ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕೆಂದು ಒತ್ತಾಯಿಸಿ ವಿವಿ ಗುತ್ತಿಗೆ ನೌಕರರ ಕಲ್ಯಾಣ ಸಂಘದ ವತಿಯಿಂದ ಶುಕ್ರವಾರ ಕಾರ್ಯಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ವಿಶ್ವವಿದ್ಯಾಲಯದಲ್ಲಿ ಎಲ್ಲ ತರಹದ ಕೆಲಸಗಳನ್ನು ಗುತ್ತಿಗೆ ನೌಕರರೇ ನಿಭಾಯಿಸುತ್ತಿದ್ದಾರೆ. ಕಳೆದ 10-15 ವರ್ಷಗಳಿಂದ ಆಡಳಿತ, ಗ್ರಂಥಾಲಯ, ಹಣಕಾಸು, ಪರೀಕ್ಷೆ, ಗಣಕಕೇಂದ್ರ, ಕುಡಿಯುವ ನೀರು ಹಾಗೂ ಸ್ವಚ್ಛತೆ ಎಲ್ಲ ವಿಭಾಗಗಳಲ್ಲೂ ಕಾಯಂ ನೌಕರರ ಹುದ್ದೆಗಳು ಖಾಲಿ ಇದ್ದರೂ ಗುತ್ತಿಗೆ ನೌಕರರು ನೈಪುಣ್ಯತೆ ಹಾಗೂ ಶಿಸ್ತಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ಜೀವನಾಂಶಕ ವಸ್ತುಗಳ ಬೆಲೆಗಳ ಹೆಚ್ಚಳವಾಗಿದ್ದು, ಬೆಲೆ ಏರಿಕೆಯಿಂದ ಗುತ್ತಿಗೆ ನೌಕರರ ಜೀವನ ನಿರ್ವಹಣೆಗೆ ಕಷ್ಟಕರವಾಗಿದೆ. ಬೆಲೆ ಏರಿಕೆಗೆ ತಕ್ಕಂತೆ ಹಾಗೂ ಗ್ರಾಹಕ ಬೆಲೆ ಸೂಚ್ಯಂತಕ್ಕೆ ತಕ್ಕಂತೆ 2016ರಿಂದ ಗುತ್ತಿಗೆ ನೌಕರರಿಗೆ ಸಂಬಳ ಹೆಚ್ಚಳವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸುಪ್ರೀಂಕೋರ್ಟ್ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಬಗ್ಗೆ ಹಾಗೂ ಕಾಯಂ ಮಾಡಲು ಇರುವಂತಹ ಅವಕಾಶ ಬಳಸಿಕೊಳ್ಳಲು ವಿಶ್ವವಿದ್ಯಾಲಯ ಹಿಂದೇಟು ಹಾಕುತ್ತಿರುವುದು ಯಾವ ನ್ಯಾಯ? ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುವ ಸಂವಿಧಾನ ಬದ್ಧ ಕಾರ್ಮಿಕ ಹಕ್ಕನ್ನು ವಿಶ್ವವಿದ್ಯಾಲಯ ಕಡೆಗಣಿಸಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ 18,000 ಸಾವಿರ ರೂ. ಕನಿಷ್ಟ ವೇತನ ಎಲ್ಲರಿಗೂ ಸಿಗಬೇಕೆಂದು ಒತ್ತಾಯಿಸಿದರು.
ಗುತ್ತಿಗೆ ಪದ್ಧತಿ ರದ್ದು ಮಾಡಿ ಹತ್ತಾರು ವರ್ಷಗಳಿಂದ ಗುತ್ತಿಗೆ ನೌಕರರ ಸೇವೆ ಪರಿಗಣಿಸಿ ಹಾಗೂ ವಿವಿಯಲ್ಲಿ 400ಕ್ಕೂ ಹೆಚ್ಚು ಖಾಲಿ ಇರುವ ಬೋಧಕೇತರ ಹುದ್ದೆಗಳಿಗೆ ಗುತ್ತಿಗೆ ನೌಕರರ ವಿದ್ಯಾರ್ಹತೆಗೆ ತಕ್ಕಂತೆ ಕಾಯಂ ಮಾಡಿಕೊಳ್ಳಬೇಕು. ಅಲ್ಲದೇ, 2016ರ ಸೆಪ್ಟೆಂಬರ್ ಹಾಗೂ ಅಕೋrಬರ್ ತಿಂಗಳ ಬಾಕಿ ವೇತನ ಪಾವತಿಸಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ವಿಜಯಕುಮಾರ ಕೊಗಲ್, ಅಧ್ಯಕ್ಷ ಶೀಲಪ್ರಕಾಶ ದೊಡ್ಡಮನಿ, ಕಾರ್ಯದರ್ಶಿ ರಾಕೇಶ ಎಂ., ಸಂಜುಕುಮಾರ ಕಾಂಬಳೆ, ಮಲ್ಲಿಕಾರ್ಜುನ, ವಿನೋದ ಕುಮಾರ, ಶಿವಲಿಂಗ ಸಾವಳಗಿ, ಬಸವರಾಜ ಆರ್., ಮಲ್ಲಮ್ಮ, ಸುಮಂಗಲ, ಅಂಜುಜಾ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.