ಬೆಂಗಳೂರು: ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಈ ವರ್ಷವೂ ಮುಂದುವರಿಸಬೇಕು. ಹೊಸ ನೇಮಕಾತಿ ಮಾಡಿ, ಹಳಬರನ್ನು ಕೈ ಬಿಟ್ಟರೆ ಉನ್ನತ ಶಿಕ್ಷಣ ಸಚಿವರ ಮನೆ ಎದುರು ಧರಣಿ ಮಾಡುವುದಾಗಿ ಅತಿಥಿ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ.
ಶಾಸಕರ ಭವನದಲ್ಲಿ ಶನಿವಾರ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದ ಸರ್ಕಾರಿ ಪ್ರಥಮದರ್ಜೆ ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಬಿ.ರಾಜಶೇಖರ ಮೂರ್ತಿ, ಹೊಸ ಉಪನ್ಯಾಸಕರ ನೇಮಕಕ್ಕೂ ಪೂರ್ವದಲ್ಲಿ ಸೇವಾ ಜೇಷ್ಠತೆಯ ಆಧಾರದಲ್ಲಿ ಅತಿಥಿ ಉಪನ್ಯಾಸಕರನ್ನೇ ಕಾಯಂ ಮಾಡಿಕೊಳ್ಳುವ ಆದೇಶವನ್ನು ಜೂ.30 ರೊಳಗೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ಪ್ರಸಕ್ತ ವರ್ಷದಲ್ಲಿ ಅಗತ್ಯವಿರುವಷ್ಟು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಸಚಿವ ಬಸವರಾಜ ರಾಯರೆಡ್ಡಿ ಬೇಜವಾಬ್ದಾರಿಯ ಹೇಳಿಕೆ ಸದನಕ್ಕೆ ನೀಡಿದ್ದಾರೆ. ಹಾಲಿ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸುವ ಬಗ್ಗೆ ಆದೇಶ ಹೊರಡಿಸದಿದ್ದರೆ ಜು.4 ರಂದು ಸಚಿವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವ ಬಗ್ಗೆ ಅನೇಕ ಮನವಿ ನೀಡಿದ್ದೇವೆ. ಯಾರು ಕೂಡ ಇದಕ್ಕೆ ಸ್ಪಂದಿಸುತ್ತಿಲ್ಲ.
ಹೀಗಾಗಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಿ ಹೊಸ ನೇಮಕ ಪ್ರಕ್ರಿಯೆ ವಿರೋಧಿಸಲಿದ್ದೇವೆ ಎಂದರು. ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ವಿಲೀನಗೊಳಿಸಲು ಇರುವ ಕಾನೂನಿನ ತೊಡಕಿನ ನಿವಾರಣೆಗೆ ಸಮಿತಿ ರಚಿಸಿ ನಿರ್ಧಾರ ಕೈಗೊಳ್ಳಬೇಕು. ಪಿಎಚ್.ಡಿ, ಸ್ಲೆಟ್ ಪದವಿಗಳಿಗೆ ಸಮಾನವಾಗಿ ಎಂ.ಫಿಲ್ ಪದವಿಯನ್ನು ಪರಿಗಣಿಸಿ ಸಮಾನ ವೇತನ ನೀಡಬೇಕು. ಅತಿಥಿ ಉಪನ್ಯಾಸಕರಿಗೆ ಮಾಸಿಕ 25 ಸಾವಿರ ರೂ. ವೇತನ 12 ತಿಂಗಳು ನೀಡಬೇಕು.
ಅತಿಥಿ ಉಪನ್ಯಾಸಕಿಯರಿಗೆ ವೇತನ ಸಹಿತ ಕನಿಷ್ಠ ಮೂರು ತಿಂಗಳು ಹೆರಿಗೆ ರಜೆ ನೀಡಬೇಕು ಎಂಬ ಬೇಡಿಕೆಯನ್ನು ಮನವಿ ರೂಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಬಸವರಾಜ್ ರಾಯರೆಡ್ಡಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಂಘದ ಅಧ್ಯಕ್ಷ ಶ್ರೀನಿವಾಸಾಚಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.