ಹಾಯ್ ಹುಡುಗಿ,
ಚೆನ್ನಾಗಿದ್ದೀಯಾ? ನಿನ್ಗೆನು? ಯಾವಾಗಲೂ ಖುಷಿಯಾಗಿಯೇ ಇರ್ತೀಯಾ. ಆದ್ರೆ, ನಾನೇ ನಿನ್ನ ಪ್ರೀತಿಯಲ್ಲಿ ಬಿದ್ದ ಮೇಲೆ, ಅಂದುಕೊಂಡಂತೆ ಏನೂ ಆಗದೆ ಕಂಗಾಲಾಗಿದೀನಿ. ಪ್ರಪಂಚದಲ್ಲಿ, ಪ್ರತಿಯೊಂದು ಸಂಬಂಧಕ್ಕೂ ಒಂದು ಕೊನೆ ದಿನಾಂಕವಿರುತ್ತದೆಯಂತೆ. ಹಾಗೆಯೇ, ನಮ್ಮಿಬ್ಬರ ನಡುವಿನ ಅನುಬಂಧಕ್ಕೆ ಈಗ ಕೊನೆಗಾಲ ಬಂದಿದೆ ಅಂತನಿಸುತ್ತದೆ.
23 ವರ್ಷಗಳ ನನ್ನ ಜೀವನದಲ್ಲಿ ಅಮ್ಮನನ್ನು ಬಿಟ್ಟರೆ ಬೇರೆ ಯಾವ ಹೆಣ್ಣನ್ನು ಪ್ರೀತಿಸಿರಲಿಲ್ಲ. ನನ್ನ ತಾಯಿಯ ನಂತರ ನಾನು ಅಷ್ಟೇ ಗಾಢವಾಗಿ ಪ್ರೀತಿಸುವುದು ನಿನ್ನನ್ನೇ. ಅದಕ್ಕೆ ಕಾರಣ, ಯಾವಾಗಲೂ ಖುಷಿಯಿಂದ ಹೊಳೆಯುವ ನಿನ್ನ ನಗು ಮುಖ. ಆ ಮುಖವನ್ನು ನಾನು ಯಾವಾಗಲೂ ನನ್ನ ತಾಯಿಯಲ್ಲಿ ನೋಡುತ್ತಿದ್ದೆ.
ನಿನ್ನನ್ನು ನಾನು ಸಾಮಾನ್ಯ ಹುಡುಗಿಯೆಂದು ಪ್ರೀತಿಸಿದ್ದರೆ, ನಿನ್ನ ಮಾತಿನಂತೆಯೇ ನಿನ್ನ ಮೇಲಿನ ಎಲ್ಲಾ ಭಾವನೆಗಳನ್ನು ಕಿತ್ತೆಸೆದು ಸಾಮಾನ್ಯ ಸ್ನೇಹಿತನಂತೆ ಇರಬಹುದಿತ್ತೇನೋ? ಆದರೆ, ನಾನು ನಿನ್ನ ಆ ಹೆಣ್ತನದಲ್ಲಿ ನನ್ನ ತಾಯಿಯನ್ನು ಕಂಡಿದ್ದೇನೆ. ಆ ಕಾರಣದಿಂದಲೇ ನೀನು “ನನಗೆ ಇಷ್ಟವಿಲ್ಲ’ ಎಂದು ಎಷ್ಟೇ ಹೇಳುತ್ತಿದ್ದರೂ, ನೀನೇ ಬೇಕೆಂದು ನಾನು ಪೀಡಿಸುತ್ತಿರುವುದು.
ಹೀಗೆ ಪ್ರೇಮವೆಂಬ ನನ್ನ ವಾದದಿಂದ, ಸ್ನೇಹವೆಂಬ ನಿನ್ನ ವಾದದಿಂದ ನಮ್ಮಿಬ್ಬರ ನಡುವೆ ಅಪಾರ್ಥಗಳುಂಟಾಗಿ, ಕೊನೆಗೆ ನಾನು ನಿನ್ನ ಸ್ನೇಹವನ್ನೂ ಕಳೆದುಕೊಳ್ಳಬೇಕಾಯಿತು. ಈಗ ನಿನ್ನ ಪಾಡಿಗೆ ನೀನು, ನನ್ನ ಪಾಡಿಗೆ ನಾನಿರಬಹುದು. ಆದರೆ ನನ್ನ ಜೀವನದಲ್ಲಿ ಬಂದ ಯಾವ ವ್ಯಕ್ತಿಯನ್ನೂ ನಾನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಯಾವುದೇ ಸಂಬಂಧ ಇರಲಿ, ಎಂದೂ ಒಬ್ಬರ ಕಡೆಯಿಂದಲೇ ತಪ್ಪುಗಳಾಗುವುದಿಲ್ಲ. ಇಬ್ಬರೂ ತಪ್ಪುಗಳನ್ನು ಮಾಡುತ್ತಾರೆ. ಪರಸ್ಪರರ ನಡುವಿನ ತಪ್ಪುಗಳನ್ನು ಅರ್ಥೈಸಿಕೊಂಡು ಕ್ಷಮಿಸುತ್ತಾ ಮುನ್ನಡೆಯುವುದೇ ಸ್ವತ್ಛ ಪ್ರೀತಿಯ ಸಂಕೇತ. ಹೇಳು: ನನ್ನನ್ನು ಕ್ಷಮಿಸುವೆಯಾ?
ಇಂತಿ,
ಸದಾ ನಿನ್ನನ್ನೇ ಪ್ರೀತಿಸುವ
ಗಿರೀಶ್ ಚಂದ್ರ ವೈ.ಆರ್.