Advertisement

ಜೂಜಾಟದ ವಿರುದ್ಧ ಕ್ರಮಕ್ಕೆ ಒತ್ತಾಯ

03:47 PM Nov 04, 2018 | Team Udayavani |

ಹಳಿಯಾಳ: ಹಬ್ಬದ ನೆಪ ಮಾಡಿ ಅಂದರ ಬಾಹರ ಜೂಜಾಟ ನಡೆಸಿ ನೂರಾರು ಕುಟುಂಬದ ಸದಸ್ಯರನ್ನು ಬೀದಿಪಾಲು ಮಾಡಿ, ಲಕ್ಷ-ಲಕ್ಷ ಹಣ ಗಳಿಸಲು ಪಟ್ಟಣದಲ್ಲಿ ನಡೆದಿದೆ ಭಾರಿ ತಯಾರಿ. ಸದ್ಯ ನಡೆಯುವ ದೀಪಾವಳಿಗೆ 7-8 ಗುಂಪುಗಳಿಂದ ಜೂಜಾಟ ನಡೆಸಲು ಪೈಪೋಟಿ ಕುರಿತು ಪಟ್ಟಣದಲ್ಲೆಡೆ ಸುದ್ದಿಯಾಗುತ್ತಿದೆ.

Advertisement

ಕ್ರೀಡೆ-ಸಾಹಿತ್ಯ-ರಾಜಕೀಯ ಕ್ಷೇತ್ರ ಸೇರಿದಂತೆ ಔದ್ಯಮಿಕ ನಗರವಾಗಿಯೂ ರಾಜ್ಯದಲ್ಲಿ ತನ್ನದೆ ಆದ ಹೆಸರು ಗಳಿಸಿರುವ ಹಳಿಯಾಳದಲ್ಲಿ ಕೆಲವು ದಕ್ಷ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನದಿಂದ ಕಾನೂನು ಬಾಹಿರ, ಅಕ್ರಮ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಲಾಗಿದೆ. ಕಳೆದ 3 ವರ್ಷಗಳಲ್ಲಿ ಜೂಜಾಟ, ಮಟಕಾ ನಡೆಸುವವರ ಮೇಲೆ ದಾಳಿ ನಡೆಸಿರುವ ಹಳಿಯಾಳ ಪೊಲೀಸರು ಸುಮಾರು 50ಕ್ಕೂ ಅಧಿಕ ಜನರ ಮೇಲೆ 15 ಪ್ರಕರಣಗಳನ್ನು ದಾಖಲಿಸಿದ್ದಾರೆ.

ರಾಜಕೀಯ ಪ್ರಭಾವ ತೋರಿಸುವ ಕೆಲವರು ಹಬ್ಬದ ನೆಪವೊಡ್ಡಿ ಜೂಜಾಟಕ್ಕೆ ತಯಾರಿ ನಡೆಸಿದ್ದು ಈಗ ಆರಂಭವಾಗುವ ಈ ಅಕ್ರಮಗಳು ನಿರಾತಂಕವಾಗಿ ವರ್ಷವೀಡಿ ನಡೆಯುತ್ತಿರುತ್ತವೆ. ಇಲ್ಲಿನ ಜೂಜಾಟಕ್ಕೆ ದಾಂಡೇಲಿ, ಜೋಯಿಡಾ, ಅಳ್ನಾವರ, ಕಲಘಟಗಿ, ಧಾರವಾಡ, ಹುಬ್ಬಳ್ಳಿ, ಖಾನಾಪುರ, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸುತ್ತಾರೆ. ಇದರಿಂದ ಆಟ ನಡೆಸುವ ಫಂಡ್‌ ಮಾಲಿಕರ ಜೇಬು ಅನಾಯಾಸವಾಗಿ ಭರ್ತಿಯಾಗುತ್ತದೆ. ಈ ಸಂಬಂಧ ಅಲಿಖೀತ ಹಾಗೂ ಅಕ್ರಮ ಪರವಾನಗಿ ಪಡೆಯಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಜನಜಂಗುಳಿಯಿಂದ ಕೂಡಿದ ಬಸ್‌ ನಿಲ್ದಾಣ ರಸ್ತೆ, ವನಶ್ರೀ ವೃತ್ತದ ಬಳಿ, ಮೀನು ಮಾರುಕಟ್ಟೆ ಸಮೀಪದ ಪ್ರದೇಶಗಳಲ್ಲಿ ಹಾಗೂ ಯಲ್ಲಾಪುರ ನಾಕಾ ಸಮೀಪದ ಪ್ರದೇಶಗಳಲ್ಲಿ ಆಟ ನಡೆಸಲು ಜಾಗ ಪಡೆಯಲು ಈ 7-8 ಗುಂಪುಗಳ ಮಧ್ಯೆ ತೀವ್ರ ಪೈಪೋಟಿ ನಡೆದಿದೆ.

ಅಕ್ರಮ ಚಟುವಟಿಕೆಗಳ ವಿರುದ್ಧ ಸಮರ ಸಾರಿದ್ದು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ದೀಪಾವಳಿಯಲ್ಲಿ ಅಕ್ರಮ ಜೂಜಾಟ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸಿಪಿಐ ಲೋಕಾಪುರ ಬಿಎಸ್‌, ಪಿಎಸ್‌ಐ ಆನಂದಮೂರ್ತಿ ತಿಳಿಸಿದ್ದಾರೆ.

ಎಸ್ಪಿ ಖಡಕ್‌ ಎಚ್ಚರಿಕೆ
ಹಬ್ಬ ಆಗಲಿ ಯಾವುದೇ ದಿನವಾಗಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ. ಹಬ್ಬದ ನೆಪ ಮಾಡಿ ಅಕ್ರಮ ಚಟುವಟಿಕೆ ನಡೆಸಲು ಮುಂದಾದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಎಲ್ಲಾ ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನೀಕರು ಇಂತಹ ಚಟುವಟಿಕೆಗಳು ಕಂಡು ಬಂದರೆ ತಕ್ಷಣ ಸನಿಹದ ಇಲಾಖೆಗೆ ಅಥವಾ ನೇರವಾಗಿ ತಮ್ಮನ್ನು ಸಂಪರ್ಕಿಸಿ ಮಾಹಿತಿ ಅಥವಾ ದೂರು ನೀಡಬಹುದು.
.ವಿನಾಯಕ ಪಾಟೀಲ್‌, ಎಸ್ಪಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next