Advertisement
ಅವರೆಲ್ಲರೂ ಕ್ರಿಕೆಟ್ ಆಟವಾಡುತ್ತಿದ್ದರೆ, ನಾನೋ ಮೂರನೆಯ ತರಗತಿಯಲ್ಲಿ ಓದುತ್ತಿದ್ದವಳು, ಬ್ಯಾಟ್ ಎತ್ತಲು ಶಕ್ತಿಯಿಲ್ಲದಿದ್ದರೂ, ಅಣ್ಣನ ಪ್ರೋತ್ಸಾಹದ ಮಾತಿಗೆ ಖುಷಿಯಿಂದ, ಅವನೊಂದಿಗೆ ಬ್ಯಾಟಿಂಗ್ ಮಾಡಲು ರಾಹುಲ್ ಡ್ರಾವಿಡ್‌ನ ಶೈಲಿಯಲ್ಲಿ ನಿಂತದ್ದನ್ನು ಮರೆಯಲು ಸಾಧ್ಯವಿಲ್ಲ! ಚೆಂಡು ಮಾತ್ರ ಈ ಕ್ಷಣದಲ್ಲಿ ಇವಳನ್ನು ಮನೆಗೆ ಓಡಿಸುತ್ತೇನೆಂದು ಮೆಟ್ರೋ ಟ್ರೇನ್‌ನ ವೇಗದಲ್ಲಿ ಬರುತ್ತಿತ್ತು. ನನಗೋ ಬ್ಯಾಟ್ ಹಿಡಿದಿದ್ದೇನೆಂಬ ಸಂಭ್ರಮ ಮಸ್ತಿಷ್ಕದಲ್ಲಿ. ಕ್ಷಣಮಾತ್ರದಲ್ಲಿ ಏನಾಯಿತೋ ಏನೋ, ಎಲ್ಲರೂ ಕರತಾಡನ ಮಾಡಲು ಶುರು ಮಾಡಿದರು, ಮತ್ತೆ ತಿಳಿಯಿತು ಚೆಂಡು ಮೈದಾನವನ್ನು ದಾಟಿ, ಓಡಿ ಪೊದೆಯಲ್ಲಿ ಅಡಗಿ ಕುಳಿತಿದೆ ಎಂದು. ನನಗೆ ಸಂತಸವೋ ಸಂತಸ. ಆದರೂ ಮನದಲ್ಲೊಂದು ಗೊಂದಲ, ನನಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬಂದಿತೆಂದು. ಅಚ್ಚರಿಯಿಂದ ಬ್ಯಾಟ್‌ನತ್ತ ನೋಡಿದೆ. ಅಲ್ಲಿ ನಾಲ್ಕು ಕೈಗಳಿದ್ದವು. ನಾನು ಬ್ಯಾಟ್ ಸ್ಪರ್ಶಿಸಿದ್ದು ಮಾತ್ರ, ಶಕ್ತಿಯಿಂದ ಚೆಂಡನ್ನು ಹೊಡೆದದ್ದು ನನ್ನ ಪ್ರೀತಿಯ ಅಗ್ರಜ. ಅವನೇ ಚಿತ್ತನ್!
ಬಿ.ಇ., 7ನೆಯ ಸೆಮಿಸ್ಟರ್,
ಕೆನರಾ ಇಂಜಿನಿಯರಿಂಗ್ ಕಾಲೇಜು, ಬೆಂಜನಪದವು