Advertisement

ದೇಶದಲ್ಲಿ ಅರಣ್ಯ ಪ್ರಮಾಣ ಹೆಚ್ಚಳ ಉತ್ತಮ ಬೆಳವಣಿಗೆ

12:38 AM Jun 07, 2022 | Team Udayavani |

ಜಗತ್ತಿನಾದ್ಯಂತ ಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತಲೇ ಇದ್ದು, ಇದು ಮನುಷ್ಯ ಕುಲಕ್ಕೇ ಅಪಾಯ ತಂದೊಡ್ಡುವ ಎಲ್ಲ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಪ್ರತಿಯೊಂದು ದೇಶವು ತನ್ನಿಂದ ಉತ್ಪತ್ತಿಯಾಗುವ ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂಬುದು ಜಾಗತಿಕ ಸಮುದಾಯದ ಒತ್ತಾಸೆ. ಆದರೆ, ಇಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳ ನಡುವಿನ ಜಗಳದಿಂದಾಗಿ ಈ ಮಾಲಿನ್ಯ ಕಡಿಮೆ ಮಾಡಬೇಕು ಎಂಬ ಆಶಯ ನನೆಗುದಿಗೆ ಬಿದ್ದಿದೆ.

Advertisement

ಇದರ ಮಧ್ಯೆಯೇ ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಅರಣ್ಯ ಪ್ರಮಾಣ 20 ಸಾವಿರ ಚದರ ಕಿಲೋ ಮೀಟರ್‌ ಹೆಚ್ಚಳವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸ್ವಾಗತಾರ್ಹವಾದದ್ದೇ ಆಗಿದೆ. ಈ ಮೂಲಕ ದೇಶದಲ್ಲಿ ಕೇಂದ್ರದ ಜತೆಗೆ ರಾಜ್ಯ ಸರಕಾರಗಳೂ ಅರಣ್ಯ ಹೆಚ್ಚಳ ಮಾಡುವ ಪ್ರಯತ್ನ ನಡೆಸುತ್ತಿವೆ ಎಂಬುದು ಸ್ಪಷ್ಟವಾಗಿದೆ.

ಕಳೆದ ಎರಡು ವರ್ಷಗಳ ಲೆಕ್ಕಾಚಾರ ನೋಡುವುದಾದರೆ, 2,261 ಚದರ ಕಿ.ಮೀ. ಅರಣ್ಯ ಹೆಚ್ಚಳವಾಗಿರುವುದು ಕಂಡು ಬಂದಿದೆ. ಇದರಲ್ಲಿ ಆಂಧ್ರ ಪ್ರದೇಶವೇ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 647 ಚದರ ಕಿ.ಮೀ. ಅರಣ್ಯ ಹೆಚ್ಚಳವಾಗಿದೆ. ಅನಂತರದ ಸ್ಥಾನಗಳಲ್ಲಿ ತೆಲಂಗಾಣ (632 ಚ.ಕಿ.ಮೀ.), ಒಡಿಶಾ (537 ಚ.ಕಿ.ಮೀ.), ಕರ್ನಾಟಕ (155 ಚ.ಕಿ.ಮೀ.) ಮತ್ತು ಝೂರ್ಖಂಡ್‌(110 ಚ.ಕಿ.ಮೀ.) ಇವೆ.

ಸದ್ಯ ದೇಶದಲ್ಲಿ 80.9 ಮಿಲಿಯನ್‌ ಹೆಕ್ಟೇರ್‌ ಅರಣ್ಯ ಪ್ರದೇಶವಿದ್ದು, ಭಾರತ ಭೂಭಾಗದ ಶೇ. 24.62ರಷ್ಟು ವ್ಯಾಪ್ತಿಯಲ್ಲಿದೆ. ಪ್ರದೇಶಾವಾರು ಲೆಕ್ಕಾಚಾರದಲ್ಲಿ ನೋಡುವುದಾದರೆ, ಮಧ್ಯ ಪ್ರದೇಶದಲ್ಲೇ ಹೆಚ್ಚು ಅರಣ್ಯ ಪ್ರದೇಶವಿದೆ. ಅನಂತರದ ಸ್ಥಾನಗಳಲ್ಲಿ ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಿವೆ.

ಇದಕ್ಕಿಂತ ಹೆಚ್ಚಾಗಿ, ಪ್ರತಿಯೊಬ್ಬ ಮನುಷ್ಯನಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗಬೇಕಾದರೆ ಒಂದು ದೊಡ್ಡ ಮರ ಅಥವಾ ನಾಲ್ಕು ಪುಟ್ಟ ಮರಗಳು ಇರಬೇಕು. ಆದರೆ, ಭಾರತದಲ್ಲಿ ಕೇವಲ 35 ಬಿಲಿಯನ್‌ ಮರಗಳಿವೆ. ಭಾರತದ ಜನಸಂಖ್ಯೆ ಮಾತ್ರ ಸುಮಾರು 130 ಕೋಟಿ ಇದೆ. ಹೀಗಾಗಿ, ಭಾರತದಲ್ಲಿ ಪ್ರತೀ 25-26 ಮರಗಳಿಗೆ ಒಬ್ಬ ವ್ಯಕ್ತಿ ಇದ್ದಾನೆ. ಅಂದರೆ ಈಗಿರುವ ಮರಗಳ ಸಂಖ್ಯೆ ಲೆಕ್ಕಾಚಾರದಲ್ಲಿ ಭಾರತದಲ್ಲಿ ಸರಿಯಾದ ಆಮ್ಲಜನಕ ಸಿಗುತ್ತಿಲ್ಲ.

Advertisement

ಹಾಗೆಯೇ ಪರಿಸರ ರಕ್ಷಣೆ ಎಂದರೆ ಕೇವಲ ಗಿಡಗಳನ್ನು ನೆಡುವುದು ಎಂದಲ್ಲ. ಇದರ ಜತೆಗೆ, ಮಾಲಿನ್ಯ ನಿಯಂತ್ರಣ, ನೀರಿನ ಸಂರಕ್ಷಣೆ, ಸರಿಯಾಗಿ ಇಂಧನ ಬಳಕೆ, ನಾಗರಿಕ ಜಾಗೃತಿಯ ಜತೆಗೆ ಪ್ರತಿಯೊಬ್ಬ ವ್ಯಕ್ತಿಯೂ ತಲಾ ಒಂದೊಂದು ಗಿಡವನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡುತ್ತೇನೆ ಎಂಬ ಪಣತೊಡಬೇಕು. ಆಗಷ್ಟೇ ಪರಿಸರ ನಿಜವಾಗಿಯೂ ಉಳಿಯಲು ಸಾಧ್ಯ.

ಏನೇ ಆಗಲಿ ಕಳೆದ ಎಂಟು ವರ್ಷಗಳಲ್ಲಿ 20 ಸಾವಿರ ಚ.ಕಿ.ಮೀ. ಅರಣ್ಯ ಹೆಚ್ಚಾಗಿರುವುದು ಕಡಿಮೆ ಮಾತಲ್ಲ. ಇದಕ್ಕಾಗಿ ಸರಕಾರಗಳಿಗೆ ಮತ್ತು ಅರಣ್ಯ ಹೆಚ್ಚುವಲ್ಲಿ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಲೇಬೇಕು. ಮೊದಲೇ ಹೇಳಿದ ಹಾಗೆ ಸದ್ಯ ಇಡೀ ಜಗತ್ತು ಮಾಲಿನ್ಯದಿಂದ ನಲುಗುತ್ತಿದೆ. ವಾತಾವರಣದಲ್ಲಿ ಕಾರ್ಬನ್‌ ಡೈ ಆಕ್ಸೆ„ಡ್‌ ಹೆಚ್ಚಾಗುತ್ತಿದೆ. ನಗರೀಕರಣದ ಪ್ರಭಾವ ಎಲ್ಲೆಡೆ ಕಾಣಿಸಿಕೊಂಡು ಕಾಂಕ್ರೀಟ್‌ ಕಾಡುಗಳೇ ಸೃಷ್ಟಿಯಾಗುತ್ತಿವೆ. ಇದನ್ನು ಸರಿಪಡಿಸಿಕೊಳ್ಳದೆ ಹೋದರೆ ಮುಂದಿನ ಪೀಳಿಗೆಗೆ ನಾವು ಕೆಟ್ಟ ಭವಿಷ್ಯ ನೀಡಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next