಡಿದರು.

ಪ್ರಮೋದ್‌ಗೆ ಶಾಶ್ವತ ಗೇಟ್‌ ಬಂದ್‌
ಪ್ರಮೋದ್‌ ಮಧ್ವರಾಜ್‌ ಬಿಜೆಪಿಗೆ ಬರುವ ವಿಚಾರದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಬಹಳಷ್ಟು ಜನರಿದ್ದೇವೆ. ನಮಗೆ ಇನ್ನೊಬ್ಬರನ್ನು ಆಹ್ವಾನ ಮಾಡಿಕೊಳ್ಳುವ ಆವಶ್ಯಕತೆ ಇಲ್ಲ. ಆದ್ದರಿಂದ ಪ್ರಮೋದ್‌ ಮಧ್ವರಾಜ್‌ ಅವರಿಗೆ ನಮ್ಮ ಗೇಟ್‌ ಶಾಶ್ವತವಾಗಿ ಬಂದ್‌ ಆಗಲಿದೆ ಎಂದರು.

ಬಿಜೆಪಿ ವಿರುದ್ಧ ಕಾಂಗ್ರೆಸ್‌ ಷಡ್ಯಂತ್ರ
ಬೀದಿದೀಪ ದುರವಸ್ಥೆ ಕುರಿತು ಬಿಜೆಪಿ ವಿರುದ್ಧ ಪ್ರಮೋದ್‌ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಹೆಗ್ಡೆ, ಬಿಜೆಪಿಗೆ ಬೇರೆಯವರ ಮುಖಕ್ಕೆ ಮಸಿ ಬಳಿದು ಲಾಭ ಮಾಡಿಕೊಳ್ಳುವ ಬುದ್ಧಿ ಇಲ್ಲ. ಇಂತಹ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದರು.

ಪ್ರತಿ ತಿಂಗಳು ಸಭೆ
ಇನ್ನು ಮುಂದೆ ಪ್ರತಿ ತಿಂಗಳು ಸಂಸದರು, ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಇದರಲ್ಲಿ ಜಿಲ್ಲಾ ಅಭಿವೃದ್ಧಿಗೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತದೆ.

-ಮಟ್ಟಾರು ರತ್ನಾಕರ ಹೆಗ್ಡೆ 

Advertisement

Udayavani is now on Telegram. Click here to join our channel and stay updated with the latest news.

Next