Advertisement
ಮಳೆಗಾಲದಲ್ಲಿ ಗಿಡ ನೆಟ್ಟು ಕಾಡು ಬೆಳೆಸುವ ಕಾರ್ಯಕ್ರಮ ನಡೆಸುವ ಸರಕಾರ ಈ ಕಾಡನ್ನು ಉಳಿಸಲು ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ. ನಿರ್ಲಕ್ಷ್ಯಕ್ಕೊಳಗಾದ ಇಲಾಖೆ ಪೈಕಿ ಅರಣ್ಯ ಇಲಾಖೆಯೂ ಒಂದು. ವರ್ಷವಿಡೀ ಕಾಡಿನಲ್ಲೇ ಕಳೆಯುವ ಸಿಬಂದಿಗಳ ಸುರಕ್ಷತೆ ಬಗ್ಗೆ ಇಲಾಖೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ.
Related Articles
Advertisement
ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡ್ಗಿಚ್ಚು ನಂದಿಸಲು ಈಗಲೂ ಬಳಸುವುದು ಪುರಾತನ ಸೊಪ್ಪು ಸದೆಯನ್ನು ಎನ್ನುವ ವಿಚಾರ ಬಂಡೀಪುರ ಘಟನೆಯ ಬಳಿಕ ಬೆಳಕಿಗೆ ಬಂದಿದೆ. ಲಕ್ಷಗಟ್ಟಲೆ ಹೆಕ್ಟೇರ್ ಅರಣ್ಯ ರಕ್ಷಿಸಲು ಇರುವುದು ಕೆಲವೇ ಸಿಬ್ಬಂದಿಗಳು. ಅವರಿಗೂ ಸಮರ್ಪಕ ಸೌಲಭ್ಯಗಳಿಲ್ಲ. ಕೆಳ ಹಂತದಲ್ಲಿ ದುಡಿಯುತ್ತಿರುವ ಅರಣ್ಯ ಸಿಬ್ಬಂದಿಗಳ ಬದುಕು ಅರಣ್ಯ ರೋದನವೇ ಸರಿ. ಇದು ಕರ್ನಾಟಕ ಎಂದಲ್ಲ ಎಲ್ಲ ರಾಜ್ಯಗಳ ದಯನೀಯ ಸ್ಥಿತಿ. ಎಲ್ಲೇ ಕಾಡ್ಗಿಚ್ಚು ಕಾಣಿಸಿಕೊಂಡರೂ ಅರಣ್ಯ ರಕ್ಷಕ ಸಿಬ್ಬಂದಿಗಳು ಬರಿಗೈಯಲ್ಲಿ ಅಲ್ಲಿಗೆ ಧಾವಿಸಬೇಕು. ಆಕಾಶಕ್ಕೆ ಕೆನ್ನಾಲಿಗೆ ಚಾಚಿರುವ ಬೆಂಕಿಯನ್ನು ಸೊಪ್ಪು ಬಡಿದು ನಂದಿಸಬೇಕು. ಈ ಸಿಬ್ಬಂದಿಯ ಬಳಿ ಯಾವುದೇ ಅತ್ಯಾಧುನಿಕ ಸಲಕರಣೆಗಳಿರುವುದಿಲ್ಲ. ಕನಿಷ್ಠ ಪರಸ್ಪರರನ್ನು ಸಂಪರ್ಕಿಸಲು ವಾಕಿಟಾಕಿ ಕೂಡ ಇಲ್ಲ. ಗಡಿ ಕಾಯುವ ಸೈನಿಕರಿಗೆ ಶೂ ಇಲ್ಲ, ಊಟ ಸರಿಯಾಗಿಲ್ಲ ಎಂದು ರೊಚ್ಚಿನಿಂದ ಬುಸುಗುಡುವ ಯಾರೂ ಗಡಿಯಷ್ಟೇ ಮಹತ್ವ ಹೊಂದಿರುವ ಅರಣ್ಯ ಸಂಪತ್ತನ್ನು ಕಾಯುವ ಬಡಪಾಯಿ ಸಿಬ್ಬಂದಿಗಳ ಬಳಿ ಕನಿಷ್ಠ ಒಂದು ಕೈಗವಚವೂ ಇರುವುದಿಲ್ಲ ಎಂದು ಚಿಂತಿಸದಿರುವುದು ವಿಪರ್ಯಾಸ.
ಪ್ರತಿವರ್ಷ ಮಳೆಗಾಲದಲ್ಲಿ ಗಿಡ ನೆಟ್ಟು ಕಾಡು ಬೆಳೆಸುವ ಕಾರ್ಯಕ್ರಮ ನಡೆಸುವ ಸರಕಾರ ಈ ಕಾಡನ್ನು ಉಳಿಸಲು ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ. ಅತಿ ಹೆಚ್ಚು ನಿರ್ಲಕ್ಷ್ಯಕ್ಕೊಳಗಾದ ಇಲಾಖೆಗಳ ಪೈಕಿ ಅರಣ್ಯ ಇಲಾಖೆಯೂ ಒಂದು. ವರ್ಷವಿಡೀ ಕಾಡಿನಲ್ಲೇ ಕಳೆಯುವ ಸಿಬ್ಬಂದಿಗಳ ಸುರಕ್ಷತೆ ಬಗ್ಗೆ ಇಲಾಖೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ. ಹಲವು ದೇಶಗಳು ಕಾಡ್ಗಿಚ್ಚು ನಂದಿಸಲು ಹೆಲಿಕಾಪ್ಟರ್, ಕಾಡಿನ ಪಕ್ಕವೇ ಅಗ್ನಿಶಾಮಕ ಕೇಂದ್ರ ಇತ್ಯಾದಿ ಸೌಲಭ್ಯಗಳನ್ನು ಮಾಡಿಟ್ಟುಕೊಂಡಿವೆ. ಇಂತಹ ಸೌಲಭ್ಯಗಳನ್ನು ನಾವೂ ಮಾಡಿಕೊಳ್ಳಬಹುದು. ಮುಖ್ಯವಾಗಿ ಸಿಬ್ಬಂದಿಗಳಿಗೆ ಸಲಕರಣೆಗಳನ್ನು ಕೊಡಬೇಕು. ಜತೆಗೆ ಉತ್ತಮ ತರಬೇತಿಯನ್ನೂ ನೀಡಬೇಕು. ಇದಕ್ಕೂ ಮಿಗಿಲಾಗಿ ಸ್ವಾರ್ಥಕ್ಕಾಗಿ ಕಾಡಿಗೆ ಬೆಂಕಿ ಹಚ್ಚದಂತೆ ಜನರಲ್ಲಿ ಅರಿವು ಮೂಡಿಸಬೇಕು.