Advertisement

2021ಕ್ಕೆ ಮುನ್ನುಡಿ: ಕೋವಿಡ್ ಕಲಿಸಿದ ಪಾಠಗಳು; ಮುಂಬರುವ ಶಿಕ್ಷಣ ಹೇಗಿರಬೇಕು?

06:41 PM Dec 31, 2020 | Team Udayavani |

ಕೋವಿಡ್ ನಂತರವೂ ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಮುಂದುವರಿಸುವ ಸೂಚನೆಗಳು ಕಾಣುತ್ತಿವೆ. ಕುಟುಂಬದ ಜೊತೆ ವೃತ್ತಿಯನ್ನೂ ನಿರ್ವಹಿಸುವ ಸಂಸ್ಕೃತಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಕಷ್ಟು ಸಮಯ ದೊರೆತಾಗಿದೆ. ಈಗ ಮೀನು-ತರಕಾರಿ ಮನೆಯ ಬಾಗಿಲಿಗೇ ಬರುತ್ತಿವೆ. ದೊಡ್ಡ ಮಾಲ್ ಮುಚ್ಚಿಹೋದರೆ ಅನಾಹುತವೇನಿಲ್ಲ. ಆದರೆ, ಮನೆಯ ಹತ್ತಿರದಲ್ಲೊಂದು ಪುಟ್ಟ ದಿನಸಿ ಅಂಗಡಿ ಇರಬೇಕೆಂಬುದು ಈಗ ಎಲ್ಲರಿಗೂ ಅರಿವಾಗಿದೆ. ಒತ್ತಾಯದಿಂದ ಧರಿಸಿದ ಮಾಸ್ಕ್ ನಮಗರಿವಿಲ್ಲದಂತೆ ನಮ್ಮ ವಸ್ತ್ರ ಸಂಹಿತೆಯ ಭಾಗವಾಗಿದೆ. ಮದುವೆಯ ಕರೆಯೋಲೆಯಲ್ಲಿ ಕುಟುಂಬ ಸಮೇತ ಬಂದು ಆಶೀರ್ವದಿಸಿ ಅನ್ನುವ ಬದಲು ವಧು-ವರರಿಗೆ ನಿಮ್ಮ ಆಶಿರ್ವಾದ  ಇರಲಿ ಎಂದಷ್ಟೇ ಮುದ್ರಿಸಲಾಗುತ್ತಿದೆ. ಬಿಸಿ ನೀರು ತುಂಬಿದ ಫ್ಲಾಸ್ಕನ್ನು ಲಂಚ್ ಬಾಕ್ಸಿನ ಜೊತೆ ಕೊಂಡೊಯ್ಯುವುದು ಈಗ ಅಷ್ಟು ಭಾರ ಎನಿಸುವುದಿಲ್ಲ. ದೂರದೂರಿಗೆ ಕೆಲಸ ಅರಿಸಿ ಹೋದವರಲ್ಲಿ ಅನೇಕರು ಶಾಶ್ವತವಾಗಿ ಊರಿಗೆ ಮರಳಿದ್ದಾರೆ. ಇದುವರೆಗೂ ಹಾಳು ಬಿದ್ದ ಭೂಮಿ ಈ ಮಳೆಗಾಲದಲ್ಲಿ ಹಸಿರಾಗುವ ನಿರೀಕ್ಷೆ ಇದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ.

Advertisement

ಹೊಸಕಾಲದ ಅವಶ್ಯಕತೆಗೆ ಹೊಂದಿಕೊಳ್ಳಲು  ಶಾಲೆಗಳು ಸಜ್ಜಾಗಿವೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

ಕಲಿಕೆಯ ಪರಿಸರವು ಮಗು ಕೇಂದ್ರಿತವಾಗಬೇಕೆಂಬ ಮಾತನ್ನು ಮತ್ತೆ ಮತ್ತೆ ಆಡಿದ್ದರಿಂದ ಕ್ಲೀಷೆಯಾಯಿತೇ ವಿನಃ ತರಗತಿ ಕೋಣೆಯ ಸಂಸ್ಕೃತಿಯಾಗಲಿಲ್ಲ. ಚಮಚದಲ್ಲಿ ತಿನ್ನಿಸುವ ಶಿಕ್ಷಣ ಪದ್ಧತಿಯು ಮಗುವಿನ ಯೋಚಿಸುವ ಶಕ್ತಿಯ ಮೇಲೆ ಸಾಕಷ್ಟು ಹಾನಿಯನ್ನುಂಟುಮಾಡಿದೆ. ಸ್ವಕಲಿಕೆಗೆ ಅವಕಾಶಗಳು ಕಡಿಮೆಯಾಗುತ್ತಾ ಬಾಯಿಪಾಠವೇ ಕಲಿಕೆ ಎಂಬ ತಪ್ಪು ಗ್ರಹಿಕೆಯನ್ನು ಆಧರಿಸಿದ ಮೌಲ್ಯಮಾಪನ ಪದ್ಧತಿಗೆ ಮಕ್ಕಳ ಬದುಕು ಬಲಿಯಾಗುತ್ತಿದೆ. ಜಗತ್ತನ್ನು ಮಗು ಸ್ವತಃ ಪರಿಶೋಧಿಸಬಲ್ಲದು ಎಂಬುದನ್ನು ದೊಡ್ಡವರ ಪ್ರಪಂಚವು ಅರ್ಥಮಾಡಿಕೊಳ್ಳಲು ಹೆಣಗುತ್ತಿದೆ. ಅತ್ಯುತ್ತಮ ಕಲಿಕೆಯ ಪರಿಸರವನ್ನು ವಿನ್ಯಾಸಗೊಳಿಸುವ ಮೂಲಕ  ಗುಣಮಟ್ಟದ ಒಡನಾಟದ ಅನುಭವವನ್ನು ಒದಗಿಸಲು ಶಾಲೆಯು ಸ್ವಾತಂತ್ರ್ಯವನ್ನು ಒದಗಿಸಬೇಕಿದೆಯೇ ಹೊರತು ಶಾಲೆಯೇ ಬಂಧನವಾಗಬಾರದು. 2005 ರ ಪಠ್ಯಕ್ರಮ ನೆಲೆಗಟ್ಟು ತನ್ನ ಮಾರ್ಗದರ್ಶಿ ಸೂತ್ರಗಳಲ್ಲಿ ಹೇಳಿರುವಂತೆ, ಕಲಿಕೆಯು ತರಗತಿಯನ್ನು ಮೀರಿ ಎಲ್ಲ ಭೌತಿಕ ಸೀಮೆಗಳನ್ನು ಉಲ್ಲಂಘಿಸಬೇಕು. ಮಗುವು ತನ್ನದೇ ಜ್ಞಾನದ ನಿರ್ಮಾತೃವಾಗಬೇಕು. ಕಲಿಕೆಯು ಪಠ್ಯಪುಸ್ತಗಳಾಚೆ ವಿಸ್ತರಿಸಿ ಬದುಕಾಗಬೇಕು. ಮೌಲ್ಯಮಾಪನವು ಕಲಿಕೆಯ ಭಾಗವಾಗಬೇಕೇ ಹೊರತು ಕಲಿಕೆಯಿಂದ ದೂರನಿಂತು ಮಗುವನ್ನು ಹೆದರಿಸಬಾರದು. ಆದರೆ, ಕಳೆದ ಹದಿನೈದು ವರ್ಷಗಳಲ್ಲಿ ತರಗತಿಕೋಣೆಯ ವ್ಯವಹಾರವನ್ನು ಬದಲಿಸಲು ಮಾಡಿದ ಯಾವ ಪ್ರಯತ್ನಗಳೂ ಫಲ ನೀಡಲಿಲ್ಲ. ಪರೀಕ್ಷೆಗಳ ಧಾವಂತದಲ್ಲಿ  ಬದಲಾವಣೆಗೆ ಸಮಯವೂ ಕೂಡಿ ಬಂದಿರಲಿಲ್ಲ. ಕೋವಿಡ್ 2019 ಒಂದು ಹೊಸ ಅವಕಾಶವನ್ನು ತೆರೆದು ತೋರಿಸಿದೆ. ಕಿಕ್ಕಿರಿದ ತರಗತಿಗಳಲ್ಲಿ ಕುಳಿತು ಶಿಕ್ಷಕರ ಪಾಠಗಳನ್ನು ಕೇಳುವ ಈ ಹಿಂದಿನ ಮಾದರಿಯು ಆರೋಗ್ಯದ ಕಾರಣದಿಂದಲೂ ಒಳ್ಳೆಯದಲ್ಲ ಎಂಬುದು ಈಗ ಅರ್ಥವಾಗುತ್ತಿದೆ. ಆದುದರಿಂದ, ಅನುಭವ ಕೇಂದ್ರಿತವಾದ ಕಲಿಕಾ ಪರಿಸರವನ್ನು ರೂಪಿಸುವ ಅನಿವಾರ್ಯತೆ ಉಂಟಾಗಿದೆ.

ಮಗು ಒಂದು ವರ್ಷದಲ್ಲಿ ಕಲಿಯಬೇಕಾಗಿರುವುದನ್ನು ತುಣುಕುಗಳಾಗಿ ವಿಂಗಡಿಸಿ ಅವುಗಳನ್ನು ಸಾಮರ್ಥ್ಯಗಳು ಎಂದು ಕರೆಯುವ ರೂಢಿ ಇದೆ. ಮಗು ಪ್ರತಿ ಸಾಮರ್ಥ್ಯವನ್ನು ಗಳಿಸಿರುವುದನ್ನು ಖಾತರಿ ಪಡಿಸಿಕೊಳ್ಳಲು ನೆರವಾಗುವ ಪ್ರತಿಫಲನಗಳನ್ನು ಸೂಚಕಗಳು ಎನ್ನಲಾಗುತ್ತದೆ. ಬೇರೆ ಬೇರೆ ತರಗತಿಯ ಮಕ್ಕಳು ಕಲಿಯುವ ಮತ್ತು ಬೇರೆ ಬೇರೆ ವಿಷಯಗಳಲ್ಲಿ ಹಂಚಿಹೋಗಿರುವ ಸಾಮರ್ಥ್ಯಗಳ ನಡುವೆ ಇರುವ ಗಡಿರೇಖೆಗಳನ್ನು ಅಳಿಸಿ ಜಗತ್ತನ್ನು ಇಡಿಯಾಗಿ ಆದರೆ, ನಿರ್ದಿಷ್ಟವಾಗಿ ಗ್ರಹಿಸುವ ಕಲಿಕೆಯ ಪದ್ಧತಿಯನ್ನು ರೂಢಿಸಬೇಕಿದೆ. ಚರ್ಚೆ, ಸಂವಾದ, ಸಮೀಕ್ಷೆ, ಮಾಡಿ-ಕಲಿ ಚಟುವಟಿಕೆಗಳು, ಪ್ರಯೋಗಗಳು, ನಾಟಕ, ಸಿನೇಮಾ, ಹಾಡು, ಹಬ್ಬ, ಬೇಸಾಯ, ಎಲ್ಲವೂ ಕಲಿಕೆಯ ದಾರಿಗಳಾಗಿ ರೂಪುಗೊಳ್ಳಬೇಕು.

ಹೀಗಾದಾಗ ದಿನವೂ ಶಾಲೆಗೆ ಬರುವುದು ಅನವಶ್ಯಕವೂ ಅರ್ಥಹೀನವೂ ಆಗಬಲ್ಲದು. ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕಾಂಶಗಳು ದೊರೆಯುವುದು, ಬಾಲಕಾರ್ಮಿಕರಾಗದೆ ಇರುವುದು, ಬಾಲ್ಯವಿವಾಹದಂತಹ ಸಾಮಾಜಿಕ  ಅನಿಷ್ಠಗಳಿಗೆ ಮಕ್ಕಳು ತುತ್ತಾಗದಂತೆ ಎಚ್ಚರಿಕೆ ವಹಿಸುವುದು ಕೂಡಾ ಶಾಲೆಯ ಜವಾಬ್ಧಾರಿಯಾಗಬೇಕು. ಶಾಲೆಯು ಗೋಡೆಗಳನ್ನು ಮೀರಿ ವಿಸ್ತರಿಸಿಕೊಳ್ಳುವ ಜೊತೆಗೇ ಊರೇ ಶಾಲೆಯಾಗಿ ಮಾರ್ಪಾಡಾಗಬೇಕು. ನಮ್ಮೂರ ಜನರು, ಸಮ್ಮೂರ ಸಂಸ್ಕೃತಿ, ನಮ್ಮೂರ ಭಾಷೆ ನಮ್ಮೂರ ಜೀವ ವೈವಿಧ್ಯಗಳನ್ನು ಅರ್ಥಮಾಡಿಕೊಳ್ಲುತ್ತಾ ಮಗು ತನ್ನ ಪ್ರಜ್ಙೆಯನ್ನು ವಿಸ್ತರಿಸಿಕೊಳ್ಳಬೇಕು. ವಿಶ್ವ ಮಾನವನಾಗಬೇಕು. ಅನೌಪಚಾರಿಕವಾಗಿ ಗಳಿಸಿದ ಜ್ಞಾನವನ್ನು ನಿಖರಗೊಳಿಸಿಕೊಳ್ಳಲು ನಿರ್ದಿಷ್ಟ ಮತ್ತು ಶಿಸ್ತಿನ ಕಲಿಕೆಯೂ ಬೇಕು. ಅದನ್ನು ಗಳಿಸಿಕೊಳ್ಳಲು ತಜ್ಞ ವೃತ್ತಿನಿರತರ ಬೆಂಬಲ ಅಗತ್ಯವಿದ್ದೇ ಇದೆ.

Advertisement

ಇದೆಲ್ಲ ಸಾಧ್ಯವಾಗಬೇಕಾದರೆ, ಅತ್ಯುತ್ತಮ ಗುಣಮಟ್ಟದ ಸ್ವ ಕಲಿಕೆಯ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ ಮಕ್ಕಳಿಗೆ ಪೂರೈಸಬೇಕಾಗುತ್ತದೆ. ನಿರಂತರವಾಗಿ ಮಕ್ಕಳಿಗೆ ಬೆಂಬಲ ನೀಡಬೇಕಾಗುತ್ತದೆ. ಬಹು ಮಾಧ್ಯಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಕಲಿಕೆಗೆ ಹೊಂದಿಕೊಂಡಂತಹ ಮತ್ತು ಕಲಿಕೆಯ ಭಾಗವಾಗಿರುವ ಮೌಲ್ಯಮಾಪನ ವಿಧಾನಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕಾಗುತ್ತದೆ. ಕಲಿಯಲು ಕಲಿಸುವ ಶಾಲೆಯನ್ನು ರೂಪಿಸಲು ಇವೆಲ್ಲವೂ ಅವಶ್ಯಕವೇ.

ಕಲಿಯಲು ಕಲಿಸುವುದೆಂದರೇನು?

ಒಂದು ಉದಾಹರಣೆ ಇದನ್ನು ಸ್ಪಷ್ಟಪಡಿಸಿಬಹುದು-ಒಂದು ಪದದ ಅರ್ಥವನ್ನು ಮಕ್ಕಳಿಗೆ ತಿಳಿಸುವ ಬದಲು ಮಗುವಿಗೆ ನಿಘಂಟನ್ನು ನೀಡುವುದು ಮತ್ತು ಅವಶ್ಯಕವೆನಿಸಿದರೆ, ನಿಘಂಟನ್ನು ಪರಾಮರ್ಶಿಸುವ  ಕೌಶಲವನ್ನು ತಿಳಿಸುವುದು ಮಗುವಿಗೆ ಲಾಭದಾಯಕ. ಮುಂದಿನ ಬಾರಿ ಇನ್ನೊಂದು ಹೊಸ ಪದವು ಎದುರಾದಾಗ ಮಗುವು ಅದರ ಅರ್ಥಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸುವುದಿಲ್ಲ. ಸ್ವಕಲಿಕೆಯ ಕೌಶಲಗಳನ್ನು ಕಲಿಸುವುದರ ಜೊತೆಗೆ, ಸ್ವ ಅಧ್ಯಯನ, ಪರಾಮರ್ಶನ ತಂತ್ರಗಳು, ಸಮೂಹ ಸಂವಹನಗಳನ್ನು ಮಗುವಿಗೆ ಕಲಿಸಬೇಕಿದೆ. ಮಗು ತನ್ನ ಜ್ಞಾನವನ್ನು ತಾನೇ ಕಟ್ಟಿಕೊಳ್ಳಲು ಅನುಕೂಲಕರವಾದ ಪರಿಸರವನ್ನು ವಿನ್ಯಾಸಗೊಳಿಸುವುದಷ್ಟೇ ನಮ್ಮ ಕೆಲಸ.  ಶಿಕ್ಷಣವು ಮಗುವನ್ನು ಸ್ವಾವಲಂಬಿಯಾಗಿಸುವುದು ಇಂತಹ ವಿಧಾನಗಳಿಂದಲೇ!

ಇವೆಲ್ಲವೂ ಸವಾಲಿನ ಕೆಲಸಗಳೇ! ಅದರೆ, ಆರೋಗ್ಯವಂತ ಸಮಾಜವನ್ನು ರೂಪಿಸಲು ಇವು ಅವಶ್ಯಕ ಕೆಲಸಗಳೂ ಹೌದು. ಹೊಸ ವರ್ಷದಲ್ಲಿ ಇಂತಹ ಹಲವು ಸವಾಲುಗಳ ನಡುವೆ ನಾವು ಯುವ ಪೀಳಿಗೆಯನ್ನು ರೂಪಿಸಬೇಕಾದ ಜವಾಬ್ದಾರಿಯೂ ನಮ್ಮ ಮೇಲಿದೆ.

ಉದಯ ಗಾಂವಕಾರ, ಶಿಕ್ಷಕರು

9481509699

Advertisement

Udayavani is now on Telegram. Click here to join our channel and stay updated with the latest news.

Next