ರಾಣಿಬೆನ್ನೂರ: ಪ್ರಧಾನ ಮಂತ್ರಿಗಳ ಆಶಯದಂತೆ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಅರಣ್ಯ ಕೃಷಿ ಒಂದು ಮುಖ್ಯ ಉಪಕಸುಬಾಗಿದೆ. ಅದು ನಿರಂತರವಾಗಿ ವರ್ಷಪೂರ್ತಿ ಆದಾಯ ತರುವ ಕಸುಬು ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ತಿಳಿಸಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಐಸಿಎಆರ್ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಹಾವೇರಿ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ರೈತರ ಆದಾಯಕ್ಕಾಗಿ ಕೃಷಿ ಅರಣ್ಯ ಕುರಿತು ಹಮ್ಮಿಕೊಂಡಿದ್ದ ಆನ್‌ಲೈನ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಶ್ರೀಪಾದ ಕುಲಕರ್ಣಿ ಮಾತನಾಡಿ, ಕೃಷಿ ಅರಣ್ಯ ಭೂಬಳಕೆ ಪದ್ಧತಿಯನ್ನು ಬಹಳ ಹಿಂದಿನಿಂದಲೂ ಅನುಸರಿಸುತ್ತಾ ಬರಲಾಗುತ್ತಿದೆ. ಆದರೆ, ಈ ಪದ್ಧತಿಗೆ ವೈಜ್ಞಾನಿಕ ಚಾಲನೆ ಮತ್ತು ಪ್ರಚಾರ ಎಪ್ಪತ್ತರ ದಶಕದಿಂದೀಚೆಗೆ ದೊರಕಿದೆ. ಕೃಷಿ ಬೆಳೆಗಳೊಂದಿಗೆ ಗಿಡ ಮರಗಳನ್ನು ಬೆಳೆಯುವುದೇ ಕೃಷಿ ಅರಣ್ಯ ಪದ್ಧತಿ. ಈ ಪದ್ಧತಿಯನ್ನು ಸಾಗುವಳಿ ಯೋಗ್ಯವಾದ ಹಾಗೂ ಯೋಗ್ಯವಲ್ಲದ ಜಮೀನುಗಳಲ್ಲಿ ಅಳವಡಿಸಬಹುದಾಗಿದೆ ಎಂದರು.
ನಿರಂತರ ಕೃಷಿಯಿಂದ ಫಲವತ್ತತೆ ಕುಂಠಿತವಾಗುತ್ತಿರುವ ಜಮೀನುಗಳಲ್ಲಿ ಆದಾಯವನ್ನು ಸ್ಥಿರೀಕರಿಸಲು ಮತ್ತು ಹೆಚ್ಚಿಸಲು ಈ ಕ್ರಮಗಳು ಬಹಳಷ್ಟು ಸಹಕಾರಿಯಾಗಬಲ್ಲವು. ಅರಣ್ಯ ಸಂಪತ್ತು ಕಡಿಮೆಯಾಗುತ್ತಿರುವುದರಿಂದ ಮತ್ತು ಮಣ್ಣಿನ ಕೊಚ್ಚುವಿಕೆ, ಫಲವತ್ತತೆ ಮರಗಳನ್ನು ಬೆಳೆಯುವುದು ಅವಶ್ಯಕವಾಗಿದೆ. ಈ ಪದ್ಧತಿಯಲ್ಲಿ ಬೆಳೆದ ಮರಗಳು ನಿಸರ್ಗದ ಸಮತೋಲನವನ್ನು ಕಾಯುವಲ್ಲಿ ಸಹಕಾರಿಯಾಗುವುದಲ್ಲದೆ, ಮನುಷ್ಯ ಮತ್ತು ದನಕರುಗಳಿಗೆ ನೆರಳು, ಹಣ್ಣು ಹಂಪಲು, ಕಟ್ಟಿಗೆ ಉರುವಲು ಮತ್ತು ಮೇವು ಒದಗಿಸಬಲ್ಲವು ಎಂದು ತಿಳಿಸಿದರು. ಶಿರಸಿ ವಿಜ್ಞಾನ ಕೇಂದ್ರದ ವಿಜ್ಞಾನಿ ವೆಂಕಟೇಶ ಎಲ್. ಮಾತನಾಡಿ, ಹೆಚ್ಚಿನ ವರಮಾನ ಪಡೆಯುವುದು, ಜಾನುವಾರುಗಳಿಗೆ ಮೇವು ಒದಗಿಸುವುದು, ಬೇಕಾದ ಮರ ಮಟ್ಟುಗಳ ಪೂರೈಕೆ, ಸೂಕ್ತ ಮರ ಪ್ರಭೇದ ಆರಿಸುವುದು ಕೃಷಿ ಅರಣ್ಯದ ಮುಖ್ಯ ಉದ್ದೇಶವೆಂದರು.
ಕೃಷಿ ಅರಣ್ಯ ಮರಗಿಡಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳೆಂದರೆ, ಬಹೋಪಯೋಗಿ ಗಿಡಮರಗಳಾಗಿರಬೇಕು, ಸುಲಭವಾಗಿ ಬೆಳೆಯುವಂತಿರಬೇಕು, ಚೆನ್ನಾಗಿ ಬೆಳೆದು ಬಹುಬೇಗ ಕಟಾವಿಗೆ ಬರುವಂತಿರಬೇಕು, ರೆಂಬೆಗಳು ನೇರವಾಗಿ ಬೆಳೆಯುವಂತಿರಬೇಕು, ಅಕ್ಕಪಕ್ಕದ ರೆಂಬೆಗಳನ್ನು ಸವರಿದಾಗ ನಂಜು ತಡೆದುಕೊಂಡು ಬೆಳೆಯುವಂತಿರಬೇಕು, ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಬೆಳೆಯುವಂತಿರಬೇಕು, ಜಾನುವಾರುಗಳು ಮೇಯ್ದಾಗ ಮರು ಚಿಗುರೊಡೆಯುವಂತಿರಬೇಕು, ಉತ್ತಮ ಮಾರಾಟದ ಬೆಲೆ ಸಿಗುವಂತಿರಬೇಕು ಎಂದು ತಿಳಿಸಿದರು.
ಹಾವೇರಿ ಪ್ರಭಾರಿ ಉಪ ಅರಣ್ಯ ಸಂರಕ್ಷಣಾದಿಕಾರಿ ಅಶೋಕ ಗೊಂಡೆ ಮಾತನಾಡಿ, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ರೈತರು ಅರಣ್ಯ ಇಲಾಖೆಯಲ್ಲಿ 10ರೂ. ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ತಾವು ನಡೆಲು ಇಚ್ಛಿಸುವ ಸಸಿಗಳ ಜಾತಿ ಮತ್ತು ಸಂಖ್ಯೆಯನ್ನು ನಿಗ ದಿತ ನಮೂನೆಯಲ್ಲಿ ಭರ್ತಿ ಮಾಡಿ ವಲಯ ಅರಣ್ಯಾಧಿಕಾರಿಗಳಿಗೆ ಸಲ್ಲಿಸಬೇಕು ಎಂದರು. ನಂತರ ಸಸಿಗಳನ್ನು ರಿಯಾಯಿತಿ ದರದಲ್ಲಿ ಇಲಾಖೆಯಿಂದ ಖರೀದಿಸಿ, ತಮ್ಮ ಕೃಷಿ ಜಮೀನಿನಲ್ಲಿ ನಾಟಿ ಮಾಡಿಕೊಳ್ಳಬೇಕಾಗುತ್ತದೆ. ಈ ರೀತಿ ನಾಟಿ ಮಾಡಿದ ಪ್ರತಿಯೊಬ್ಬರಿಗೂ ಗರಿಷ್ಠ 400 ಸಸಿ ಮಿತಿಗೊಳಿಸಿ ಪ್ರತಿ ಸಸಿಗೆ ಮೊದಲನೇ ವರ್ಷ 35ರೂ., ಎರಡನೇ ವರ್ಷ 40ರೂ., ಮೂರನೇ ವರ್ಷ 50ರೂ., ಒಟ್ಟು 125ರೂ. ಸಹಾಯ ಧನವನ್ನು ರೈತರಿಗೆ ನೀಡಲಾಗುವುದು. ಈ ಯೋಜನೆಯನ್ನು ಪ್ರಾದೇಶ ಅರಣ್ಯ ವಲಯಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ತರಬೇತಿ ಶಿಬಿರದಲ್ಲಿ ಸುಮಾರು 100 ರಿಂದ 110 ರೈತರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.