ಮೈಸೂರು: ರಾಜ್ಯದ ಎಲ್ಲಾ ಜಲಾಶಯಗಳ ಅಚ್ಚುಕಟ್ಟು ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಬೇಕು ಹಾಗೂ ಕೆರೆಗಳ ಡಿನೋಟಿಪೈ ನಿರ್ಧಾರವನ್ನು ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ತೀವ್ರ ಬರ ಆವರಿಸಿರುವ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದ್ದು, ಇದರ ಪರಿಣಾಮ ರಾಜ್ಯದ ಎಲ್ಲಾ ಕೆರೆಗಳು ನೀರಿಲ್ಲದೆ ಬರಿದಾಗಿವೆ.
ಜನ ಹಾಗೂ ಜಾನುವಾರುಗಳು ನೀರಿಲ್ಲದೆ ಪರದಾಡುವಂತಾಗಿದ್ದು, ಈ ಹಿನ್ನೆಲೆ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಜತೆಗೆ ಕುಡಿಯಲು ನೀರು ಒದಗಿಸುವ ಸಲುವಾಗಿ ರಾಜ್ಯದ ಎಲ್ಲಾ ಜಲಾಶಯಗಳ ಅಚ್ಚುಕಟ್ಟು ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಮುಂದಾಗಬೇಕು. ಇದರ ಜತೆಗೆ ರಾಜ್ಯದಲ್ಲಿರುವ 1500 ಕೆರೆಗಳನ್ನು ಡಿನೋಟಿಫೈ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ನೀರಿನ ಅಭಾವದಿಂದ ಜಿಲ್ಲೆಯ ಶೇ.50 ತೆಂಗು, ಅಡಿಕೆ, ಮಾವಿನಂತಹ ದೀರ್ಘಕಾಲದ ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ಆದ್ದರಿಂದ ತೋಟಗಾರಿಕಾ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ತಜ್ಞರ ಸಮಿತಿ ರಚಿಸಬೇಕು. ಜತೆಗೆ ತೋಟಗಾರಿಕಾ ಬೆಳೆಯನ್ನು ಕಡ್ಡಾಯವಾಗಿ ಪ್ರಧಾನ ಮಂತ್ರಿ ಪಸಲ್‌ಬಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಎಲ್ಲಾ ವಿಷಯಕ್ಕೂ ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸುತ್ತಾ ನಿದ್ದೆ ಮಾಡುತ್ತಿದೆ. ಬರಗಾಲದ ಪರಿಣಾಮ ರಾಜ್ಯದಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇದರ ನಡುವೆಯೂ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತಮೋರ್ಚಾ ಅಧ್ಯಕ್ಷ ಸಿ. ಎಚ್.ವಿಜಯಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಮಂಜುನಾಥ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರಸನ್ನ ಎನ್.ಗೌಡ, ಬಿಜೆಪಿ ಹಿಂದುಳಿದ ಮೋರ್ಚಾದ ಮಲ್ಲಪ್ಪ ಗೌಡ ಇದ್ದರು.