ಜಪ್ಪಿನಮೊಗರು: ದೇಶದಲ್ಲಿ ಮಂಗಳೂರಿಗೆ ಮಹತ್ವದ ಸ್ಥಾನವಿದೆ. ಎಲ್ಲ ಕ್ಷೇತ್ರಗಳಲ್ಲೂ ಉಜ್ವಲ ಅವಕಾಶಗಳೂ ಇವೆ. ಅದನ್ನು ನಾವು ಎಂದಿಗೂ ಕಳೆದುಕೊಳ್ಳಬಾರದು. ಸಮಾಜದಲ್ಲಿ ದ್ವೇಷ ಪಾರಮ್ಯ ಮೆರೆಯಲು ಅವಕಾಶ ನೀಡಲೇಬಾರದು ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಆಶಿಸಿದರು.
ಜಪ್ಪಿನಮೊಗರು ಯೇನಪೊಯ ಸಾಕ್ಸರ್ ಗ್ರೌಂಡ್‌ನಲ್ಲಿ ಶನಿವಾರ ಸಂಜೆ ಆಯೋಜಿಸಲಾದ ಇಫ್ತಾರ್ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಕೂಡ ಆತ ಅತ್ಯುತ್ತಮ ಮನುಷ್ಯನಾಗುವುದು ಎಲ್ಲಕ್ಕಿಂತ ಮುಖ್ಯವಾಗಿದೆ. ಸಮಾಜದಲ್ಲಿ ಸೌಹಾರ್ದ ಕಾಪಾಡುವ ಅಗತ್ಯವಿದೆ. ಮಾನವರಾಗಿ ಬಾಳಿದರೆ ಮಾತ್ರ ಸೌಹಾರ್ದ ಬೆಸೆಯಲು ಸಾಧ್ಯ. ದ್ವೇಷ ದೂರವಿಟ್ಟು, ಒಟ್ಟಾಗಿ ಬದುಕಬೇಕು. ನಮ್ಮ ಮಾತುಗಳು ಸಭೆಗಳಿಗೆ ಸೀಮಿತವಾಗಿರದೆ, ಹೃದಯದಿಂದ ಬರಬೇಕು ಎಂದರು.
ವಿಶ್ವ ಭ್ರಾತೃತ್ವದ ಸಂದೇಶ
ಮಂಗಳೂರು ಬಿಷಪ್ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ಮುಸ್ಲಿಮರ ಧರ್ಮ ಗ್ರಂಥವು ವಿಶ್ವ ಭ್ರಾತೃತ್ವದ ಸಂದೇಶ ಸಾರುತ್ತದೆ. ಉಪವಾಸವು ಹಸಿವಿನ ಜತೆಗೆ ಎಲ್ಲ ಕೆಡುಕುಗಳಿಂದ ದೂರವಿರಲು ಹೇಳುತ್ತದೆ. ಹಿಂದೂ, ಕ್ರೈಸ್ತರಲ್ಲೂ ಉಪವಾಸ ಆಚರಣೆಗಳಿವೆ. ಇಂಥ ಧಾರ್ಮಿಕ ಆಚರಣೆಗಳೊಂದಿಗೆ ನಾವೆಲ್ಲ ಮನುಷ್ಯರು ಎಂಬ ಭಾವನೆ ಬೇಕು. ಒಬ್ಬರ ಕಷ್ಟ, ನ್ಯೂನತೆಗಳನ್ನು ಇನ್ನೊಬ್ಬರು ಅರ್ಥ ಮಾಡಿಕೊಂಡು, ಸಹಿಷ್ಣುತೆ, ಪ್ರೀತಿ ವಿಶ್ವಾಸದಿಂದ ಬಾಳಿದರೆ ದೇವರೂ ಮೆಚ್ಚುತ್ತಾರೆ. ಬಂಧುತ್ವದ ಬದುಕು ನಾವೆಲ್ಲ ಮೈಗೂಡಿಸಿಕೊಳ್ಳಬೇಕು ಎಂದರು.
ಯೇನಪೊಯ ವಿಶ್ವವಿದ್ಯಾಲಯದ ಕುಲಾಧಿಪತಿ ಯೇನಪೊಯ ಅಬ್ದುಲ್ಲ ಕುಂಞಿ ಮಾತನಾಡಿ, ಪ್ರೀತಿ, ವಿಶ್ವಾಸ ವೃದ್ಧಿಯೇ ಇಸ್ಲಾಮ್ ಮತ್ತು ಉಪವಾಸದ ಉದ್ದೇಶ. ಜಗತ್ತಿನ ಎಲ್ಲ ಧರ್ಮ, ಜಾತಿ, ಮತ, ವರ್ಗ, ವರ್ಣ ಭಾಷೆಯ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಂಡು ಪರಿಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವುದೇ ಮಾನವ ಧರ್ಮ. ಎಲ್ಲ ಧರ್ಮಗಳು ದಯೆಯನ್ನು ಪ್ರತಿಪಾದಿಸುತ್ತಿವೆ. ನಾವು ನಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಎಂದರು.
ರಾಜಕೀಯ, ಧಾರ್ಮಿಕ, ಸಾಮಾಜಿಕ, ವೈದ್ಯಕೀಯ, ಶೈಕ್ಷಣಿಕ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.