Advertisement

ಜೀವವೈವಿಧ್ಯ ರಕ್ಷಣೆಗೆ ಅರಣ್ಯೀಕರಣ ಅಗತ್ಯ

07:12 AM Jun 05, 2020 | Lakshmi GovindaRaj |

ದೊಡ್ಡಬಳ್ಳಾಪುರ: ಜೂನ್‌ 5 ವಿಶ್ವ ಪರಿಸರ ದಿನಾಚರಣೆ. ಪರಿಸರದ ಜೀವವೈವಿಧ್ಯ ರಕ್ಷಣೆ ಈ ಬಾರಿ ಧ್ಯೇಯ ವಾಕ್ಯ. ಗಿಡ ಮರ ಬೆಳೆಸಿದರಷ್ಟೇ ಸಾಲದು ಪೂರಕವಾಗಿ ಅರಣ್ಯೀಕರಣಕ್ಕೆ ಒತ್ತು ನೀಡಿ, ಪರಿಸರದ ಜೀವವೈವಿಧ್ಯ  ಸಂರಕ್ಷಿಸಬೇಕಾಗಿದೆ ಎಂದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ.

Advertisement

ತಾಲೂಕಿನ ಅರಣ್ಯ ಪ್ರದೇಶಗಳು: ತಾಲೂಕಿನಲ್ಲಿ 14 ಮೀಸಲು ಅರಣ್ಯ ಪ್ರದೇಶವಿದ್ದು, ಒಟ್ಟು 14,974 ಎಕರೆಯಲ್ಲಿ ಹರಡಿಕೊಂಡಿದೆ. ತಾಲೂಕಿನ ಚೊಕ್ಕನಹಳ್ಳಿ,  ಸುತ್ತಹಳ್ಳಿ, ಆರೂಢಿ ಈ ಪ್ರದೇಶದಲ್ಲಿ 1,325 ಎಕರೆ, ಸಿ ಮತ್ತು ಡಿ ಅರಣ್ಯ  ಪ್ರದೇಶಕ್ಕಾಗಿ 4,037 ಎಕರೆ ಅರಣ್ಯ ಪ್ರದೇಶವಿದೆ. ಒಟ್ಟಾರೆ ತಾಲೂಕಿನಲ್ಲಿ 20,296 ಎಕರೆ ಅರಣ್ಯವಿದೆ.

ಅರಣ್ಯಗಳಿಗೆ ಒತ್ತುವರಿ ಕಾಟ: ಅರಣ್ಯ ಇಲಾಖೆ ಮಾಹಿತಿಯಂತೆ ಪಾಲನಜೋಗಿಹಳ್ಳಿ ಅರಣ್ಯ ಪ್ರದೇಶದ ವಿಸ್ತೀರ್ಣ 30 ಎಕರೆ. ಆದರೆ  ಹೆಸರಿಗಷ್ಟೇ ಅರಣ್ಯವಿದ್ದು, ಸಾಕಷ್ಟು ಅರಣ್ಯ ಭೂಮಿ ಒತ್ತುವರಿಯಾಗಿದೆ. ಇದಷ್ಟೇ ಅಲ್ಲದೆ ಒಟ್ಟಾರೆಯಾಗಿ ತಾಲೂಕಿನಲ್ಲಿ 500 ಎಕರೆಗೂ ಹೆಚ್ಚು ಅರಣ್ಯ ಒತ್ತುವರಿಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಅರಣ್ಯ ಪ್ರದೇಶದಲ್ಲಿ  ವೈವಿಧ್ಯವಿರದೇ, ಕೇವಲ ನೀಲಗಿರಿ, ಅಕೇಷಿಯಾ ಮರಗಳೇ ಇವೆ. ಔಷಧ ಸಸ್ಯಗ, ಪ್ರಾಣಿ ಪಕ್ಷಿ ಮಾಹಿತಿಯಿಲ್ಲ. ಅರಣ್ಯ ಪ್ರದೇಶದಲ್ಲಿ ಲಕ್ಷಗಟ್ಟಲೆ ಸಸಿ ನೆಟ್ಟು, ಸಸಿ ನೆಡುವ ಯೋಜನೆಯ ವರದಿಯನ್ನು ಇಲಾಖೆ ನೀಡುತ್ತಿದೆ. ಆದರೆ ಸಂರಕ್ಷಣೆ, ಬೆಳೆದಿರುವ ಸಸಿಗಳ ಮಾಹಿತಿ ಸಮರ್ಪಕವಾಗಿಲ್ಲ. ತಾಲೂಕಿನ ಅರಣ್ಯ ಪ್ರದೇಶಗಳಿಗೆ ಪ್ರತಿ ವರ್ಷ ಬೆಂಕಿ ಬೀಳುತ್ತಿ ರುವುದು ಸಾಮಾನ್ಯ. ಮರ ಕಡಿಯುವುದನ್ನು ನಿಯಂತ್ರಿಸಲು ಹಾಗೂ ಟ್ರೀ ಪ್ಲಾಂಟೇಷನ್‌ ಬಗ್ಗೆ ಕ್ರಮ  ಕೈಗೊಳ್ಳುತ್ತಿಲ್ಲ ಎನ್ನುವುದು ಪರಿಸರ ಪ್ರೇಮಿಗಳ ಆರೋಪವಾಗಿದೆ.

ಕಳೆದ ವರ್ಷ ಜೂನ್‌ನಲ್ಲಿ ನಡೆದಿದ್ದ ಪರಿಸರ ಸಮ್ಮೇಳನದಲ್ಲಿಶಾಸಕಟಿ.ವೆಂಕಟರಮಣಯ್ಯ, ಅರಣ್ಯ ಬೆಳೆಸದಿರಲು ಏನು ಕಾರಣ ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಈವರೆಗೆ ಅರಣ್ಯ ಹೆಚ್ಚಾಗಲು ಗಮನಾರ್ಹ ಕಾರ್ಯಕ್ರಮಗಳು ರೂಪುಗೊಂಡಿಲ್ಲ.

Advertisement

ಅರಣ್ಯೀಕರಣಕ್ಕೆ ಒತ್ತು: ತಾಲೂಕಿನಲ್ಲಿ ನವಿಲು, ಕಾಡು ಹಂದಿ, ನರಿಗಳು, ಬಾತುಗಳು ಗೀಜಗ ಸೇರಿದಂತೆ ಹಲವು ವೈವಿಧ್ಯಮಯ ಪ್ರಾಣಿ ಪಕ್ಷಿಗಳಿವೆ. ಆದರೆ ಅವುಗಳಿಗೆ ಪೂರಕ ಅರಣ್ಯ, ಕೆರೆಗಳಿರುವ ವಾತಾವರಣವಿಲ್ಲ. ಕೈಗಾರಿಕೆ  ಪ್ರದೇಶಗಳಲ್ಲಿ ಪರಿಸರ ಮಾಲಿನ್ಯದ ಬಗ್ಗೆ ದೂರು ಈಗಲೂ ಕೇಳುತ್ತಿವೆ. ಅಂತರ್ಜಲ ಬರಿದಾಗುತ್ತಿದೆ. ಈ ನಡುವೆ ಕೆಲವು ಕಾರ್ಖಾನೆಗಳು ಕೆರೆ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ಕೆ ಕೈಜೋಡಿಸಿವೆ.

ಇಲ್ಲಿನ ಯುವ ಸಂಚಲನ, ಪರಿಸರ ಸಿರಿ  ಕ್ಷೇಮಾಭಿವೃದ್ಧಿ ಸಂಘ, ಸುಚೇತನ ಹಾಗೂ ಹಲವು ಪರಿಸರಾ ಸಕ್ತರಿಂದ ಗಿಡ ನೆಡುವ ಕಾರ್ಯಕ್ರಮಗಳು ನಿರಂತರವಾಗಿರುವುದು ಉತ್ತಮ ಕಾರ್ಯ. ಈ ನಿಟ್ಟಿನಲ್ಲಿ ಅರಣ್ಯೀಕರಣಕ್ಕೆ ಒತ್ತು ನೀಡಿ ಜೀವವೈವಿಧ್ಯ ಸಂರಕ್ಷಿಸಲು ಕಟಿಬದ್ಧರಾಗಬೇಕಿದೆ ಎನ್ನುವುದು ಪರಿಸರ ಪ್ರೇಮಿಗಳ ವಾದವಾಗಿದೆ.

* ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next