ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ತಮ್ಮ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ್ ನೀಡಿರುವ ಪ್ರತಿಕ್ರಿಯೆಗೆ ತಿರುಗೇಟು ಕೊಟ್ಟಿರುವ ಸಚಿವ ಡಿ.ಕೆ. ಶಿವಕುಮಾರ್, “ಈ ಬಗ್ಗೆ ಹೈಕಮಾಂಡ್‌ಗೆ ದೂರು ನೀಡಿದರೆ, ಆ ಶಿಕ್ಷೆಯನ್ನು ಪ್ರಸಾದವಾಗಿ ಸ್ವೀಕರಿಸುತ್ತೇನೆ ಎಂದು ಖಾರವಾಗಿ ಹೇಳಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ನಾನು ಸ್ಪಷ್ಟವಾಗಿ ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿದ್ದೇನೆ. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಇದು ಡಿ ಕೆ ಶಿವಕುಮಾರ್ ಸ್ಟಾಂಡ್ ಎಂದಿದ್ದಾರೆ.
ನಾನು ಯಾವುದಕ್ಕೂ ಮೂಗು ತೂರಿಸಲ್ಲ. ಅವರು (ಎಂ.ಬಿ. ಪಾಟೀಲ್) ಏನಾದ್ರು ಮಾತಾಡಲಿ, ಅವರೆಲ್ಲ ನನ್ನ ಬ್ರದರ್ಸ್, ನನ್ನ ಗುರುಗಳು, ನಾನು ಅವರ ಶಿಷ್ಯ. ನನ್ನ ಹೇಳಿಕೆ ಅದು ನನ್ನ ವೈಯಕ್ತಿಕ ಅಭಿಪ್ರಾಯ, ಅದರ ಬಗ್ಗೆ ಟೀಕೆ ಟಿಪ್ಪಣಿ ಮಾಡಲಿ. ಪಕ್ಷಕ್ಕೆ ಡ್ಯಾಮೇಜ… ಆಗೋ ಬಗ್ಗೆ. ಅದು ನಮ್ಮ ಪಕ್ಷ ತೀರ್ಮಾನ ಮಾಡುತ್ತೆ. ಹೈಕಮಾಂಡ್‌ಗೆ ದೂರು ನೀಡಿದ್ರೆ, ಆ ಶಿಕ್ಷೆಯನ್ನು ನಾನು ಪ್ರಸಾದ ಅಂತ ಸ್ವೀಕರಿಸುತ್ತೇನೆ ಎಂದು ಹೇಳಿದರು.
ಎಂಬಿಪಿ ಏನು ಹೇಳಿದ್ದರು?: ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯದ ಕುರಿತು ಪ್ರಸಕ್ತ ಚುನಾವಣೆಯಲ್ಲಿ ಯಾರೂ ಪ್ರಸ್ತಾಪಿಸಿಲ್ಲ. ಆದರೂ ಸಚಿವ ಡಿ.ಕೆ.ಶಿವಕುಮಾರ್ ಪದೇ ಪದೆ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಕ್ಷಮೆ ಕೇಳುವ ಮೂಲಕ ನಮ್ಮನ್ನು ಕೆಣಕುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ನೇರವಾಗಿ ದೂರವಾಣಿ ಕರೆ ಮಾಡಿ, ನಮ್ಮ ಧರ್ಮದ ಬಗ್ಗೆ ಮಾತನಾಡಲು ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ನೀಡಿದವರು ಯಾರು? ಇವರ ವರ್ತನೆ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಬಳ್ಳಾರಿ ಉಪ ಚುನಾವಣೆ ವೇಳೆಯೂ ಡಿ.ಕೆ.ಶಿವಕುಮಾರ್, ಪ್ರತ್ಯೇಕ ಧರ್ಮ ವಿಚಾರದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದಿಂದ ತಪ್ಪಾಗಿದೆ. ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು. ಇದು ಇಬ್ಬರು ರಾಜಕಾರಣಿಗಳ ನಡುವೆ ಆಂತರಿಕೆ ಸಮರಕ್ಕೆ ಕಾರಣವಾಗಿದೆ.