Advertisement

ಪಠ್ಯಪುಸ್ತಕದ ದೋಷ ಸರಿಪಡಿಸಲು ಒತ್ತಾಯ

11:54 AM Jun 05, 2022 | Team Udayavani |

ಜೇವರ್ಗಿ: ವಿಶ್ವಗುರು ಅಣ್ಣ ಬಸವಣ್ಣನ ಕುರಿತು ಪಠ್ಯಪುಸ್ತಕದಲ್ಲಿನ ದೋಷ ಸರಿಪಡಿಸಲು ಒತ್ತಾಯಿಸಿ ಬಸವಕೇಂದ್ರ ತಾಲೂಕು ಘಟಕದ ವತಿಯಿಂದ ಶನಿವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

2022ರಲ್ಲಿ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವಣ್ಣನ ಕುರಿತು ಅಳವಡಿಸಿದ ಒಂದು ಪುಟದ ಕಿರುಬರಹದಲ್ಲಿ ಬಸವಣ್ಣನವರು ಸಾರಿದ ಹಾಗೂ ಅಳವಡಿಸಿಕೊಂಡ ವಿಷಯಗಳನ್ನು ಮರೆಮಾಚಿ ಅವರ ಚರಿತ್ರೆ ಮತ್ತು ಚಾರಿತ್ರ್ಯಗಳಿಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಯಾವತ್ತು ಲಿಂಗಾಯತ ಧರ್ಮ ಪರಿಪಾಲಿಸಿದ ಬಸವಣ್ಣನವರು ಶೈವ ಗುರುಗಳಿಂದ ಲಿಂಗ ದೀಕ್ಷೆ ಪಡೆದಿಲ್ಲ, ವೀರಶೈವ ಧರ್ಮ ಅಭಿವೃದ್ಧಿ ಪಡಿಸಿಲ್ಲ, ಕಾಯಕ ತತ್ವ ಪ್ರತಿಪಾದಿಸಿದ ಅವರು ಕಾಯಕವೇ ಕೈಲಾಸ ಎಂದಿದ್ದರು ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.

ವೀರಶೈವ ಎನ್ನುವುದು 14ನೇ ಶತಮಾನದಿಂದ ಈಚೆಗೆ ಬಳಕೆಗೆ ಬಂದ ಪದ. ಸತ್ಯವನ್ನರಿಯದ ಪಠ್ಯ ರಚನೆಕಾರರು ಬಸವಣ್ಣನವರ ಆಸೆಗೆ ಅಪಚಾರ ಎಸಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಮನದಲ್ಲಿ ತಪ್ಪು ಅಭಿಪ್ರಾಯಗಳ ಬೀಜ ಬಿತ್ತಿದಂತಾಗುತ್ತದೆ. ಕೂಡಲೇ ಅಸಂಬದ್ಧ ಪದಗಳನ್ನು ತೆಗೆದು ಹಾಕಿ ಬಸವಣ್ಣನವರ ಮೂಲ ಉದ್ದೇಶಗಳನ್ನು ಅಳವಡಿಸಬೇಕೆಂದು ಒತ್ತಾಯಿಸಲಾಯಿತು.

ಈ ಕುರಿತು ಕೂಲಂಕುಷವಾಗಿ ಚರ್ಚಿಸಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವೇಶ್ವರರ ಬಗ್ಗೆ ಆಗಿರುವ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಲು ಮುಂದಾಗಬೇಕು. ಇಲ್ಲದಿದ್ದರೇ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಸವಾಭಿಮಾನಿಗಳು ಎಚ್ಚರಿಸಿದರು.

ಇದಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್‌ ಕಚೇರಿ ವರೆಗೆ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಾತ್ತಾ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಗ್ರೇಡ್‌-2 ತಹಶೀಲ್ದಾರ್‌ ಡಾ| ರಮೇಶ ಹಾಲು ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advertisement

ಸೊನ್ನ ವಿರಕ್ತ ಮಠದ ಡಾ| ಶಿವಾನಂದ ಸ್ವಾಮೀಜಿ, ನೆಲೋಗಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ, ಬಸವಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ, ಶಿವಣಗೌಡ ಹಂಗರಗಿ, ಷಣ್ಮುಖಪ್ಪಗೌಡ ಹಿರೇಗೌಡ, ಸಂಗನಗೌಡ ಪಾಟೀಲ, ಮಹಾಂತಗೌಡ ಚನ್ನೂರ, ಚಂದ್ರಶೇಖರ ಸೀರಿ, ಬಾಪುಗೌಡ ಬಿರಾಳ, ಮಹಾಂತ ಸಾಹು ಹರವಾಳ, ನೀಲಕಂಠ ಅವುಂಟಿ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಸಿದ್ರಾಮ ಕಟ್ಟಿ, ರವಿ ಕುರಳಗೇರಾ, ಶ್ರೀಹರಿ ಕರಕಿಹಳ್ಳಿ, ಮಲ್ಲನಗೌಡ ಕನ್ಯಾಕೋಳೂರ, ಸದಾನಂದ ಪಾಟೀಲ, ರವಿ ಗುತ್ತೇದಾರ, ಈರಣ್ಣಗೌಡ, ಮಲ್ಲಿಕಾರ್ಜುನ ಕೆಲ್ಲೂರ, ಮಲ್ಲಿಕಾರ್ಜುನ ಗೂಳೇದ್‌, ದವಲಪ್ಪ ಮದನ್‌, ಸಿದ್ಧು ಮದರಿ, ವಿಶ್ವರಾಧ್ಯ ಗಂವ್ಹಾರ, ಬಸವರಾಜ ಲಾಡಿ, ಬಸವರಾಜ ಮಡಿವಾಳಕರ್‌, ಈರಣ್ಣ ಭೂತಪುರ, ಬಸಣ್ಣ ಸರಕಾರ ಹಾಗೂ ಹಲವಾರು ಬಸವಾಭಿಮಾನಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next