Advertisement

ಹಳೆಯದನ್ನು ಮರೆತಿರುವವರಿಗೆ..

06:00 AM Jun 15, 2018 | Team Udayavani |

“ನಾನೀಗ ಹಳೆಯ ಕ್ಲೈಮ್ಯಾಕ್ಸ್‌ ಮರೆತು ಹೋಗಿದ್ದೇನೆ. ಈಗಷ್ಟೇ ಹೊಸ ಕ್ಲೈಮ್ಯಾಕ್ಸ್‌ ಶುರು ಮಾಡಿದ್ದೇನೆ …’ 
– ಚಿತ್ರದಲ್ಲಿ ನಾಯಕ ತನ್ನ ಹಳೆಯ ಪ್ರೇಯಸಿಗೆ ಈ ಡೈಲಾಗ್‌ ಹೇಳುತ್ತಾನೆ. ಹಾಗಾಗಿಯೇ ಚಿತ್ರಕ್ಕೆ “ಹೊಸ ಕ್ಲೈಮ್ಯಾಕ್ಸ್‌’ ಎಂದು ಹೆಸರಿಟ್ಟಿರುವುದಾಗಿ ಹೇಳುತ್ತಾ ಹೋದರು ನಿರ್ದೇಶಕಿ ಡಾ.ಶ್ಯಾಲಿ. ಇವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ನಿರ್ಮಾಣವೂ ಇವರದೇ. ಕೊಡಗಿನ ಮೂಲದ ಶ್ಯಾಲಿ ಓದಿದ್ದೆಲ್ಲವೂ ಜರ್ಮನಿಯಲ್ಲಿ. ಸೈಕಾಲಜಿಯನ್ನೂ ಓದಿಕೊಂಡಿದ್ದಾರೆ. ಸಾಲದೆಂಬಂತೆ ಸುಮಾರು 55 ದೇಶಗಳನ್ನು ಸುತ್ತಿ ಬಂದಿದ್ದಾರೆ. ಒಮ್ಮೆ ಬೆಂಗಳೂರಿಗೆ ಬಂದಾಗ, ವಕೀಲರೊಬ್ಬರ ಪರಿಚಯವಾಗಿದೆ. ಅವರೊಂದಿಗೆ ಮಾತುಕತೆ ನಡೆಸುವಾಗ, ಡಾ. ಶ್ಯಾಲಿ ಅವರಿಗೆ ಗೊತ್ತಾಗಿದ್ದು, ದಿನಕ್ಕೆ ಏನಿಲ್ಲವೆಂದರೂ ಸುಮಾರು 20 ಡೈವೊರ್ಸ್‌ ಕೇಸ್‌ಗಳು ನಡೆಯುತ್ತವೆ ಎಂಬ ವಿಷಯ. ಆಗ ಶ್ಯಾಲಿ ಅವರಿಗೆ ಯಾಕೆ, ಈ ವಿಷಯದ ಮೇಲೊಂದು ಸಿನಿಮಾ ಮಾಡಬಾರದು ಅಂತೆನಿಸಿ, “ಹೊಸ ಕ್ಲೈಮ್ಯಾಕ್ಸ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರ ಮುಗಿದಿದ್ದು, ಇಷ್ಟರಲ್ಲೇ ತೆರೆಗೆ ತರಲು ಅಣಿಯಾಗಿದ್ದಾರೆ ಶ್ಯಾಲಿ.

Advertisement

“ನೈಜ ಘಟನೆಗಳ ಮೇಲೆ ಮೂಡಿಬಂದ ಚಿತ್ರ ಇದು. ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿರುವ ಹುಡುಗ, ಹುಡುಗಿ ನಡುವೆ ಒಮ್ಮೆ ಮನಸ್ತಾಪ ಮೂಡಿದಾಗ ಏನೆಲ್ಲಾ ಆಗುತ್ತೆ ಎಂಬುದರ ಮೇಲೆ ಕಥೆ ಹೆಣೆದಿದ್ದೇನೆ. ಆ ಹುಡುಗ ತನ್ನ ಹುಡುಗಿಯನ್ನು ಕ್ರಮೇಣ ತಿರಸ್ಕರಿಸುತ್ತಾ ಹೋಗುತ್ತಾನೆ. ಕೊನೆಗೆ ಅವನಿಗೆ ಮತ್ತೂಬ್ಬಳ ಪರಿಚಯವಾಗುತ್ತೆ. ಆಕೆ ಅವನ ಕನಸು ನನಸು ಮಾಡುವಲ್ಲಿ ಸಾಥ್‌ ಕೊಡುತ್ತಾಳೆ. ಅವನು ಎತ್ತರಕ್ಕೆ ಬೆಳೆದಿರುವುದನ್ನು ಗಮನಿಸಿದ ಮೊದಲ ಹುಡುಗಿ, ಇವನ ಬಳಿ ಬಂದು, ನಾನು ತಪ್ಪು ಮಾಡಿದೆ, ಇನ್ಮುಂದೆ ಇಂತಹ ತಪ್ಪು ಆಗಲ್ಲ. ನನ್ನ ಪ್ರೀತಿಸು ಅಂದಾಗ, ಆ ಹುಡುಗ “ನಾನು ಹಳೆಯ ಕ್ಲೈಮ್ಯಾಕ್ಸ್‌ ಮರೆತಿದ್ದೇನೆ. ಈಗ ಹೊಸ ಕ್ಲೈಮ್ಯಾಕ್ಸ್‌ ಶುರು ಮಾಡಿದ್ದೇನೆ’ ಎನ್ನುತ್ತಾನೆ. ಆಮೇಲೆ ಏನೆಲ್ಲಾ ಆಗುತ್ತೆ ಎಂಬುದೇ ಸಸ್ಪೆನ್ಸ್‌’ ಎನ್ನುತ್ತಾರೆ ನಿರ್ದೇಶಕರು.

ಚಿತ್ರದಲ್ಲಿ ಅನಿತಾ ಭಟ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಮಾಡೆಲ್‌ ಆಗಿ ನಟಿಸಿದ್ದು, ಮಾಡೆಲ್‌ ಒಳ್ಳೆಯ ಅವಕಾಶಕ್ಕಾಗಿ ಹಲವು ನಗರಗಳಿಗೆ ಓಡಾಡುತ್ತಾಳೆ. ಕ್ರಮೇಣ ತನ್ನ ಪ್ರಿಯತಮನ ಮೇಲಿನ ಒಲವು ಕಡಿಮೆಯಾಗುತ್ತೆ. ಆಮೇಲೆ ನಡೆಯೋದೆಲ್ಲವೂ ಹೊಸದಾಗಿ ಇರಲಿದೆ. ಇಲ್ಲಿ ಇಡೀ ಚಿತ್ರದ ಹೈಲೆಟ್‌ ಆಗಿರುವುದರಿಂದ ಜವಾಬ್ದಾರಿಯಿಂದ ಪಾತ್ರ ನಿರ್ವಹಿಸಿರುವುದಾಗಿ ಹೇಳಿಕೊಂಡರು ಅನಿತಾ ಭಟ್‌.

ನರೇಶ್‌ ಗಾಂಧಿ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಈ ಹಿಂದೆ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸಿದ್ದ ಅವರು, ಈ ಚಿತ್ರದ ಮೂಲಕ ಹೀರೋ ಪಟ್ಟ ಅಲಂಕರಿಸಿದ್ದಾರೆ. ಚಿತ್ರದಲ್ಲಿ ತಾನೊಬ್ಬ ನಟ ಆಗಬೇಕು ಎಂದು ಕನಸು ಕಾಣುವ ಹುಡುಗನಿಗೆ ಒಬ್ಟಾಕೆ ಸಾಥ್‌ ಕೊಡುತ್ತಾಳೆ. ಆಮೇಲೆ ಅವನ ಲೈಫ್ ಹೇಗೆ ತಿರುವು ಪಡೆದುಕೊಳ್ಳುತ್ತೆ ಎಂಬುದೇ ಕಥೆ ಎನ್ನುತ್ತಾರೆ ನರೇಶ್‌ ಗಾಂಧಿ.

ಚಿತ್ರದ ಮೂರು ಹಾಡುಗಳಿಗೆ ಮಾರುತಿ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ತಾಂತ್ರಿಕ ನಿರ್ದೇಶಕರಾಗಿ ಎಂ.ಡಿ. ಕೌಶಿಕ್‌ ಕಾರ್ಯ ನಿರ್ವಹಿಸಿದ್ದಾರೆ. ಗೌರಿ ವೆಂಕಟೇಶ್‌ ಛಾಯಾಗ್ರಹಣವಿದೆ. ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ಅರುಣ್‌ ಥಾಮಸ್‌ ಅವರ ಸಂಕಲನವಿದೆ. ಅಂದು ಚಿತ್ರತಂಡ ತಮ್ಮ ಚಿತ್ರದ ಟ್ರೇಲರ್‌ ಮತ್ತು ಹಾಡು ತೋರಿಸುವ ಮೂಲಕ ತಮ್ಮ “ಹೊಸ ಕ್ಲೈಮ್ಯಾಕ್ಸ್‌’ ವಿವರ ಕೊಡುವ ಹೊತ್ತಿಗೆ ಸಮಯ ಮೀರಿತ್ತು. ಮಾತುಕತೆಗೂ ಬ್ರೇಕ್‌ ಬಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next