Advertisement

ಕೇವಲ ದಾಖಲೆಗಳಲ್ಲಿ ಅರಣ್ಯಾಧಿಕಾರಿಗಳ ಕೆಲಸ…

10:42 AM Jan 31, 2019 | Team Udayavani |

ಕೋಲಾರ: ಬೇಸಿಗೆ ಆರಂಭವಾಯಿತೆಂದರೆ ಆಹಾರ, ಕುಡಿಯುವ ನೀರು ಅರಸಿ ನಾಡಿಗೆ ಬರುವ ಕಾಡು ಪ್ರಾಣಿಗಳಿಗೇನು ಕೊರತೆಯಿಲ್ಲ. ಜಿಲ್ಲೆಯನ್ನು ಸುತ್ತಲೂ ಅರಣ್ಯವೇ ಆವರಿಸಿದ್ದು, ನಾಡಿನೊಳಗೆ ಪ್ರಾಣಿಗಳು ಬರುವುದು ಕಷ್ಟಕರವೇನಿಲ್ಲ. ನಾಡಿನೊಳಗೆ ಬರುವ ಪ್ರಾಣಿಗಳಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ ಎಂಬುದರಲ್ಲಿ ಎರಡು ಮಾತಿಲ್ಲ.

Advertisement

ಕಾಡ್ಗಿಚ್ಚಿನಲ್ಲೂ ನಿರ್ಲಕ್ಷ್ಯ ತೋರಿರುವ ಅರಣ್ಯ ಇಲಾಖೆ, ಇಂತಹ ಘಟನೆಗಳಿಗೆ ಕಾರಣರಾಗುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಈವರೆಗೂ ಮುಂದಾಗಿಲ್ಲ, ಮುಂಜಾಗ್ರತಾ ಕ್ರಮಗಳನ್ನು ಬರಹದಲ್ಲಿ ತೋರಿಸುವ ಕಾಯಕದಲ್ಲಿ ನಿರತರಾಗಿ ಕಾರ್ಯರೂಪಕ್ಕೆ ತರುತ್ತಿಲ್ಲ. ಬಿಲ್‌ ಮಾಡಿಕೊಳ್ಳುವುದರಲ್ಲಿ ಅಧಿಕಾರಿಗಳು ತೋರುವ ಅತ್ಯುತ್ಸಾಹ ಕೆಲಸಗಳಲ್ಲಿ ತೋರುವುದಿಲ್ಲ ಎಂಬ ಆರೋಪ ಕೇಳಿ ಬಂದಿವೆ.

ಕಾಡುಪ್ರಾಣಿಗಳಿಗೆ ಅರಣ್ಯಾಡಳಿತದ ಕ್ರಮ: ಕೋಲಾರ ಅರಣ್ಯ ವಿಭಾಗದ ವಿವಿಧ ವಲಯಗಳ ಅರಣ್ಯ ಪ್ರದೇಶಗಳಲ್ಲಿ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸಲು ವಿವಿಧ ಗಾತ್ರದ ಕುಂಟೆ ತೆಗೆಸಲಾಗಿದೆ. ಮಾಲೂರು ವಲಯದ ಕಾಮಸಮುದ್ರ ಅರಣ್ಯ ಪ್ರದೇಶದಲ್ಲಿ 5, ಬಂಗಾರಪೇಟೆ ವಲಯದ ಕಾಮಸಮುದ್ರ ಅರಣ್ಯ ಪ್ರದೇಶದಲ್ಲಿ 5, ಶ್ರೀನಿವಾಸಪುರ ವಲಯದ ರಾಯಲ್ಪಾಡು, ಜಿನಗಲ ಕುಂಟೆ ಪ್ರದೇಶಗಳಲ್ಲಿ 10 ಹಾಗೂ ಮುಳಬಾಗಿಲು ವಲಯದ ಗೋಕುಂಟೆ ಮತ್ತು ಗೊಲ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ 3 ಒಟ್ಟು 23 ಕುಂಟೆ ನಿರ್ಮಿಸಲಾಗಿದೆ. ಗಾಜಲದಿನ್ನೆ ಅರಣ್ಯ ಪ್ರದೇಶದಲ್ಲಿ 2 ಸಿಮೆಂಟ್ ತೊಟ್ಟಿ ನಿರ್ಮಿಸಿ ನೀರು ಒದಗಿಸಲಾಗಿದೆ.

ಬೇಟೆಗಾರರ ನಿಯಂತ್ರಣ: ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಆಹಾರಕ್ಕಾಗಿ ಹಾಡುಹಗಲೇ ಊರುಗಳೊಳಗೆ ರಾಜಾರೋಷವಾಗಿ ಬಂದು ಕುರಿ, ದನಗಳನ್ನು ತಿಂದು ಹಾಕುತ್ತಿವೆ. ವಿರೋಧ ವ್ಯಕ್ತಪಡಿಸಿದರೆ ಮನುಷ್ಯನ ಜೀವ ಹಾನಿಗೂ ಮುಂದಾಗುವ ಪ್ರಕರಣಗಳು ಸರ್ವೆ ಸಾಮಾನ್ಯ. ಇಲಾಖೆ ವಿಶೇಷ ಕಾಳಜಿಗಿಂತ ಬೇಟೆಗಾರರೇ ಕಾಡುಪ್ರಾಣಿಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಆಂಧ್ರಗಡಿಯಲ್ಲಿ ಬೇಟೆಗಾರರಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಇಲಾಖೆ ಆ ಭಾಗಗಳಲ್ಲಿ ಕೆಲ ಕ್ರಮ ತೆಗೆದುಕೊಂಡಿದೆ.

ಅರಣ್ಯ ಪ್ರದೇಶಲ್ಲಿ ಕಳ್ಳಬೇಟೆ ತಪ್ಪಿಸಲು ಆಯಾ ಬೀಟ್ ಸಿಬ್ಬಂದಿ ಅವರ ಅರಣ್ಯ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಮೂಲಕ ಎಚ್ಚರಿಕೆ ವಹಿಸಲಾಗುತ್ತದೆ. ವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯಾಧಿಕಾರಿ ಆಗಿಂದಾಗ್ಗೆ ರಾತ್ರಿ ಗಸ್ತು ನಿರ್ವಹಿಸುತ್ತಾರೆ. ಅರಣ್ಯ ಪ್ರದೇಶದಲ್ಲಿ ಆಂಟಿ ಪೋಚಿಂಗ್‌ ಕ್ಯಾಂಪ್‌ ನಿರ್ವಹಿಸಿ ಕಳ್ಳಬೇಟೆ ನಿಯಂತ್ರಿಸಲು ಇಲಾಖೆ ಕ್ರಮ ತೆಗೆದುಕೊಂಡಿದೆ.

Advertisement

ನವಿಲು, ಜಿಂಕೆಗಳ ಸಂರಕ್ಷಣೆಗೆ ಕ್ರಮ: ಕೋಲಾರ ವಲಯದ ಅಂತರಗಂಗೆ, ತೊಂಡಾಲ, ಹರಳಕುಂಟೆ, ವಕ್ಕಲೇರಿ, ಬೈಯಪ್ಪನಹಳ್ಳಿ, ಕದಿರೀಪುರ, ಯಶವಂತಪುರ ಅರಣ್ಯ ಪ್ರದೇಶ, ಶ್ರೀನಿವಾಸಪುರ ವಲಯದ ಜಿನಗಲ ಕುಂಟೆ, ರಾಯಲ್ಪಾಡು, ದಳಸನೂರು, ಸುಣ್ಣಕಲ್‌ ಅರಣ್ಯ ಪ್ರದೇಶ, ಮುಳಬಾಗಿಲು ವಲಯದ ಗೋಕುಂಟೆ, ಕಾಶೀಪುರ, ಅಗರಂ, ಅರಣ್ಯ ಮತ್ತು ಮಾಲೂರು ವಲಯದ ಮಲ್ಲಪ್ಪನಹಳ್ಳಿ, ರಾಮಚಂದ್ರಾಪುರ ಅರಣ್ಯ ಪ್ರದೇಶ, ಬಂಗಾರಪೇಟೆ ವಲಯದ ಕಾಮಸಮುದ್ರ ಬಡಮಾಕನಹಳ್ಳಿ ಅರಣ್ಯ ಪ್ರದೇಶಗಳಲ್ಲಿ ಜಿಂಕೆ, ಕೃಷ್ಣಮೃಗ ಹಾಗೂ ನವಿಲುಗಳು ಹೆಚ್ಚಾಗಿವೆ. ಈ ವನ್ಯ ಪ್ರಾಣಿಗ‌ಳ ಉಳಿವಿಗಾಗಿ ಅಗತ್ಯವಿರುವ ಕುಡಿಯುವ ನೀರನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಕಾಡ್ಗಿಚ್ಚು ತಡೆಯಲು ಮುನ್ನೆಚ್ಚರಿಕೆ ಕ್ರಮ: ಅರಣ್ಯ ಪ್ರದೇಶಗಳಲ್ಲಿ ಸಂಭವಿಸುವ ಕಾಡಿನ ಬೆಂಕಿ ಪ್ರಕರಣ ಮತ್ತು ಬೆಂಕಿಯಿಂದ ಹಾನಿ ಸಂಭವಿಸದಂತೆ ಪ್ರತಿ ವರ್ಷ ಬೇಸಿಗೆಗೆ ಮುನ್ನ ಬೆಂಕಿ ಬೀಳುವ ಪ್ರದೇಶ ಗುರುತಿಸಿ ಅಲ್ಲಿ ಬೆಂಕಿ ಹರಡದಂತೆ ಬೆಂಕಿ ತಡೆ ರೇಖೆ ನಿರ್ಮಿಸಲಾಗುತ್ತದೆ. ಬೇಸಿಗೆ ಕಾಲದಲ್ಲಿ ಬೆಂಕಿ ಪ್ರಕರಣಗಳನ್ನು ಕೂಡಲೇ ಗುರುತಿಸಲು ಬೆಂಕಿ ತಡೆ ಕಾವಲುಗಾರರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗುತ್ತಿದೆ. ಅರಣ್ಯ ಪ್ರದೇಶದ ಅಕ್ಕಪಕ್ಕದ ಗ್ರಾಮ ಅರಣ್ಯ ಸಮಿತಿಗಳು ಹಾಗೂ ಪಂಚಾಯ್ತಿಗಳ ಮೂಲಕ ಗ್ರಾಮಸ್ಥರ ಸಭೆ ನಡೆಸಿ ಬೆಂಕಿ ತಡೆಯುವ ಬಗ್ಗೆ ಹಾಗೂ ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರ ಹಾಗೂ ಫಲಕಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.

ಬಂಗಾರಪೇಟೆಯಲ್ಲಿ ಕಾಡಾನೆಗಳ ಹಾವಳಿ ತಡೆಗೆ ಕ್ರಮ: ಅರಣ್ಯಗಳಿಂದ ವನ್ಯಜೀವಿಗಳು ಗ್ರಾಮೀಣ ಪ್ರದೇಶಗಳಿಗೆ ಬಾರದಂತೆ ಇಲಾಖೆ ಸಿಬ್ಬಂದಿ ವನ್ಯ ಪ್ರಾಣಿ ಊರುಗಳಿಗೆ ನುಗ್ಗಿರುವ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ. ವನ್ಯ ಪ್ರಾಣಿಗಳನ್ನು ಓಡಿಸಲು ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ಪಟಾಕಿ ಸಿಡಿಸಿ, ತಮಟೆ ಶಬ್ಧ ಮಾಡಿಸಿ ಪ್ರಾಣಿಗಳನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸುವ ಕೆಲಸ ಮಾಡಲಾಗುತ್ತಿದೆ. ವನ್ಯಜೀವಿಗಳಿಂದ ದಾಳಿಗೊಳಗಾದ ಸಾರ್ವಜನಿಕರಿಗೆ ಸರಕಾರಿ ಆದೇಶದಂತೆ ಧಯಾತ್ಮಕ ಪರಿಹಾರ ಧನ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಆನೆಗಳ ನುಸುಳುವಿಕೆ ತಪ್ಪಿಸಲು ಈಗಾಗಲೇ 30 ಕಿ.ಮೀ ಆನೆ ನಿರೋಧಕ ಕಂದಕ ನಿರ್ಮಿಸಲಾಗಿದೆ. ಅವು ಜನವಸತಿಗೆ ಬಾರದಂತೆ ಕಾಡಿನ ಪ್ರದೇಶದಲ್ಲಿ ಕುಡಿಯುವ ನೀರಿನ ಹೊಂಡ ನಿರ್ಮಿಸಲಾಗಿದೆ. ಆನೆಗಳಿಗೆ ಬೇಕಾದ ಮೇವಿನ ಗಿಡ ಬೆಳೆಸುವ ಕ್ರಮಕ್ಕೂ ಇಲಾಖೆ ಮುಂದಾಗಿದೆ.

ಚಿರತೆ ದಾಳಿಗೆ ಕ್ರಮ: ಬೆಕ್ಕಿನ ಜಾತಿಗೆ ಸೇರಿದ ಚಿರತೆಗಳಿಂದ ಮನುಷ್ಯರ ಮೇಲೆ ಸಂಭವಿಸುವಂತಹ ದಾಳಿ ಅತಿ ವಿರಳ. ಚಿರತೆಗಳಿಂದ ಹಾನಿಗೊಳಗಾಗುವ ಸಾಕು ಪ್ರಾಣಿಗಳಿಗೆ ಸರ್ಕಾರ ನಿಗಪಡಿಸಿರುವ ದರಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇÇಚಾಖಾ ಸಿಬ್ಬಂದಿ ಆಗಿಂದಾಗ್ಗೆ ಅಂತಹ ಪ್ರದೇಶದಲ್ಲಿ ಗಸ್ತು ಮಾಡಿ ಚಿರತೆ ಚಲನವಲನ ಗಮನಿಸುತ್ತಿದೆ. ಬೆಟ್ಟಗಳ ಪ್ರದೇಶದಲ್ಲಿ ಬೋನುಗಳನ್ನಿಟ್ಟು ಚಿರತೆಗಳನ್ನು ಹಿಡಿದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಲಾಗುತ್ತದೆ.

ಬೆಳೆನಾಶಕ್ಕೆ ಕಾರಣವಾದ ಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ: ಆನೆ ಕಂದಕ, ಸೋಲಾರ್‌ ತಂತಿಬೇಲಿ, ನಿರ್ಮಿ ಸಲು ಮತ್ತು ನೀರಿನ ಹೊಂಡಗಳನ್ನು ನಿರ್ಮಿಸುವುದು ಮತ್ತು ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಅವಶ್ಯವಿರುವಂತಹ ಮೇವಿನ ಗಿಡಗಳನ್ನು ಬೆಳೆಸುವ ಕಾಮಗಾರಿ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆ ಮಂಜೂರಾದ ಕೂಡಲೇ ವನ್ಯಪ್ರಾಣಿ ಹಾವಳಿಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಅನೈತಿಕ ಚಟುವಟಿಕೆಗೆ ಅರಣ್ಯಾಧಿಕಾರಿಗಳ ಕ್ರಮ
ಕೋಲಾರ ಜಿಲ್ಲೆಯ ಅಂತರಗಂಗೆ ವಲಯ ಅರಣ್ಯ ಪ್ರದೇಶ 15 ಹೆಕ್ಟೇರ್‌ ಇದ್ದು, ಮಡೇರಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಭಿವೃದ್ಧಿ ಮಾಡುವ ಸಲುವಾಗಿ ಡಿಡಿಎಫ್‌ ಯೋಜನೆಯಲ್ಲಿ 2010-11ರ ಸಾಲಿನಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಪ್ರವಾಸೋದ್ಯಮದ ದೃಷ್ಟಿಯಿಂದ ಜನರ ಆಕರ್ಷಣೆಗಾಗಿ ಈ ತಪ್ಪಲಿನ ಅರಣ್ಯದಲ್ಲಿ ಸಿಮೆಂಟಿನಲ್ಲಿ ನಿರ್ಮಿಸಿರುವ ಆಕಷಣೀಯ ಗುಡಿಸಲು, ವಿವಿಧ ಪ್ರಾಣಿ-ಪಕ್ಷಿಗಳ ಕೆತ್ತನೆಗಳು ನಿರ್ವಹಣೆ ಇಲ್ಲದೆ ಹಾಳಾಗಿದೆ. ಮಾವು, ಬೇವು, ಹೊಂಗೆ ಸೇರಿ ನೆಟ್ಟಿರುವ ಎಲ್ಲಾ ಗಿಡಗಳು ಸತ್ತು ಹೋಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಕಾವಲಿದ್ದರೂ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎನ್ನುವುದಕ್ಕೆ ಅರಣ್ಯ ಪ್ರದೇಶದ ಬೆಟ್ಟದ ದಾರಿ ಉದ್ದಕ್ಕೂ ಬಿದ್ದಿರುವ ಮದ್ಯಪಾನ ಬಾಟಲಿಗಳೇ ಸಾಕ್ಷಿ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಪ್ರಾಣಿ ಪಕ್ಷಿಗಳ ಮಾಹಿತಿ ಬಗ್ಗೆ ತಿಳಿಸುವ ಬೋರ್ಡ್‌ ಪೂರ್ತಿ ಅಳಿಸಿ ಹೋಗಿದೆ.

ಅರಣ್ಯ ಸಿಬ್ಬಂದಿ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ
ಸರ್ಕಾರದ ವಿವಿಧ ವಿಭಾಗದ ಇಲಾಖೆಗಳಿದ್ದರೂ ಇವುಗಳೆಲ್ಲಾ ಸಾರ್ವಜನಿಕರಿಗೆ ಒಂದಿಲ್ಲೊಂದು ರೀತಿ ನಿಕಟವರ್ತಿಯಾಗಿರುತ್ತವೆ. ಆದರೆ, ಜನರಿಂದ ದೂರವಾಗಿ, ಹೊರಗಿನ ವ್ಯವಸ್ಥೆಗೆ ಸಂಬಂಧವಿಲ್ಲವೆಂಬಂತೆ ಆಡಳಿತ ನಡೆಸುವ ಅರಣ್ಯ ಇಲಾಖೆ ಬಗ್ಗೆ ಹೆಚ್ಚಿಗೆ ಯಾರಿಗೂ ಮಾಹಿತಿ ದೊರೆಯಲ್ಲ. ಇಲಾಖೆ ಪ್ರತಿ ಕೆಲಸವೂ ಸಾರ್ವಜನಿಕರಿಂದ ಬಹುತೇಕ ದೂರವೇ ಉಳಿದಿರುತ್ತದೆ. ಇಂತಹ ಇಲಾಖೆಗೆ ಕೋಟ್ಯಂತರ ರೂ. ಅನುದಾನದ ಬಿಡುಗಡೆಯಾದರೂ ಇಲಾಖೆ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಮಾಹಿತಿ ಕೊರತೆ ಎದುರಿಸುತ್ತಿದ್ದಾರೆ. ಇದು ಸಾಲದೆಂಬಂತೆ ಜಿಲ್ಲೆಯಲ್ಲಿ ಬರ ಆವರಿಸಿರುವುದರಿಂದ ಕಾಡು ಪ್ರಾಣಿಗಳ ಉಳಿವು, ಕಾಡುಪ್ರಾಣಿಗಳಿಂದಾಗುವ ಹಾನಿ ಸೇರಿ ಇನ್ನಿತರ ಪ್ರಮುಖ ಅರಣ್ಯ ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖೆ ಕ್ರಮಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಇಲಾಖೆ ಹಣ ದೋಚಲು ವಾಹನಗಳಿಗೆ ಡೀಸೆಲ್‌, ಪೆಟ್ರೋಲ್‌ ಹಾಕಿಸಿಕೊಳ್ಳುತ್ತಿ ದ್ದಾರೆಯೇ ಹೊರತು ಅರಣ್ಯ ಅಭಿವೃದ್ಧಿ ಪದವೇ ಅವರಿಗೆ ಗೊತ್ತಿಲ್ಲ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಯಾರ ಕೈಗೂ ಸಿಗುವುದಿಲ್ಲ. ಕಚೇರಿಗೆ ಸರಿಯಾಗಿ ಬರುವುದಿಲ್ಲ. ಹಾಜರಾತಿ ಪುಸ್ತಕ ಪರಿಶೀಲಿಸಿ ದರೆ ಇವರ ಬಣ್ಣ ಬಯಲಾಗುತ್ತದೆ. 
● ಕೆ.ಶ್ರೀನಿವಾಸಗೌಡ, ಜಿಲ್ಲಾ ಸಂಚಾಲಕರು, ರೈತ ಸಂಘ

ಮಡೇರಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಚಿರತೆ, ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದರೂ ಇಲಾಖೆ ಯಾವುದೇ
ಕ್ರಮ ತೆಗೆದುಕೊಂಡಿಲ್ಲ. ಕೋಟ್ಯಂತರ ರೂ. ಅನುದಾನ ವೆಚ್ಚ ಮಾಡಿ ಬೆಟ್ಟದಂಚಿನಲ್ಲಿ ನಿರ್ಮಾನ ಮಾಡಿರುವ ತಡುಕುಗಳು
(ತಡೆಗೋಡೆ) ಹಾಳಾಗಿವೆ. ಇದರಿಂದ ಚಿರತೆಗಳು ಸುಲಭವಾಗಿ ಊರೊಳಗೆ ಪ್ರವೇಶಿಸುತ್ತವೆ. ಬೆಳೆ ಹಾಕಿದರೆ ಕಾಡು ಹಂದಿಗಳಿಗೆ ಸಾಕಾಗುವುದಿಲ್ಲ. ಈ ಬಗ್ಗೆಯೂ ಇಲಾಖೆ  ತಲೆಕೆಡಿಸಿಕೊಳ್ಳುತ್ತಿಲ್ಲ.
● ದೊಡ್ಡಣ್ಣ, ರೈತ, ಅಂತರಗಂಗೆ ಅರಣ್ಯ ವಲಯ

ಕೋಲಾರ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಹಾವಳಿ ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.
ಹಾಗೆಯೇ ಅವುಗಳ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ. ಬೇಸಿಗೆಯಲ್ಲಿ ಬರುವ ಅರಣ್ಯ ಪ್ರದೇಶದ ಸಮಸ್ಯೆ ನಿಭಾಯಿಸಲು ಇಲಾಖೆ ಸರ್ವ ರೀತಿಯಲ್ಲೂ ಸಜ್ಜಾಗಿದೆ.
● ಚಕ್ರಪಾಣಿ,  ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ.

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next