ಪಿರಿಯಾಪಟ್ಟಣ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ವತಿಯಿಂದ ಪಟ್ಟಣದ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರವ ಮುಷ್ಕರ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಧ ರಾಜ್ಯಾಧ್ಯಕ್ಷ ಎ.ಎಂ.ನಾಗರಾಜ್ ಮಾತನಾಡಿ ಅರಣ್ಯ ಇಲಾಖೆಯಲ್ಲಿ ಸುಮಾರು 15 ರಿಂದ 20 ವರ್ಷಗಳಿಂದಲೂ ದಿನಗೂಲಿ ನೌಕರರು ತಮ್ಮ ಜೀವಪಣಕ್ಕಿಟ್ಟು ಬಂಡೀಪುರ, ನಾಗರಹೊಳೆ, ಹುಲಿ ರಕ್ಷಿತಾರಣ್ಯದ ರಕ್ಷಣಾ ಶಿಬಿರಗಳಲ್ಲಿ ದಿನದ 24 ಗಂಟೆಗಳ ಕಾಲ ದಿನಗೂಲಿ ನೌಕರರು ಕಾರ್ಯನಿರ್ವಹಿಸುತ್ತಾರೆ. ಇವರಿಗೆ ಕಾರ್ಮಿಕ ಕಾಯ್ದೆ ಪ್ರಕಾರ 8 ಗಂಟೆ ಕೆಲಸ ಮಾತ್ರ ನೀಡಬೇಕು. ಪಾಳಿ ವ್ಯವಸ್ಥೆಗೆ ಬದಲಿ ವ್ಯವಸ್ಥೆ ಮಾಡಬೇಕು. ಆದರೆ ಇಲ್ಲಿನ ಅಧಿಕಾರಿಗಳು ಇಲಾಖೆಯಲ್ಲಿ ಕೆಲಸ ಮಾಡಿದ ದಿನಗೂಲಿ ನೌಕರರ ಸೇವಾ ದಾಖಲಾತಿಗಳನ್ನು ಮರೆಮಾಚಿ ಇವರ ದಾಖಲೆಗಳು ಕಚೇರಿಗಳಲ್ಲಿ ಲಭ್ಯವಿಲ್ಲ, ಅವರ ಸೇವಾ ದಾಖಲಾತಿಗಳ ಬಗ್ಗೆ ಯಾವುದೇ ಸೂಕ್ತ ದಾಖಲೆಗಳಿಲ್ಲ ಎಂದು ಹೇಳಿ ಅರಣ್ಯ ಇಲಾಖೆಯ ಅಧಿಕಾರಿಗಳು ದಿನಗೂಲಿ ನೌಕರರ ಮೇಲೆ ನಿರಂತರ ಶೋಷಣೆ ಮತ್ತು ನಿಂದನೆ ಮಾಡುತ್ತಿದ್ದಾರೆ ಎಂದರು.
ಅಲ್ಲದೆ ಸರ್ಕಾರ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗಾಗಿ ಹಣ ಬಿಡುಗಡೆ ಮಾಡಿದರೆ ಅದನ್ನು ದುರ್ಬಳಕೆ ಮಾಡಿಕೊಂಡು ಇಲಾಖೆಯಲ್ಲಿ ನ್ಯಾಯಯುತವಾಗಿ ದುಡಿಯುತ್ತಿರುವ ಇವರಿಗೆ ಸಂಬಳ ನೀಡದೆ ವಂಚನೆ ಮಾಡುತ್ತಿದ್ದಾರೆ. ಆದ್ದರಿಂದ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಸಿಬ್ಬಂಧಿಗಳನ್ನು ಶೋಷಣೆ ಮಾಡುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವವರೆಗೂ ನಮ್ಮ ಹೇರಾಟ ಮುಂದುರಿಸುವ ಎಚ್ಚರಿಕೆ ನೀಡಿದರು.
ಸಸ್ಯಕ್ಷೇತ್ರದಲ್ಲಿ ದಿನಗೂಲಿ ನೌಕರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಜಾನಕಮ್ಮ ಮಾತನಾಡಿ, ‘ದಿನಗೂಲಿ ನೌಕರರಿಗೆ 8 ಗಂಟೆ ಕೆಲಸ ನಿಗದಿಪಡಿಸಬೇಕು. ವಾರದ ರಜೆ ಕಡ್ಡಾಯಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಪ್ರತಿ ತಿಂಗಳು 5ರ ಒಳಗೆ ವೇತನ ಪಾವತಿಸಬೇಕು. ಸಮವಸ್ತ್ರಅರಣ್ಯದ ಉಳಿವಿಗೆ ಅವಿರತ ಶ್ರಮಿಸಿದರೂ ನಮ್ಮ ಸ್ಥಿತಿ ಅರಣ್ಯರೋದನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕೆ.ಆರ್.ನಗರ ತಾಲ್ಲೂಕು ಅರಣ್ಯ ದಿನಗೂಲಿ ನೌಕಕರ ಸಂಘದ ಅಧ್ಯಕ್ಷ ರಾಜು, ತಾಲ್ಲೂಕು ಸಂಚಾಲಕ ರಮೇಶ್, ವಾಚರ್ ಮಾಲ, ಕಾರ್ಯದರ್ಶಿ ಗಣೇಶ್ ಸೇರಿದಂತೆ 25 ಕ್ಕೂ ಹೆಚ್ಚು ದಿನಗೂಲಿ ನೌಕಕರ ಹಾಜರಿದ್ದರು.