ಅಮೇಥಿ: ಕೊಕ್ಕರೆಯೊಂದನ್ನು ರಕ್ಷಿಸಿ ಒಂದು ವರ್ಷ ಆರೈಕೆ ಮಾಡಿದ ಉತ್ತರ ಪ್ರದೇಶದ ವ್ಯಕ್ತಿಗೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೇಥಿ ಜಿಲ್ಲೆಯ ಮಂಡ್ಖಾ ಗ್ರಾಮದಲ್ಲಿ ಆರಿಫ್ ಖಾನ್ ಗುರ್ಜರ್ ಅವರು ಈ ದೊಡ್ಡ ಕೊಕ್ಕರೆಯನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು. ಮಾರ್ಚ್ 21 ರಂದು ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ತೆಗೆದುಕೊಂಡು ಹೋಗಿದ್ದರು.
ಈ ಪಕ್ಷಿಯನ್ನು ರಾಯ್ ಬರೇಲಿಯ ಸಮಸ್ಪುರ್ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗಿದ್ದು, ಅದರ ನೈಸರ್ಗಿಕ ಪರಿಸರದಲ್ಲಿ ವಾಸಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರ ಆರಿಫ್ ಖಾನ್ ಗುರ್ಜಾರ್ ಅವರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಅ.4ರಂದು ಗೌರಿಗಂಜ್ ವಿಭಾಗೀಯ ಅರಣ್ಯಾಧಿಕಾರಿ ಕಚೇರಿಗೆ ಹಾಜರಾಗಿ ಹೇಳಿಕೆ ದಾಖಲಿಸಿಕೊಳ್ಳುವಂತೆ ಸೂಚಿಸಿತ್ತು.
ಸಹಾಯಕ ವಿಭಾಗೀಯ ಅರಣ್ಯಾಧಿಕಾರಿ (ಗೌರಿಗಂಜ್) ರಣವೀರ್ ಸಿಂಗ್ ಅವರು ನೀಡಿದ ನೋಟಿಸ್ ಪ್ರಕಾರ, ಅವರನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.