ಸಿಂಧನೂರು: ಆಯಾ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿನ ಹಿಂದಿನ ರಾಜಕೀಯ ಹಿಡಿತಗಳು ಈ ಬಾರಿ ಬದಲಾಗುವ ಮುನ್ಸೂಚನೆಯಿದ್ದು, ಹಲವು ಕ್ಷೇತ್ರದಲ್ಲಿ ತ್ರಿಕೋನ ಹಣಾಹಣಿಗೆ ಪೂರಕ ವಾತಾವರಣ ಸೃಷ್ಟಿಯಾಗುವ ಮುನ್ಸೂಚನೆ ಕಂಡು ಬಂದಿದೆ. ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್ ರಚನೆಯ ಬಳಿಕ ರಾಜಕೀಯವಾಗಿಯೂ ಹೊಸ ಲೆಕ್ಕಾಚಾರ ಗರಿಗೆದರಿವೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇರುತ್ತಿದ್ದ ಕಡೆಗಳಲ್ಲಿ ತ್ರಿಕೋನ ಸ್ಪರ್ಧೆಯ ಮುನ್ಸೂಚನೆ ಕಂಡು ಬಂದಿದೆ. ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಒಳಪಟ್ಟಿದ್ದರೂ ತಾಲೂಕಿನ ವ್ಯಾಪ್ತಿಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪಕ್ಷ ಪ್ರಾಬಲ್ಯದಲ್ಲಿ ಏರಪೇರು ಕಾಣಿಸುತ್ತಿತ್ತು. ಇದೀಗ ತಿಡಿಗೋಳ ಜಿಪಂ ಹೊರತುಪಡಿಸಿ, ಉಳಿದ 6 ಜಿಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಳೀಯ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಹಳ್ಳಿಗಳೇ ಉಳಿದುಕೊಳ್ಳಲಿವೆ.
ಸಹಜವಾಗಿಯೇ ಇದು ಮಸ್ಕಿ ಛಾಯೆ ಸ್ಥಳೀಯ ಕ್ಷೇತ್ರಗಳ ಮೇಲೆ ಇಲ್ಲವಾಗಲಿದೆ. ಜಾಲಿಹಾಳ, ಜವಳಗೇರಾ ಕ್ಲಿಯರ್: ಜಿಪಂ ಕ್ಷೇತ್ರಗಳಾಗಿದ್ದ ಜವಳಗೇರಾ ಮತ್ತು ಜಾಲಿಹಾಳದಲ್ಲಿ ಹಲವು ಬದಲಾವಣೆ ಕಾಣಿಸಿವೆ. ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಗುಂಜಳ್ಳಿ-ವಿರೂಪಾಪುರ ಗ್ರಾಪಂಗಳು ಈ ಮೊದಲು ಜಾಲಿಹಾಳ ಕ್ಷೇತ್ರದಲ್ಲಿದ್ದವು. ಆಗ ಮಸ್ಕಿ ಕ್ಷೇತ್ರದ ನಾಯಕರ ಪ್ರಭಾವ, ಸ್ಥಳೀಯ ಸ್ಪರ್ಧಿಗಳ ಪ್ರಭಾವ ಸೇರ್ಪಡೆಗೊಂಡು ಚುನಾವಣೆ ಫಲಿತಾಂಶ ನಿರ್ಧರಿತವಾಗುತ್ತಿತ್ತು. ಇದೀಗ ಜಾಲಿಹಾಳದಿಂದ ಮಸ್ಕಿಗೆ ಸೇರಿದ 2 ಗ್ರಾಪಂಗಳನ್ನು ಬಿಟ್ಟು ಹೊಸದಾಗಿ ದೇವರಗುಡಿ ಸೇರಿಸಿಕೊಳ್ಳಲಾಗಿದೆ. ಜವಳಗೇರಾ ಗ್ರಾಪಂನ ವ್ಯಾಪ್ತಿಗೆ ಎಲೆಕೂಡ್ಲಿಗಿ, ಪಗಡದಿನ್ನಿ, ಬೂತಲದಿನ್ನಿ ಪಂಚಾಯಿತಿಗಳನ್ನು ಸೇರಿಸಲಾಗಿದೆ.
ರಾಗಲಪರ್ವಿಯಲ್ಲಿದ್ದ ವಳಬಳ್ಳಾರಿ ಗ್ರಾಪಂ ಅನ್ನು ಬಾದರ್ಲಿ ಜಿಪಂ ಕ್ಷೇತ್ರಕ್ಕೆ ಸೇರಿಸಿ, ಅಲ್ಲಿಯೂ ಬದಲಾವಣೆ ತರಲಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷಗಳಿಗೆ ಪ್ಲಸ್-ಮೈನಸ್ ಎಂದೇ ವಿಶ್ಲೇಷಿಸಲಾಗುತ್ತಿದೆ.
ಜೆಡಿಎಸ್‌ನವರ ಹಾದಿ ಸುಗಮ: ಗುಡುದೂರು ಜಿಪಂನಲ್ಲಿದ್ದ ಎಲೆಕೂಡ್ಲಿಗಿ, ಪಗಡದಿನ್ನಿ, ಜಾಲಿಹಾಳ ಜಿಪಂ ವ್ಯಾಪ್ತಿಯಲ್ಲಿದ್ದ ಗುಂಜಳ್ಳಿ, ವಿರೂಪಾಪುರ ಗ್ರಾಪಂಗಳ ವ್ಯಾಪ್ತಿಯಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸುವುದಕ್ಕೆ ಬಹುತೇಕ ಹಿನ್ನಡೆಯಾಗುತ್ತಿತ್ತು. ಅವು ಮಸ್ಕಿ ಕ್ಷೇತ್ರದ ರಾಜಕಾರಣದೊಂದಿಗೆ ನಂಟು ಬೆಸೆದುಕೊಂಡಿದ್ದವು. ಅಲ್ಲಿ ಬಹುತೇಕರು ಜೆಡಿಎಸ್‌ನಿಂದ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದರು.
ಈಗ ಆ ಎಲ್ಲ ಪಂಚಾಯಿತಿಗಳನ್ನು ಅದಲು-ಬದಲು ಮಾಡಿರುವುದರಿಂದ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸುಗಮವಾದಂತಿದೆ. ವಳಬಳ್ಳಾರಿ ತಾಪಂ ಕ್ಷೇತ್ರ ರದ್ದಾಗಿ ಅದು ಬಾದರ್ಲಿ ತಾಪಂ ವ್ಯಾಪ್ತಿಗೆ ಬರಲಿದೆ. ಕೆಲ ತಾಪಂ ಕ್ಷೇತ್ರ ಅಸ್ತಿತ್ವ ಕಳೆದುಕೊಂಡು ಪಕ್ಕದ ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ. ಇದರ ಪರಿಣಾಮವಾಗಿ 20 ತಾಪಂ ಕ್ಷೇತ್ರಗಳು ಉಳಿದಿರುವುದರಿಂದ ತಾಪಂ ಗದ್ದುಗೆ ಹಿಡಿಯುವ ವೇಳೆ ರಾಜಕೀಯ ಲೆಕ್ಕಾಚಾರ ಬದಲಿಸಬೇಕಾಗಲಿದೆ.
-ಯಮನಪ್ಪ ಪವಾರ