ನ್ಯೂಯಾರ್ಕ್: ಪ್ರವಾಸಿಗರಿಗೆ ಅತ್ಯಂತ ಅಪಾಯಕಾರಿ ನಗರಗಳ ಪಟ್ಟಿಯನ್ನು ಫೂರ್ಬ್ಸ್ ಅಡ್ವೈಸರ್ ಲಿಸ್ಟ್ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ನೆರೆಯ ದೇಶ ಪಾಕಿಸ್ತಾನದ ಕರಾಚಿ ನಗರವು ಎರಡನೇ ಸ್ಥಾನ ಪಡೆದಿದೆ.
ವೆನುಜುವೆಲಾದ ಕ್ಯಾರಕಾಸ್ ನಗರವು ಮೊದಲ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಮಯಾನ್ಮಾರ್ ನ ಯಾಂಗಾನ್ ನಗರವಿದೆ.
ಅಪರಾಧ, ಹಿಂಸೆ, ಭಯೋತ್ಪಾದಕ ಬೆದರಿಕೆಗಳು, ನೈಸರ್ಗಿಕ ವಿಪತ್ತುಗಳು ಮತ್ತು ಆರ್ಥಿಕ ದುರ್ಬಲತೆಗಳಿಂದ ಉಂಟಾಗುವ ಅಪಾಯವನ್ನು ಪ್ರತಿಬಿಂಬಿಸುವ ನಗರವು ಅತಿ ಹೆಚ್ಚು ವೈಯಕ್ತಿಕ ಭದ್ರತಾ ಅಪಾಯವನ್ನು ಹೊಂದಿದೆ ಎಂದು ವರದಿ ಹೇಳಿದೆ.
ಫೂರ್ಬ್ಸ್ ಅಡ್ವೈಸರ್ ಲಿಸ್ಟ್ ಅಪಾಯದ ಮಟ್ಟವನ್ನು 100 ಅಂಕಗಳಲ್ಲಿ ನೀಡಿದೆ. ಅತ್ಯಂತ ಅಪಾಯಕಾರಿ ನಗರ ಕ್ಯಾರಕಾಸ್ 100 ಅಂಕ ಪಡೆದಿದ್ದರೆ, ಕರಾಚಿ 93.12 ಅಂಕ ಮತ್ತು ಯಾಂಗಾನ್ 91.69 ಅಪಾಯಕಾರಿ ಅಂಕ ಪಡೆದಿದೆ.
ಡಾನ್ ವರದಿ ಮಾಡಿದಂತೆ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್‌ನಿಂದ ಕರಾಚಿಯು ಎರಡನೇ ಅತ್ಯಂತ ಕೆಟ್ಟ ಪ್ರಯಾಣ ಸುರಕ್ಷತೆಯ ರೇಟಿಂಗ್ ಅನ್ನು ಹೊಂದಿದೆ ಎಂದು ಅದು ಸೇರಿಸಿದೆ.
ಇದಲ್ಲದೆ, ಕರಾಚಿಯು ನಾಲ್ಕನೇ ಅತಿ ಹೆಚ್ಚು ಮೂಲಸೌಕರ್ಯ ಭದ್ರತಾ ಅಪಾಯವನ್ನು ಹೊಂದಿದೆ, ಇದು ನಗರದ ಮೂಲಸೌಕರ್ಯಗಳ ಲಭ್ಯತೆ ಮತ್ತು ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ವರದಿ ತಿಳಿಸಿದೆ.
ಪ್ರವಾಸಿಗರಿಗೆ ಹೆಚ್ಚು ಅಪಾಯಕಾರಿ ನಗರಗಳನ್ನು ಬಹಿರಂಗಪಡಿಸಲು, ಫೋರ್ಬ್ಸ್ ಏಳು ಪ್ರಮುಖ ಮೆಟ್ರಿಕ್ ಗಳಲ್ಲಿ 60 ಅಂತರರಾಷ್ಟ್ರೀಯ ನಗರಗಳನ್ನು ಹೋಲಿಸಿದೆ.
ಕರಾಚಿಯು “ವಾಸಯೋಗ್ಯವಲ್ಲದ” ನಗರಗಳ ಪಟ್ಟಿಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದೆ.
ಎಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್ ವರದಿಯ ಪ್ರಕಾರ ಕರಾಚಿ ನಗರವು 2017ರಲ್ಲಿ ಕಡಿಮೆ ಸುರಕ್ಷತಾ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
ಎಕನಾಮಿಸ್ಟ್ ಗ್ರೂಪ್ ನ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗವು ಕರಾಚಿಯನ್ನು ವಿಶ್ವದ ಅಗ್ರ ಐದು “ಕನಿಷ್ಠ ವಾಸಯೋಗ್ಯ” ನಗರ ಕೇಂದ್ರಗಳಲ್ಲಿ ಸ್ಥಾನ ಪಡೆದಿದೆ.