ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಸಮರದಲ್ಲಿ ಸೆಣಸಾಡುತ್ತಿರುವ ರಷ್ಯಾ ಸೇನೆಯ ಯೋಧರ ಸಹಾಯಕರಾಗಿ ಬಲವಂತದಿಂದ ಸೇರ್ಪಡೆಯಾಗಿದ್ದ ಮತ್ತೀರ್ವರು ಭಾರತೀಯರು ಸಾವನ್ನಪ್ಪಿದ್ದಾರೆ.
ಇದರೊಂದಿಗೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಈ ರೀತಿಯಲ್ಲಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ ನಾಲ್ಕಕ್ಕೇರಿದೆ. ರಷ್ಯಾದಲ್ಲಿನ ಈ ವಿದ್ಯಮಾನಗಳು ತೀರಾ ಆತಂಕಕಾರಿಯಾಗಿದ್ದು ವಿಶ್ವವ್ಯಾಪಿ ಖಂಡನೆ ವ್ಯಕ್ತವಾಗಿದೆ. ಇದೇ ವೇಳೆ ಭಾರತವು ರಷ್ಯಾ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನೆಲ್ಲ ಪ್ರಜೆಗಳನ್ನು ತತ್‌ಕ್ಷಣವೇ ಮುಕ್ತಗೊಳಿಸಿ ದೇಶಕ್ಕೆ ವಾಪಸ್ ಕಳುಹಿಸುವಂತೆ ಅಲ್ಲಿನ ಸರಕಾರಕ್ಕೆ ತಾಕೀತು ಮಾಡಿದೆ.
ಉಕ್ರೇನ್ ವಿರುದ್ಧ ನೇರ ಆಕ್ರಮಣ ಆರಂಭಿಸಿದ ಬಳಿಕ ರಷ್ಯಾ ಸೇನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸಾವು ನೋವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ರಷ್ಯಾ ಸೇನೆ ಬಲವಂತವಾಗಿ ಜನರನ್ನು ಸೇನೆಗೆ ಸೇರ್ಪಡೆಗೊಳಿಸುತ್ತಿದೆ. ರಷ್ಯಾ ಸೇನೆಯ ಈ ಕಾನೂನುಬಾಹಿರ ನಡೆಯನ್ನು ತಮ್ಮ ದಾಳವನ್ನಾಗಿಸಿಕೊಂಡ ಮಾನವ ಕಳ್ಳಸಾಗಣೆ ದಂಧೆಕೋರರು ತಮ್ಮ ಏಜೆಂಟರ ಮೂಲಕ ಭಾರತ, ಶ್ರೀಲಂಕಾ, ನೇಪಾಲ ಸಹಿತ ವಿವಿಧ ದೇಶಗಳ ಯುವಕರನ್ನು ರಷ್ಯಾದಲ್ಲಿ ಉದ್ಯೋಗ ಕೊಡಿಸುವ ನೆಪವೊಡ್ಡಿ ಅಲ್ಲಿಗೆ ಕರೆದೊಯ್ದು ಅಲ್ಲಿನ ಸೇನೆಗೆ ಬಲವಂತವಾಗಿ ಸೇರ್ಪಡೆಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಆಯಾಯ ದೇಶಗಳಲ್ಲಿನ ತನಿಖಾ ಸಂಸ್ಥೆಗಳು ಮಾನವ ಕಳ್ಳಸಾಗಣೆಯಲ್ಲಿ ಶಾಮೀಲಾಗಿರುವವರನ್ನು ಪತ್ತೆ ಹಚ್ಚಿ ಬಂಧಿಸುವುದರೊಂದಿಗೆ ದಂಧೆಕೋರರಿಗೆ ಒಂದಿಷ್ಟು ಕಡಿವಾಣ ಬಿದ್ದಿತ್ತು.
ಈ ವರ್ಷದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಸೂರತ್ ಮತ್ತು ಹೈದರಾಬಾದ್ ಮೂಲದ ಇಬ್ಬರು ಯುವಕರು ಇದೇ ಮಾದರಿಯಲ್ಲಿ ಉಕ್ರೇನ್‌ನೊಂದಿಗಿನ ಸಂಘರ್ಷದ ವೇಳೆ ಸಾವಿಗೀಡಾಗಿದ್ದರು. ಇವೆರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತ ಸರಕಾರ, ರಷ್ಯಾ ಸರಕಾರದೊಂದಿಗೆ ಸಮಾಲೋಚನೆ ನಡೆಸಿ ರಷ್ಯಾ ಸೇನೆಯಲ್ಲಿ ಬಲವಂತವಾಗಿ ಸೇರ್ಪಡೆಗೊಳಿಸಲಾಗಿರುವ ಎಲ್ಲ ಭಾರತೀಯ ಪ್ರಜೆಗಳನ್ನು ತತ್‌ಕ್ಷಣ ಸೇನಾ ಕರ್ತವ್ಯದಿಂದ ಮುಕ್ತಗೊಳಿಸಿ ದೇಶಕ್ಕೆ ವಾಪಸು ಕಳುಹಿಸುವಂತೆ ಒತ್ತಡ ಹೇರಿತ್ತು. ಅದರಂತೆ ರಷ್ಯಾ ಸೇನೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ 10 ಭಾರತೀಯರನ್ನು ಭಾರತಕ್ಕೆ ವಾಪಸು ಕಳುಹಿಸಿಕೊಟ್ಟು ರಷ್ಯಾ ಸರಕಾರ ಕೈತೊಳೆದುಕೊಂಡಿತ್ತು.
ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣ ನಡೆಸಿದಾಗಿನಿಂದಲೂ ಭಾರತವು ರಷ್ಯಾ ವಿರೋಧಿ ನಿಲುವು ತಳೆಯದೆ, ತಟಸ್ಥ ಧೋರಣೆಯನ್ನು ಅನುಸರಿಸುತ್ತಲೇ ಬಂದಿದೆ. ರಷ್ಯಾ ಮತ್ತು ಭಾರತ ನಡುವೆ ದಶಕಗಳಿಂದಲೂ ಉತ್ತಮ ಬಾಂಧವ್ಯವಿದ್ದು ಭಾರತದ ಪ್ರಮುಖ ಮಿತ್ರರಾಷ್ಟ್ರವಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ಪಾಶ್ಚಾತ್ಯ ದೇಶಗಳು ರಷ್ಯಾದ ವಿರುದ್ಧ ಸರಣಿ ನಿರ್ಬಂಧಗಳನ್ನು ಹೇರಿದರೂ ಭಾರತ ಮಾತ್ರ ರಷ್ಯಾದೊಂದಿಗಿನ ವಾಣಿಜ್ಯ ವ್ಯವಹಾರಗಳನ್ನು ಮುಂದುವರಿಸಿತ್ತು. ಇವೆಲ್ಲದರ ಹೊರತಾಗಿಯೂ ರಷ್ಯಾವು ಭಾರತದ ಪ್ರಜೆಗಳನ್ನು ಈ ರೀತಿಯಾಗಿ ಬಳಸಿಕೊಳ್ಳುತ್ತಿರುವುದು ಖಂಡನಾರ್ಹ. ಸದ್ಯ ರಷ್ಯಾ ಸೇನೆಯಲ್ಲಿ ಸುಮಾರು 200 ಮಂದಿ ಭಾರತೀಯ ಪ್ರಜೆಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದ್ದು ಇವರೆಲ್ಲರನ್ನೂ ಸುರಕ್ಷಿತವಾಗಿ ದೇಶಕ್ಕೆ ವಾಪಸು ಕರೆತರಲು ಭಾರತ ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಭಾರತದ ಮನವಿಗೆ ರಷ್ಯಾ ಸ್ಪಂದಿಸದೇ ಹೋದಲ್ಲಿ ಇದು ದ್ವಿಪಕ್ಷೀಯ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ವಿದೇಶಿ ಪ್ರಜೆಗಳನ್ನು ತನ್ನ ಸೇನೆಗೆ ಸೇರ್ಪಡೆಗೊಳಿಸಿಕೊಂಡು ಉಕ್ರೇನ್ ಗಡಿಯಲ್ಲಿ ಯುದ್ಧದಲ್ಲಿ ಭಾಗಿಯಾಗುವಂತೆ ಒತ್ತಡ ಹೇರುತ್ತಿರುವ ರಷ್ಯಾದ ರಣನೀತಿ ತೀರಾ ಅಮಾನುಷ ಮತ್ತು ಪ್ರಶ್ನಾರ್ಹ.
ಅಂತಾರಾಷ್ಟ್ರೀಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಇದಾಗಿದೆ. ರಷ್ಯಾ ತನ್ನ ಈ ಕುಕೃತ್ಯವನ್ನು ನಿಲ್ಲಿದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಇದು ರಷ್ಯಾಕ್ಕೆ ತಿರುಗುಬಾಣವಾಗಿ ಪರಿಣಮಿಸಲಿರುವುದಂತೂ ನಿಶ್ಚಿತ.