Advertisement

ಗರಬಡಿದಂತಾದ ಅರಣ್ಯಭೂಮಿ ಸಾಗುವಳಿದಾರರು

10:51 AM Feb 24, 2019 | Team Udayavani |

ಹೊನ್ನಾವರ: 1947ರಲ್ಲಿ ಜಿಲ್ಲೆಯಲ್ಲಿ 3ಲಕ್ಷ ಜನಸಂಖ್ಯೆ ಇತ್ತು. ಕಲಿತವರು ಪೇಟೆ ಸೇರಿದರು. ಶೇ.80 ರಷ್ಟು ಅರಣ್ಯ ಇತ್ತು. ಸರ್ಕಾರ ಬೊಕ್ಕಸ ತುಂಬಿಕೊಳ್ಳಲು ಅರಣ್ಯ ಸಂಪತ್ತಿನ ಮಾರಾಟ ಮಾಡತೊಡಗಿತು. ಇಲ್ಲೆಲ್ಲಾ ರೈತರು ಭೂಮಿ ಸಾಗುವಳಿ ಮಾಡಿದರು. ಕುಟುಂಬ ವಿಸ್ತಾರವಾದಂತೆ ಅರಣ್ಯಭೂಮಿ ಸಾಗುವಳಿಗೆ ಜನ ತೊಡಗಿದರು. ಬೃಹತ್‌ ಯೋಜನೆಗಳು ಒಂದಿಷ್ಟು ಕಾಡು ನುಂಗಿ ಹಾಕಿದವು.

Advertisement

1980ರ ಅರಣ್ಯ ಕಾನೂನು ಬರುವ ಮೊದಲು ಸಾಗುವಳಿ ಮಾಡುತ್ತಿದ್ದವರಿಗೆ ಭೂಮಿ ಅನುಭವಿಸುವ ಹಕ್ಕು ಸಿಕ್ಕಿದೆ. ಜಿಲ್ಲೆಯಲ್ಲಿ ತಲೆ ಎತ್ತಿದ ಪರಿಸರವಾದಿಗಳೆಂದುಕೊಂಡವರು ಅರಣ್ಯ ನಾಶದ ವಿರುದ್ಧ ಬೊಬ್ಬೆ ಹೊಡೆದರು. ಸರ್ಕಾರ ಕಾನೂನು ತಂದು ಅರಣ್ಯಭೂಮಿ ಅತಿಕ್ರಮಣ ನಿಷೇಧಿ ಸಿತು. ಬಡ ಅತಿಕ್ರಮಣದಾರರಿಗೆ ಹಕ್ಕು ಸಿಗದೇ ಹೋಯಿತು. ಜಿಲ್ಲೆಯಲ್ಲಿ ಪರಿಸರ ನಾಶದ ನೆಪವೊಡ್ಡಿ ಕೈಗಾರಿಕೆ ಬರುವುದನ್ನು ತಡೆಯಲಾಯಿತು. ಜನಕ್ಕೆ ಬದುಕಲು ಅರಣ್ಯ ಬಿಟ್ಟರೆ ಬೇರೆ ಗತಿಯಿರಲಿಲ್ಲ. ಕಾಡು ಕಡಿದರೂ ಅಡಕೆ ತೆಂಗಿನ ತೋಟ ಬೆಳೆಸಿದ್ದಾರೆ, ಹಸಿರು ಹಾಗೆಯೇ ಇದೆ.

ಅರಣ್ಯಾಧಿಕಾರಿಗಳ ಸಂಖ್ಯೆ ಹೆಚ್ಚಾಯಿತು. ಕಾಡು ಕಡಿದು ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಆದಾಯ ಕೊಟ್ಟಿದ್ದು ಅರಣ್ಯ ಇಲಾಖೆ. ಇದರಿಂದ ಅರಣ್ಯ ಸಂಪತ್ತು ಶೇ. 80ರಿಂದ 40ಕ್ಕೆ ಇಳಿಯಿತು. ಪಾರಂಪರಿಕ ಅರಣ್ಯವಾಸಿಗಳ ಹಕ್ಕು ಕಾಯಿದೆ ಅಡಿ ಅರಣ್ಯ ಭೂಮಿ ಕೊಡಿ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಅದಕ್ಕೆ ಸೂಕ್ತ ದಾಖಲೆ ಕೇಳಿತ್ತು. 65ಸಾವಿರ ಜನ ಅರಣ್ಯಭೂಮಿ ಸಾಗುವಳಿದಾರರು ಅರ್ಜಿ ಹಾಕಿಕೊಂಡರು. ಪರಿಶಿಷ್ಟ ಪಂಗಡದ 3569 ಅರ್ಜಿಗಳಲ್ಲಿ 1331 ಅರ್ಜಿ ಪುರಸ್ಕರಿಸಿದ್ದು, 2238 ಅರ್ಜಿ ತಿರಸ್ಕೃತವಾಗಿದೆ. ಪಾರಂಪರಿಕ ಅರಣ್ಯವಾಸಿಗಳ 80,683 ಅರ್ಜಿಗಳಲ್ಲಿ 394 ಮಂಜೂರಾಗಿದೆ. ಉಳಿದವು ತಿರಸ್ಕೃತವಾಗಿದೆ, 18,000 ಅರ್ಜಿಗಳು ಪರಿಶೀಲನೆಯಲ್ಲಿವೆ. ಸರ್ವೋಚ್ಚ ನ್ಯಾಯಾಲಯ ಒಕ್ಕಲೆಬ್ಬಿಸಿ ಎಂದು ಆದೇಶಿಸಿತ್ತು. ರಾಜಕಾರಣಿಗಳು ಎಬ್ಬಿಸಬೇಡಿ ಎಂದು ಒತ್ತಡ ತಂದರು. ಅಧಿಕಾರಿಗಳು ಸತ್ಯಕ್ಕೆ ದೂರವಾದ ವರದಿ ಕೊಟ್ಟರು.

ಮನೆಗಳು ಮಾತ್ರವಲ್ಲ ಶಾಲೆ, ದೇವಸ್ಥಾನ, ಅಂಗನವಾಡಿ ಸಹಿತ ನೂರಾರು ಕಟ್ಟಡಗಳು ಜಿಲ್ಲೆಯಲ್ಲಿ ಇಂದು ಅರಣ್ಯ ಭೂಮಿಯಲ್ಲಿದೆ. ನ್ಯಾಯವಾದಿ ರವೀಂದ್ರನಾಥ ನಾಯ್ಕ ಅತಿಕ್ರಮಣ ಭೂಮಿ ಸಾಗುವಳಿದಾರರ ಪರವಾಗಿ ಮೂರು ದಶಕದಿಂದ ಹೋರಾಟ ನಡೆಸಿದ್ದಾರೆ. ಒಂದು ಹಂತದಲ್ಲಿ ಯಶಸ್ವಿಯಾಗಿದ್ದರು. ಅಧಿಕಾರಿಗಳು, ರಾಜಕಾರಣಿಗಳು ಆಸಕ್ತಿವಹಿಸಲಿಲ್ಲ. ರವೀಂದ್ರನಾಥ ಹೆಸರಿಗೆ ನಾಯಕರಾಗಿ ಉಳಿಯುವಂತೆ ಮಾಡಿದರು.

ಅತಿಕ್ರಮಣದಾರರು ಶೇ.99 ಬಡ ಹಿಂದುಳಿದ ವರ್ಗದವರು, ಈ ವರ್ಗ ಪ್ರಬಲಗೊಳ್ಳುವುದು ಬಹುಕಾಲದಿಂದ ಜಿಲ್ಲೆಯಲ್ಲಿ ಗಟ್ಟಿ ಅಧಿ ಕಾರ ಹಿಡಿದಿರುವವರಿಗೆ, ಅವರ ವರ್ಗಕ್ಕೆ ಬೇಕಾಗಿಲ್ಲ. ಕರ್ನಾಟಕ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾಗುವಳಿದಾರರ ಪರವಾಗಿ ಸರಿಯಾಗಿ ವಾದಿಸಿಲ್ಲ. ಈಗ ಪುನಃ 5ತಿಂಗಳಲ್ಲಿ ಖುಲ್ಲಾಪಡಿಸುವ ಆದೇಶ ಬಂದಿದೆ. ಹೆಂಡತಿ, ಪುಟ್ಟಮಕ್ಕಳನ್ನು ಕಟ್ಟಿಕೊಂಡು ಮನೆಮಾಡಿಕೊಂಡಿದ್ದ ಬಡವರು ಎಲ್ಲಿಗೆ ಹೋಗಬೇಕು ? ಲೋಕಸಭೆಯಲ್ಲಿ ಹಿಂದೊಮ್ಮೆ ಜಿಲ್ಲೆಯ ಅರಣ್ಯ ಸಾಗುವಳಿದಾರರನ್ನು ಎಬ್ಬಿಸಿದರೆ ಅವರು ಸಮುದ್ರದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೇ ಎಂದು ಮಾರ್ಗರೇಟ್‌ ಆಳ್ವಾ ಪ್ರಶ್ನಿಸಿದ್ದರು. ಈಗ ಅದೇ ಪರಿಸ್ಥಿತಿ ಬಂದಿದೆ.

Advertisement

ಅತ್ತ ಕೈಗಾರಿಕೆಯೂ ಇಲ್ಲ, ಇತ್ತ ಅರಣ್ಯವೂ ಉಳಿದಿಲ್ಲ. ಜನಸಂಖ್ಯೆ 13ಲಕ್ಷವಾಗಿದೆ. ಅರಣ್ಯವಾಸಿಗಳು ಉಳಿಯುವ ಲಕ್ಷಣ ಇಲ್ಲ. ಜಿಲ್ಲೆ ಸಂಕಷ್ಟದಲ್ಲಿದೆ. ಈ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರಿಗೆ ಮನೆಕಟ್ಟಿಕೊಳ್ಳಲು ಅಂಗೈ ಭೂಮಿಯೂ ಇಲ್ಲ. ಕಾದಾಡುವ ತಾಕತ್ತು ಜನಕ್ಕಿಲ್ಲ, ಹೋರಾಟ ಮುಂದುವರಿಸುವುದಾಗಿ ರವೀಂದ್ರನಾಥ ನಾಯ್ಕ ಹೇಳಿದ್ದಾರೆ.

ಮಲೆನಾಡಿನ ಅರಣ್ಯ ಸಾಗುವಳಿದಾರರ ಜೀವನ ಉಳಿಸಲು ಅರಣ್ಯದ ಒಡೆತನ ಇರುವ ಕೇಂದ್ರ ಸರ್ಕಾರದ ಜೊತೆ ಮಾತನಾಡಿ, ಲೋಕಸಭೆಯಲ್ಲಿ ಕಾನೂನು ತಿದ್ದುಪಡಿ ಮಾಡಿ, ಹಕ್ಕು ಕೊಡಿಸುವ ವ್ಯವಧಾನ ರಾಜ್ಯಸರ್ಕಾರಕ್ಕೆ ಇದೆಯೇ? ಬೆಳಕು ಕಾಣಿಸುತ್ತಿಲ್ಲ, ಕಾಲವೇ ಉತ್ತರಿಸಬೇಕು.

ಜಿ.ಯು ಹೊನ್ನಾವರ 

Advertisement

Udayavani is now on Telegram. Click here to join our channel and stay updated with the latest news.

Next