ಮಲೆನಾಡಿನ ಮಳೆ ಸುರಿಯಲು ಜೂನ್ ಬರಬೇಕು. ಬಯಲು ನಾಡಿಗೆ ಬೇಸಿಗೆ ಮಳೆಯ ಆರ್ಭಟ ತೋರಿಸುತ್ತಿದ್ದ ಪ್ರಕೃತಿ , ಈ ವರ್ಷ ಮಲೆನಾಡಿಗೂ ಅವಧಿಯ ಮೊದಲೇ ಹನಿಯ ತಂಪು ತೋರಿಸಿದೆ. ಪರಿಣಾಮ ಕಾಡು ದಟ್ಟ ಹಚ್ಚ ಹಸುರಿನಿಂದ ಖುಷಿಯಲ್ಲಿದೆ. ಹಸಿರು ಹುಲ್ಲು, ಸೊಪ್ಪು ಚಿಗುರಿದ್ದು ಜಿಂಕೆ, ಕೋತಿಗಳಿಗೆಲ್ಲ ಮಳೆಯ ಮೊದಲ ಪ್ರೇಮ ಪತ್ರದಂತೆ ಕಾಣಿಸಿದೆ. ಗುಡ್ಡದಲ್ಲಿ ನೀರಿಲ್ಲದಿದ್ದರೂ ಇವೆಲ್ಲಾ ನೆಮ್ಮದಿಯಿಂದ ಬದುಕು ಬಲ್ಲವು ಎಂಬ ನಂಬಿಕೆ ಜೊತೆಯಾಗಿದೆ.
ಶಿರಸಿಯ ಮರದ ಅಂಬೆ ಮಾರಿಕಾಂಬೆಯ ಜಾತ್ರೆ ಮಾರ್ಚ್‌ನಲ್ಲಿ ಮುಗಿಯುವ ಹೊತ್ತಿಗೆ ಮಲೆನಾಡಿಗೆ ಮಳೆಯ ಖುಷಿ ಕಾಣಿಸಿದೆ. ಇತ್ತೀಚಿನ ಮೂರು ವರ್ಷಗಳಲ್ಲಿ ಇಲ್ಲಿ ಬೇಸಿಗೆ ಅಂದರೆ ಉರಿ ಬಿಸಿಲ ದರ್ಬಾರ್ ಮಾತ್ರ ಇರುತ್ತಿತ್ತು. ಉಷ್ಣತೆ 36 ಡಿಗ್ರಿ ದಾಟಿದಾಗೆಲ್ಲ ಹನಿ ಸಿಂಚನವಾಗುತ್ತಿದ್ದ ನೆಲೆ ಯಾಕೋ ಬದಲಾಗಿತ್ತು. ಆದರೆ ಈಗ ಪುಟ್ಟ ಬದಲಾವಣೆ ಕಾಣಿಸಿದೆ. ಕೊಡಗಿನ ಕಾಫಿಗೆ ಈ ಮಳೆ ಬ್ಲಾಸ್ ಷವರ್, ಅಲ್ಲಿಂದ ಗಿಡದಲ್ಲಿ ಹೂ ಸೊಬಗು ಬಯಲು ನಾಡಿನ ದ್ರಾಕ್ಷಿ, ದಾಳಿಂಬೆ, ಅಂಬು, ಮಲ್ಲಿಗೆ, ಮಾವು… ಹೀಗೆ ಎಲ್ಲಾ ಫಲವೃಕ್ಷಗಳಿಗೂ ಚೆನ್ನಾಗಿ ಬಿಸಿಲು ಕಾದು ಮಳೆಯ ತಂಪಾದಾಗಷ್ಟೇ ಹೂ ಕಚ್ಚುತ್ತವೆ. ಅಕಾಲಿಕ ಮಳೆ ಸುರಿದರೆ ಕೃಷಿಯ ಲೆಕ್ಕಾಚಾರಗಳು ತಲೆ ಕೆಳಗಾಗುತ್ತವೆ. ಮಳೆ ಸುರಿಯದ ಬಯಲು ನಾಡಿನಲ್ಲಿ ಕೃತಕ ನೀರಾವರಿ ಮೂಲಕ ಹೂ ಹೊಮ್ಮಿಸುವ ಪ್ರಯತ್ನ ನಡೆಯುತ್ತದೆ. ತೋಟದ ಗಿಡಗಳಿಗೆ ನೀರುಣಿಸದೇ ರಜೆ ನೀಡಿ ಒಮ್ಮೆಗೆ ತಂಪೊದಗಿಸಿ ಗೆಲ್ಲುವ ತಂತ್ರಗಳು, ಮಾರುಕಟ್ಟೆ ನೋಡಿಕೊಂಡು ಹಣ್ಣಿನ ಬೆಳೆ ಬೆಳೆಯಲು ಸಾಧ್ಯವಾಗಿದೆ. ಸಾವಿರಾರು ಸಸ್ಯ ಸಂಕುಲಗಳಿರುವ ಮಲೆನಾಡಿನ ಕಾಡಿಗೆ ಕೃಷಿ ನೀರಾವರಿಯ ಕೃತಕತೆಯ ಹಂಗಿಲ್ಲ. ಚಳಿಗಾಲಕ್ಕೆ ಎಲೆ ಉದುರಿಸುವ ಮರಗಳು ಬೇಸಿಗೆ ಆರಂಭಕ್ಕೆ ಚಿಗುರಿ ನಿಲ್ಲುತ್ತವೆ. ಇಂಥ ಚಿಗುರು ಚೆಲುವಿನ ಮಧ್ಯೆ ಈ ವರ್ಷ 10-15 ದಿನಕ್ಕೊಂದು ಮಳೆ ಸತತ ಸುರಿಯುತ್ತಿದೆ. ಗುಡು ಸಿಡಿಲಿನ ಅಬ್ಬರ ಕೆಲವೊಮ್ಮೆ ಮಳೆಗಾಲ ನೆನಪಿಸಿದೆ.
ಅಡಿಕೆ ತೋಟಕ್ಕೆ ನಿತ್ಯ ನೀರುಣಿಸುತ್ತಿದ್ದವರು ಮಳೆ ಸುರಿದ ದಿನಗಳಲ್ಲಿ ಪಂಪುಗಳಿಗೆ ರಜೆ ನೀಡಿದ್ದಾರೆ. ನದಿ ನೀರೆತ್ತಿ ತೋಟಕ್ಕೆ ಬಳಸುವುದನ್ನು ನಿಲ್ಲಿಸಿದಾಗ ಪುನಃ ಹಳ್ಳದ ಜುಳು ಜುಳು ಮರಳಿದೆ. ನಮ್ಮ ಕೊಡೊಳಗೆ ಕಾಡು ಗೆಣಸು, ಸುಳಿ ಗಡ್ಡೆ, ಶತಾವರಿ, ಸೊಗದೇ ಬೇರು, ಗೌರಿ ಹೂ, ಕಾಡು ಸುವರ್ಣ ಗಡ್ಡೆ ಮುಂತಾದ ಕಂದಮೂಲಗಳಿವೆ. ಮಳೆ ಅಬ್ಬರಕ್ಕೆ ಭೂಮಿ ಮರಳಿಸಿವೆ. ಬೇಸಿಗೆ ಆರಂಭಕ್ಕೆ ಕೆಳಹಂತದಲ್ಲಿ ಗೂಡು ನಿರ್ಮಿಸಿದ ಕೆಂಪಿರುವೆ ( ಸೌಳಿ, ಚಗಳಿ) ಗಳು ದೊಪ್ಪನೆ ಸುರಿದ ಮಳೆಯಿಂದ ಕಂಗಾಲಾಗಿ, ಗೂಡಿಗೆ ಹೊಸ ನೆಲೆ ಹುಡುಕಿವೆ.
ಮಣ್ಣಿನ ಆರಿಂಚು ತೇವದಲ್ಲಿನ ಮ್ಮ ಕೃಷಿ ಬದುಕಿದೆ. ಆರಿಂಚಿಗೆ ನೀರುಣಿಸಲು ಮಳೆ ಸಾಕು. ಆದರೆ ಅನುಕೂಲಕ್ಕೆ ತಕ್ಕ ಬೆಳೆ ಬೆಳೆಯಲು ಹೋಗಿ ನದಿ, ಕೆರೆ ,ಬಾವಿಗಳಲ್ಲಿ ಸೋತಿದ್ದೇವೆ. ಮಣ್ಣಿನ ಮೇಲ್ಮೆ„ ಒದ್ದೆಯಾಗಿಸಲು ಈಗ 1900 ಅಡಿ ಆಳಕ್ಕೂ ಕೊಳವೆ ಬಾವಿ ಕೊರೆದಿದ್ದೇವೆ. ಅವಕಾಶ ಸಿಕ್ಕರೆ 2000 ಮೀಟರ್ ಆಳದ ಪಾತಾಳ ಗಂಗೆಗೆ ಕನ್ನ ಹಾಕಲೂ ಸೈ. ಈ ಕ್ಷಣಕ್ಕೆ ಮೇಲ್ಮಣ್ಣಿಗೆ ತಂಪೆರೆದ ಮಳೆ ನೈಸರ್ಗಿಕ ಸಸ್ಯಾಭಿವೃದ್ಧಿಯ ಸಾಧ್ಯತೆ ತೋರಿಸಿದೆ. ಮಾರ್ಚ್‌ನಲ್ಲಿ ಮಳೆ ಸುರಿದರೆ ಶಿರಸಿ ಸುತ್ತುಮುತ್ತಲಿನ ಕಾಡಿನ ಮತ್ತಿ ಮರಗಳಲ್ಲಿ ಹೆಚ್ಚಾ ಹೂ ತುಂಬಿ ಜೇನಿಗೆ ಸಂಭ್ರಮವೆಂದು ವನವಾಸಿ ನಂಬಿಕೆಯಿದೆ. ಬೇಸಿಗೆಯ ಆರಂಭದಲ್ಲಿ ಹೂವರಳಿಸಿ, ಜೇನಿಗೆ ಮಕರಂಧ ಅರ್ಪಿಸಿದ ಗುರುಗೆ (ಕುರುಂಜಿ) ಹಿಂಡಿನಲ್ಲಿ ಒಣಗಿ ನಿಂತ ಹೂ ಒದ್ದೆಯಾದ ರಾತ್ರಿ ಮರಳಿ ಜೇನಿನ ಪರಿಮಳ ಬೀರಿದೆ. ನಿಸರ್ಗದ ಈ ಬಗೆಯ ವಿಸ್ಮಯಕ್ಕೆ ಏನು ಕಾರಣ? ಬೇಸಿಗೆ ಮಳೆಯಲ್ಲಿ ಹೊಸ ಪ್ರಶ್ನೆ ಚಿಗುರಿದೆ. ಮಳೆಯಲ್ಲಿ ಮಿಂದ ವೃಕ್ಷಗಳು ಇನ್ನಷ್ಟು ಖುಷಿಯಲ್ಲಿ ದಟ್ಟ ಹಸಿರಲ್ಲಿ ಕುಣಿಯುತ್ತಿವೆ.
ಬೇಸಿಗೆ ಮಳೆಗೆ ಬಾವಿಯ ನೀರು ಬತ್ತಿ ಹೋಗುತ್ತದೆಂಬ ಜ್ಞಾನ ನಮ್ಮ ಹಳ್ಳಿಗರದ್ದು. ಆದರೆ ಈ ವರ್ಷ ನೀರಿನ ಕೊರತೆ ಮೊದಲಿನಷ್ಟಿಲ್ಲ. ಹತ್ತು ಹದಿನೈದು ವರ್ಷಗಳ ಹಿಂದೆ ಬೇಸಿಗೆ ಮಳೆ ಸುರಿದರೆ ಮಲೆನಾಡಿನ ಕೃಷಿಕರ ಗಡಿಬಿಡಿ ಹೆಚ್ಚುತ್ತಿತ್ತು. ಕೃಷಿ ಭೂಮಿಗೆ ಗೊಬ್ಬರ ಹೊರುವುದು, ಉರುವಲು, ದನಕರುಗಳಿಗೆ ಮೇವು ಸಂಗ್ರಹದಲ್ಲಿ ಗಂಡಸರು ದಣಿಯುತ್ತಿದ್ದರು. ಉಪ್ಪಿನಕಾಯಿ, ಹಪ್ಪಳ, ತಯಾರಿಕೆಯಲ್ಲಿ ಮಹಿಳೆಯರು ಹೈರಾಣ. ಈಗ ಅಡಿಕೆ, ಭತ್ತ ಮನೆಯೊಳಗೆ ಸೇರಿದರೆ ಯಾವತ್ತೂ ಮಳೆ ಆಹ್ವಾನಕ್ಕೆ ಮಲೆನಾಡು ಸಿದ್ಧವಾಗಿರುತ್ತದೆ. ಹುಲ್ಲು, ಸೋಗೆಯ ಮನೆಗಳು ಕಣ್ಮರೆಯಾದ ಬಳಿಕ ಇಂಥ ಧೈರ್ಯ ಬಂದಿದೆ. ಈ ವರ್ಷ ಬಿದಿರು ಹೂವರಳಿಸಿದೆ. ಸುರಿದ ಮಳೆಗೆ ಬಿದಿರು ಭತ್ತ ಚಿಗುರಿ ಗಿಡವಾಗಿ ಹಿಂಡಿನ ಮಗ್ಗುಲಲ್ಲಿ ಹೊಸ ಹಸಿರು ಮೊಳೆತಿದೆ. ಗುಡ್ಡದಿಂದ ಹರಿವ ನೀರಲ್ಲಿ ಬಿದಿರು ಹೂ ಹೂಟ್ಟು ತೇಲಿ ಬರುತ್ತಿದೆ. ಮಳೆ ಬಿದ್ದು ಒಣ ಬಿದಿರಿನ ಹಿಂಡು ತಂಪಾದ ಹೊತ್ತಿನಲ್ಲಿ ಕಟ್ಟೆವಾಡ್ಲು (ರಬ್ಬರ್ ಬಿಟ್ಲ) ಎಂಬ ಕಪ್ಪು ಹುಳಗಳ ಸಂಖ್ಯಾನ್ಪೋಟವಾಗಿವೆ. ರಾತ್ರಿ ಬೆಳಕು ಕಂಡಾಗ ಮನೆ ಮನೆಗೆ ನುಗ್ಗುತ್ತಿವೆ. ಬೆಂಕಿ ಹಿಡಿದು ಹುಳು ಓಡಿಸುವ ಕೀಟಕ್ರಾಂತಿಗೆ ಜನ ಮನೆ ಸುಟ್ಟುಕೊಳ್ಳದಿದ್ದರೆ ಸಾಕು. ಕೀಟಗಳ ಹೆಚ್ಚಳಕ್ಕೆ ಮಳೆಯ ಕೊಡುಗೆಯಿದೆ. ಹಸಿರು ಹುಲ್ಲು, ಸೊಪ್ಪು ಚಿಗುರಿದ್ದು ಜಿಂಕೆ, ಕೋತಿಗಳಿಗೆಲ್ಲ ಮಳೆಯ ಮೊದಲ ಪ್ರೇಮಪತ್ರದಂತೆ ಕಾಣಿಸಿದೆ. ಗುಡ್ಡದಲ್ಲಿ ನೀರಿಲ್ಲದಿದ್ದರೂ ಇವು ಬದುಕುವ ಸಾಧ್ಯತೆ ತೋರಿಸಿದೆ.
ನಿತ್ಯ ಹರಿದ್ವರ್ಣ ಕಾಡುಗಳನ್ನು ರಾತ್ರಿ ಓದಬೇಕು. ಮಿಂಚು ಹುಳುಗಳು ನೂರಾರು ಅಡಿ ಹೆಮ್ಮರದ ತುದಿಗೆ ಬೆಳಕು ಬೀರುತ್ತವೆ. ಈಗಾಗಲೇ ಇಂಥ ಜಗಮಗ ಸಂಭ್ರಮ ಕಾಣಿಸಿದೆ. ಸೊಳ್ಳೆಗಳ ಆರ್ಭಟವೂ ಹೆಚ್ಚಿದೆ. ತರಗೆಲೆಯ ಸಪ್ಪಳಕ್ಕೆ ನಮ್ಮ ದನಕರುಗಳ ಬೆನ್ನಿಗೆ ಬಿದ್ದು ರಕ್ತ ಹೀರುವ ಕುರುಡು ನೊಣ ( ಕುದುರೆ ನೊಣ)ಗಳು ಮಳೆ ಅವಸರಕ್ಕೆ ಯಾಕೋ ಬೇಸತ್ತು ಆರ್ಭಟ ತಣ್ಣಗಾಗಿದೆ. ಇನ್ನೇನು ಮಳೆ ಜಿರಲೆಗಳ ಕೂಗು ಶುರುವಾಗಲಿದೆ. ರಾತ್ರಿ ನಮ್ಮ ಕಾಡು ದಾರಿಗೆ ಬೆಳಕು ಬಿದ್ದಾಗೆಲ್ಲ ಕುಪ್ಪಳಿಸುವ ಕಪ್ಪೆಗಳು ಬೇಸಿಗೆ ಮಳೆಯ ಅವಸರಕ್ಕೆ ಒದಗಿದ ಜೀವಲೋಕದ ಹೊಸ ಉತ್ಸಾಹದ ಸಾಕ್ಷಿಗಳು. ಊರಿನ ಗುಡ್ಡಗಳಲ್ಲಿ ಬಿದರಕ್ಕಿ ಬಿದ್ದು ಹಾಸಿರುವಾಗ ಕಂಠಪೂರ್ತಿ ಮೆಲ್ಲುತ್ತ ಖುಷಿಯಲ್ಲಿ ಕೂಗುತ್ತಿದ್ದ ಕಾಡುಕೋಳಿ, ನವಿಲು, ಪಾರಿವಾಳಗಳು ಹನಿಗೆ ಚಿಗುರಿದ ಭತ್ತ ಕಂಡು ಆಹಾರ ನಾಶವಾಗಿ ಅವಾಕ್ಕಾಗಿವೆ. ಮಳೆಯಿಂದ ಅನ್ನ ನಾಶವಾಗಿದೆಯಂದು ಅತ್ತಿವೆ. ಮಳೆ ಅವಸರಕ್ಕೆ ಕಾರಣ ಕೇಳಿ ಮೇಘರಾಜನಿಗೆ ನೋಟಿಸು ಕಳುಹಿಸಿವೆ. ಆದರೆ ನಿಸರ್ಗ, ಕೀಟಗಳನ್ನು ವೃದ್ಧಿಸಿ ಅವುಗಳ ಆಹಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.
ಶಿವಾನಂದ ಕಳವೆ