Advertisement

ಮುಗಿದ ಕ್ಯಾಸೆಟ್ ಯುಗ…ಎಂದೆಂದೂ ಮರೆಯದ ಜನಪ್ರಿಯ ಸಿನಿಮಾ ಹಾಡುಗಳು

10:12 AM Feb 09, 2020 | Nagendra Trasi |

ಬೆಸುಗೆ, ಬೆಸುಗೆ ಜೀವನವೆಲ್ಲಾ ಸುಂದರ ಬೆಸುಗೆ, ನೀರ ಬಿಟ್ಟು ನೆಲದ ಮೇಲೆ (ಹೊಂಬಿಸಿಲು), ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ, ಇಲ್ಲೆ ಸ್ವರ್ಗ, ಇಲ್ಲೇ ನರಕ (ನಾಗರಹೊಳೆ), ನನ್ನ ನಿನ್ನ ಆಸೆ ನಮ್ಮ ಪ್ರೇಮ ಭಾಷೆ(ಮಿಡಿದ ಶೃತಿ), ಅಂತಿಂತ ಗಂಡು ನಾನಲ್ಲ, ಬಾರೆ ಸಂತೆಗೆ ಹೋಗೋಣ, ಬಂತು ಬಂತು ಕರೆಂಟು ಬಂತು, ಮೇಘ ಬಂತು ಮೇಘ, ಓಹೋ ಹಿಮಾಲಯ, ಶಿಲೆಗಳು ಸಂಗೀತವಾ, ಟುವ್ವಿ, ಟುವ್ವಿ, ಯಾವ ದೇವಶಿಲ್ಪಿ, ಆಶಿಖಿ, ದಿಲ್ ವಾಲೆ ದುಲ್ಹಾನಿಯಾ ಲೇ ಜಾಯೇಂಗೆ, ಬಾಂಬೆ, ದಿಲ್ ತೋ ಪಾಗಲ್ ಹೈ, ಹಮ್ ಆಮ್ ಕೆ ಹೈ ಕೌನ್….ಹೀಗೆ ಕನ್ನಡ, ಹಿಂದಿ ಸಿನಿಮಾಗಳ ಸಾಲು, ಸಾಲು ಮಧುರ ಹಾಡು ಕೇಳಿಸಿಕೊಳ್ಳುತ್ತಿದ್ದದ್ದು…ಮೊದಲಿಗೆ ರೇಡಿಯೋ ನಂತರ ನಮಗಿಷ್ಟ ಬಂದ ಹಾಡುಗಳನ್ನು ಕೇಳುತ್ತಿದ್ದದ್ದು ಕ್ಯಾಸೆಟ್ ಗಳಲ್ಲಿ!

Advertisement

ಹೌದು 1980 ಹಾಗೂ 1990ರ ಕಾಲಘಟ್ಟದಲ್ಲಿ ಸಿನಿಮಾ ಕ್ಷೇತ್ರಕ್ಕೆ ಮಹತ್ವದ ಕೊಂಡಿಯಾಗಿ ಬೆಳೆದದ್ದು ಆಡಿಯೋ ಕ್ಯಾಸೆಟ್ ಉದ್ಯಮ ಎಂಬುದರಲ್ಲಿ ಎರಡು ಮಾತಿಲ್ಲ. ಸಿನಿಮಾದ ಹಾಡುಗಳನ್ನು ಕೇಳುತ್ತಿದ್ದ ಶ್ರೋತೃಗಳಿಗೂ, ಮಾರಾಟಗಾರರಿಗೂ ದೊಡ್ಡ ಮಟ್ಟದ
ಪರಿಣಾಮವನ್ನೇ ಸೃಷ್ಟಿಸಿಬಿಟ್ಟಿದ್ದು ಕ್ಯಾಸೆಟ್ ಗಳು. 80-90ರ ದಶಕದಲ್ಲಿ ಕ್ಯಾಸೆಟ್ಸ್ ಮತ್ತು ಸ್ಟೀರಿಯೋ ಡೆಕ್ ಗೆ ಬಹುಬೇಡಿಕೆ ಬಂದು ಬಿಟ್ಟಿತ್ತು. ಅಂದು ಹಿಂದಿ ಸಿನಿಮಾದ ರೀಮಿಕ್ಸ್ ಆಲ್ಬಂ (ಚುರಾ ಲಿಯಾ ಹೈ, ದಮ್ ಮಸ್ತ್ ಖಲಂದರ್ ಮಸ್ತ್, ಮಸ್ತ್) ಸೇರಿದಂತೆ ಇಂಪಾದ ಹಾಡುಗಳ ಕ್ಯಾಸೆಟ್ಸ್ ಗಳಿಗೆ ಭರ್ಜರಿ ಬೇಡಿಕೆ ಇದ್ದಿತ್ತು.

ಏತನ್ಮಧ್ಯೆ 1992ರ ಸುಮಾರಿಗೆ ದಿಢೀರ್ ಬದಲಾವಣೆ ಎಂಬಂತೆ ಪ್ರಮುಖ ಆಡಿಯೋ ಕಂಪನಿಯಾಗಿ ಮ್ಯಾಗ್ನಸೌಂಡ್ ರೋಜಾ ಆಲ್ಬಂ ಅನ್ನು ಬಿಡುಗಡೆ ಮಾಡಿತ್ತು. ಇದರ ಹಿಂದಿ ಸಿನಿಮಾದ ಸೌಂಡ್ ಟ್ರ್ಯಾಕ್ ಅನ್ನು ಕಂಪೋಸ್ ಮಾಡಿತ್ತು ನವ ತರುಣ ಎ.ಆರ್.ರೆಹಮಾನ್! ರೋಜಾ ಮೆಲೋಡಿ ಹಾಡು ಸಿನಿಪ್ರಿಯರಿಗೆ ಅದ್ಭುತ ಲೋಕವನ್ನೇ ಸೃಷ್ಟಿಸಿಬಿಟ್ಟಿತ್ತು.

ಆಲ್ಬಂ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಹುತೇಕ ಎಲ್ಲಾ ಕ್ಯಾಸೆಟ್ ಅಂಗಡಿಗಳಲ್ಲಿ “ರೋಜಾ” ಹಾಡು ಪ್ರತಿಯೊಂದು “ಸೌಂಡ್ ಚೆಕ್” ಹಾದಿಯನ್ನೇ ಬದಲಾಯಿಸಿಬಿಟ್ಟಿತ್ತು. ಸ್ಟಿರಿಯೋ ಕ್ಯಾಸೆಟ್ ಡೆಕ್ ಖರೀದಿಸಿದ ಪ್ರತಿಯೊಬ್ಬ ಗ್ರಾಹಕರು ಚೋಟಿ ಸಿ ಆಶಾ(ಚಿನ್ನಾ,ಚಿನ್ನಾ ಆಸೈ) ಅಥವಾ
ರುಕ್ಮಿಣಿ, ರುಕ್ಮಿಣಿ ಹಾಡನ್ನು ಸೌಂಡ್ ಕ್ವಾಲಿಟಿ ಚೆಕ್ ಮಾಡಲು ಹೇಳುತ್ತಿದ್ದರು ವಿನಃ, ಬೇರೆ ಯಾವುದೇ ಹಾಡನ್ನು ಹಾಕಿ ಎಂದು ಕೇಳಿದ್ದೇ ಇಲ್ಲ ಎಂಬಷ್ಟರ ಮಟ್ಟಿಗೆ ರೋಜಾ ಭರ್ಜರಿ ಹವಾ ಸೃಷ್ಟಿಸಿಬಿಟ್ಟಿತ್ತು.

ರೋಜಾ ಕ್ಯಾಸೆಟ್ ಅನ್ನು ಕೇವಲ ಸೌಂಡ್ ಚೆಕ್ ಮಾಡಲು ಮಾತ್ರ ಉಪಯೋಗಿಸಲಾಗುತ್ತಿತ್ತಂತೆ. ಅಷ್ಟೇ ಅಲ್ಲ ಸಾವಿರಾರು ಕ್ಯಾಸೆಟ್ ಡೆಕ್ಸ್ ಮತ್ತು ಸ್ಪೀಕರ್ ಸೆಟ್ಸ್ ಅನ್ನು ಮಾರಾಟ ಮಾಡಲಾಗಿತ್ತು. ಎಲ್ಲಿಯವರೆಗೆ ಅಂದರೆ ಪ್ರತಿಯೊಂದು ಅಂಗಡಿಯಲ್ಲಿಯೂ ಕನಿಷ್ಟ ನೂರಾರು ಕ್ಯಾಸೆಟ್ ತಂದು ಇಟ್ಟುಕೊಳ್ಳುತ್ತಿದ್ದರಂತೆ. ನಂತರ ಎ.ಆರ್.ರೆಹಮಾನ್ ಅವರ ಮತ್ತೊಂದು ತಮಿಳು ಸೂಪರ್ ಹಿಟ್
ಸಂಗೀತ ದ ಜಂಟಲ್ ಮನ್ ಬಂದಾಗಲೂ ಅಷ್ಟೇ ಜನಪ್ರಿಯತೆ ಗಳಿಸಿತ್ತು.

Advertisement

ಎಆರ್ ರಹಮಾನ್, ಮಹಮ್ಮದ್ ರಫಿ, ಲತಾಮಂಗೇಶ್ಕರ್, ಪಿಬಿ ಶ್ರೀನಿವಾಸ್, ಯೇಸುದಾಸ್, ಎಸ್ಪಿ ಬಾಲಸುಬ್ರಮಣ್ಯಂ, ಇಳಯರಾಜ, ಘಂಟಸಾಲ, ಎಲ್ ಆರ್ ಈಶ್ವರಿ, ಮನ್ನಾ ಡೇ, ಎಸ್ ಡಿ ಬರ್ಮನ್, ಜಗಜಿತ್ ಸಿಂಗ್, ಬಪ್ಪಿ ಲಹಿರಿ ಹೀಗೆ ಹಲವು ಗಾಯಕರ ಸಿನಿಮಾ ಹಾಡುಗಳು ಕ್ಯಾಸೆಟ್ ಮಾರಾಟವಾಗಲು ಮತ್ತು ಸ್ಟೀರಿಯೋ ಡೆಕ್ ಮಾರಾಟಕ್ಕೆ ಹೆಚ್ಚಿನ ಅನುಕೂಲಕಲ್ಪಿಸಿಕೊಟ್ಟಿದ್ದವು. ಅದೇ ರೀತಿ ಕನ್ನಡದಲ್ಲಿ ಜನಪದ, ಭಾವಗೀತೆಗಳ ಕ್ಯಾಸೆಟ್ ಗಳು ಕೂಡಾ ಅಪಾರ ಶ್ರೋತೃಗಳನ್ನು ಸೃಷ್ಟಿಸಿತ್ತು. ಕೆಎಸ್ ನರಸಿಂಹಸ್ವಾಮಿ ಅವರ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ಕೆಎಸ್ ಅಶ್ವತ್ಥ್ ಅವರ ಕಂಚಿನ ಕಂಠದ ಹಾಡುಗಳನ್ನು ಮರೆಯಲೂ ಸಾಧ್ಯವೇ?

2000ನೇ ಇಸವಿ ನಂತರ ಕ್ಯಾಸೆಟ್ ಯುಗಾಂತ್ಯ!
1980-90ರ ದಶಕದವರೆಗೆ ಕ್ಯಾಸೆಟ್ ಟೇಪ್ಸ್ ಅತ್ಯಧಿಕ ಮಾರಾಟ ಕಂಡಿದ್ದವು. 1990ರ ದಶಕದಲ್ಲಿ ಭಾರತದಲ್ಲಿ ವಾರ್ಷಿಕವಾಗಿ ಕ್ಯಾಸೆಟ್ಸ್ ಮಾರಾಟವಾಗುತ್ತಿದ್ದದ್ದು ಬರೋಬ್ಬರಿ 180 ಮಿಲಿಯನ್ ಯೂನಿಟ್ಸ್! ಇದರಲ್ಲಿ ಪೈರೆಟ್ ಮಾರಾಟ ಕೂಡಾ ಸೇರಿತ್ತು. ಹೀಗಾಗಿ ಅಮೆರಿಕ
ಬಿಟ್ಟರೆ ಜಗತ್ತಿನಲ್ಲಿ ಭಾರತ ಕ್ಯಾಸೆಟ್ ಮಾರುಕಟ್ಟೆಗೆ ಎರಡನೇ ಅತೀ ದೊಡ್ಡ ದೇಶವಾಗಿತ್ತು. 1998ರ ಹೊತ್ತಿಗೆ ಕ್ಯಾಸೆಟ್ ಇಂಡಸ್ಟ್ರೀ ವಾರ್ಷಿಕ ಆದಾಯ 12 ಬಿಲಿಯನ್ ಡಾಲರ್ ನಷ್ಟಿತ್ತು. 2000ನೇ ಇಸವಿ ಆರಂಭದಲ್ಲಿ ಕ್ಯಾಸೆಟ್ಸ್ ಮಾರಾಟ ಪ್ರಮಾಣ ಇಳಿಮುಖವಾಗತೊಡಗಿತ್ತು…ಸಿನಿಮಾ ಕ್ಷೇತ್ರದಲ್ಲಿ ಬದಲಾವಣೆಯಾದಂತೆ ತಾಂತ್ರಿಕವಾಗಿಯೂ ಬದಲಾವಣೆಯಾಗತೊಡಗಿದ ಪರಿಣಾಮ ಕ್ಯಾಸೆಟ್ಸ್ ಜಾಗವನ್ನು ಸೀಡಿ ಕ್ರಮಿಸಿಕೊಂಡಿತ್ತು..ನಂತರ ಸೀಡಿ ಸ್ಥಳವನ್ನು ಡಿಜಿಟಲ್ ಯುಗ ಆಕ್ರಮಿಸಿಕೊಳ್ಳುವ ಮೂಲಕ ಕ್ಯಾಸೆಟ್ ಇದೀಗ ನೆನಪು ಮಾತ್ರವಾಗಿ ಉಳಿದಿದೆ!

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next